
ಅಂತಾರಾಷ್ಟ್ರೀಯ ನ್ಯಾಯ ದಿನ : ಭಾರತದ ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ತಿಳಿಯೋಣ
ವಿಶೇಷ ಲೇಖನ : • ರಘು ಆರ್, ಅಪ್ರೆಂಟಿಸ್, ವಾರ್ತಾ ಇಲಾಖೆ, ಶಿವಮೊಗ್ಗ, mob :7411515737

ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (International Criminal Court) ರಚನೆಗೆ ಕಾರಣವಾದ ರೋಮ್ ಶಾಸನ ಒಪ್ಪಂದದ ಸವಿ ನೆನಪಿಗಾಗಿ ‘ಅಂತಾರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನ’ ವನ್ನು (world day for international justice) ಪ್ರತಿವರ್ಷ ಜುಲೈ 17 ರಂದು ಆಚರಿಸಲಾಗುತ್ತದೆ. ಈ ದಿನಕ್ಕೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯ ದಿನ ಅಥವಾ ಅಂತಾರಾಷ್ಟ್ರೀಯ ನ್ಯಾಯ ದಿನ ಎಂದು ಕರೆಯಲಾಗುತ್ತದೆ.
ಆಧುನಿಕತೆಗೆ ಹೊಂದಿಕೊಳ್ಳುವಂತೆ ದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಬದಲಾವಣೆಯನ್ನು ಮಾಡಲಾಗುತ್ತಿದ್ದು ಭಾರತ ದೇಶದ ಕಾನೂನುಗಳಲ್ಲೂ (laws) ಕೂಡ ಸಾಕಷ್ಟು ಬದಲಾವಣೆಯನ್ನು ಮಾಡಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಕಾನೂನು ಜಾರಿಗೆ ಬಂದಿದೆ. ಅಂತರಾಷ್ಟ್ರೀಯ ನ್ಯಾಯ ದಿನದ ಪ್ರಯುಕ್ತ ಹೊಸ ಕಾನೂನುಗಳ (new laws) ಕುರಿತು ಒಂದಿಷ್ಟು ಮಾಹಿತಿಯನ್ನು ತಿಳಿದಿಕೊಳ್ಳುವುದು ಅವಶ್ಯಕವಾಗಿದೆ.
ಬ್ರಿಟಿಷ್ (british) ಕಾಲದಲ್ಲಿ ಜಾರಿಗೆ ಮಾಡಲಾಗಿದ್ದ ಕ್ರಿಮಿನಲ್ ಕಾನೂನುಗಳನ್ನು (criminal laws) ಕೇಂದ್ರ ಸರ್ಕಾರ (central govt) ತಿದ್ದುಪಡಿ ಮಾಡಿದೆ. ಭಾರತೀಯ ದಂಡ ಸಂಹಿತೆ -1860 (ipc), ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (crpc) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು -1872 (evidence act) ತಿದ್ದುಪಡಿಗೆ ಒಳಪಡಿಸಲಾಗಿದ್ದು ಮೂರು ಕ್ರಿಮಿನಲ್ ಕಾನೂನುಗಳನ್ನು 2023 ರ ಡಿಸೆಂಬರ್‍ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. ಅದೇ ತಿಂಗಳು ರಾಷ್ಟ್ರಪತಿಗಳ (president of india) ಒಪ್ಪಿಗೆ ಪಡೆಯಲಾಯಿತು. ಹೊಸ ಕಾನೂನುಗಳು 2024 ರ ಜುಲೈ 1 ರಿಂದ ದೇಶಾದ್ಯಂತ ಜಾರಿಗೆ ಬಂದಿರುತ್ತದೆ ಎಂದು ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ.
ಹೊಸ ಕ್ರಿಮಿನಲ್ ಕಾನೂನುಗಳು : ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತಾ (Bharatiya Nyaya Sanhita 2023), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (Bharatiya Nagarik Suraksha Sanhita 2023) ಮತ್ತು ಭಾರತೀಯ ಸಾಕ್ಷಿ ಕಾಯಿದೆಯು (Bharatiya Sakshya Adhiniyam 2023) ಜುಲೈ 1 ರಿಂದ ಜಾರಿಗೆ ತರಲಾಗಿದ್ದು ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ (indian penal