ಶಿವಮೊಗ್ಗ ಬಸ್ ನಿಲ್ದಾಣ ಸರ್ಕಲ್ : ಬೆಂಗಳೂರು ಮೆಜೆಸ್ಟಿಕ್ ಮಾದರಿ ಅಭಿವೃದ್ದಿ ನೆನೆಗುದಿಗೆ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜು. 2: ಶಿವಮೊಗ್ಗ ನಗರದಲ್ಲಿಅತೀ ಹೆಚ್ಚುಜನನಿಬಿಡ – ವಾಹನ ಸಂಚಾರ ದಟ್ಟಣೆಯಿರುವ, ಖಾಸಗಿ ಬಸ್ ನಿಲ್ದಾಣ ವೃತ್ತ (ಅಶೋಕ ಸರ್ಕಲ್) ವನ್ನು #ashoka_circle, ಬೆಂಗಳೂರಿನ ಮೆಜೆಸ್ಟಿಕ್ (bengaluru majestic) ಮಾದರಿಯಲ್ಲಿ ಅಭಿವೃದ್ದಿಗೊಳಿಸುವ ಕೇಂದ್ರ – ರಾಜ್ಯ ಸರ್ಕಾರ ಸಹಭಾಗಿತ್ವದ ಯೋಜನೆ ಸಂಪೂರ್ಣ ನೆನೆಗುದಿಗೆ ಬಿದ್ದಿದೆ!
ಹೌದು. ಏಳೆಂಟು ವರ್ಷಗಳ ಹಿಂದೆಯೇ ಸದರಿ ಯೋಜನೆ ರೂಪಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಇಲಾಖೆ (national highway) ಮೂಲಕ ಅನುಷ್ಠಾನಗೊಳಿಸುವ ಚಿಂತನೆ ನಡೆಸಲಾಗಿತ್ತು. ಆದರೆ ತದನಂತರ ಸದರಿ ಯೋಜನೆಯ ಅನುಷ್ಠಾನದತ್ತ ಆಡಳಿತದ ಚಿತ್ತ ಹರಿಯಲಿಲ್ಲ. ಇದರಿಂದ ‘ಮೆಜೆಸ್ಟಿಕ್ ಮಾದರಿ’ ಅಭಿವೃದ್ದಿ ಕಾರ್ಯಗತಗೊಳ್ಳದಂತಾಗಿದೆ.
ಸಂಚಾರ ದಟ್ಟಣೆ : ಶಿವಮೊಗ್ಗದ (shimoga) ಅಶೋಕ ವೃತ್ತವು ನಗರದ ಹೃದಯ ಭಾಗವಾಗಿದೆ. ಎರಡು ರಾಷ್ಟ್ರೀಯ ಹೆದ್ಧಾರಿಗಳನ್ನು ಸಂಪರ್ಕಿಸುತ್ತದೆ. ವೃತ್ತಕ್ಕೆ ಹೊಂದಿಕೊಂಡಂತೆ ಸರ್ಕಾರಿ (ksrtc), ಖಾಸಗಿ (private) ಹಾಗೂ ಸಿಟಿ ಬಸ್ (city bus) ನಿಲ್ದಾಣಗಳಿವೆ. ಪ್ರತಿನಿತ್ಯ ಸಾವಿರಾರು ಜನರು, ವಾಹನಗಳು ಸಂಚರಿಸುತ್ತವೆ. ನಗರದಲ್ಲಿಯೇ ಅತ್ಯದಿಕ ಟ್ರಾಫಿಕ್ (traffic) ಇದೆ.
ಬಸ್ ನಿಲ್ದಾಣಗಳಿಗೆ ತೆರಳಲು ಪ್ರಯಾಣಿಕರು ಹರಸಾಹಸ ಪಡುವಂತಹ ಸ್ಥಿತಿಯಿದೆ. ಈ ನಡುವೆ ವೃತ್ತದಲ್ಲಿ ಸಿಗ್ನಲ್ ಲೈಟ್ ಗಳ (signal light) ಅಳವಡಿಕೆ ಮಾಡಲಾಗಿದೆ. ಆದಾಗ್ಯೂ ಸುಗಮ ಜನ – ವಾಹನ ಸಂಚಾರ ದುಸ್ತರವಾಗಿದೆ ಎಂದು ಸ್ಥಳೀಯ ವರ್ತಕರು, ಆಟೋ ಚಾಲಕರು, ಪ್ರಯಾಣಿಕರು ಅಭಿಪ್ರಾಯಪಡುತ್ತಾರೆ.
ಸದರಿ ವೃತ್ತದಲ್ಲಿ ಸುಗಮ ಜನ – ವಾಹನ ಸಂಚಾರಕ್ಕೆ ಅನುಕೂಲವಾಗುವ ಉದ್ದೇಶದಿಂದ ಹಾಗೂ ಭವಿಷ್ಯದ ನಗರದ ಬೆಳವಣಿಗೆ ಗಮನದಲ್ಲಿಟ್ಟುಕೊಂಡು, ಕಳೆದ ಏಳೆಂಟು ವರ್ಷಗಳ ಹಿಂದೆಯೇ ಬೆಂಗಳೂರಿನ ಮೆಜೆಸ್ಟಿಕ್ ಮಾದರಿಯಲ್ಲಿ ಅಶೋಕ ವೃತ್ತ ಅಭಿವೃದ್ದಿಗೊಳಿಸುವ ಮಹತ್ತರ ಯೋಜನೆಯೊಂದನ್ನು ಸಿದ್ದಪಡಿಸಲಾಗಿತ್ತು.
ಸದರಿ ವೃತ್ತದ ಮೂಲಕ ಸರ್ಕಾರಿ, ಖಾಸಗಿ ಹಾಗೂ ಸಿಟಿ ಬಸ್ ನಿಲ್ದಾಣಗಳಿಗೆ ಫ್ಲೈ ಓವರ್ (flyover), ಅಂಡರ್ ಪಾಸ್ ಗಳ (underpass) ಮೂಲಕ ಸಂಪರ್ಕ ಕಲ್ಪಿಸುವುದು ಹಾಗೂ ಪರ ಊರುಗಳಿಗೆ ತೆರಳುವ ವಾಹನಗಳ ಸಂಚಾರಕ್ಕೆ ಪ್ರತ್ಯೇಕ ಫ್ಲೈ ಓವರ್ ಸೇರಿದಂತೆ ಅತ್ಯಾಧುನಿಕ ರೀತಿಯಲ್ಲಿ ವೃತ್ತ ಅಭಿವೃದ್ದಿಗೊಳಿಸುವ ಚಿಂತನೆ ನಡೆಸಲಾಗಿತ್ತು.
ಆದರೆ ವರ್ಷಗಳೇ ಉರುಳಿದರೂ ಮೆಜೆಸ್ಟಿಕ್ ಮಾದರಿಯಲ್ಲಿ, ವೃತ್ತ ಅಭಿವೃದ್ದಿ ಯೋಜನೆ ಕಾರ್ಯಗತಗೊಳ್ಳಲಿಲ್ಲ. ಈ ನಿಟ್ಟಿನಲ್ಲಿ ಆರಂಭದಲ್ಲಿ ಜನಪ್ರತಿನಿಧಿಗಳು – ಅಧಿಕಾರಿಗಳು ತೋರಿದ ಉತ್ಸಾಹ ಕ್ರಮೇಣ ಕಡಿಮೆಯಾಯಿತು. ಇದೀಗ ಆ ರೀತಿಯ ಯೋಜನೆ ರೂಪಿಸಿದ್ದ ವಿಷಯವೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಇಲ್ಲವಾಗಿದೆ!
ಶಿವಮೊಗ್ಗ ನಗರಕ್ಕೆ ಸಂಬಂಧಿಸಿದಂತೆ, ರಸ್ತೆ ಸಂಪರ್ಕ ವಿಷಯದಲ್ಲಿ ಸಂಸದ ಬಿ.ವೈ.ರಾಘವೇಂದ್ರ (mp b y raghavendra) ಅವರು ಕಳೆದೊಂದು ದಶಕದಲ್ಲಿ ಸಾಕಷ್ಟು ಶ್ರಮ ಹಾಕಿದ್ದಾರೆ. ಹತ್ತು ಹಲವು ಯೋಜನೆ ಕಾರ್ಯಗತಗೊಳಿಸಿದ್ದಾರೆ. ಅಶೋಕ ವೃತ್ತ ಅಭಿವೃದ್ದಿ ನಿಟ್ಟಿನಲ್ಲಿಯೂ ಆದ್ಯ ಗಮನಹರಿಸಬೇಕಾಗಿದೆ ಎಂಬುವುದು ಸ್ಥಳೀಯ ನಾಗರೀಕರ ಅಭಿಪ್ರಾಯವಾಗಿದೆ.
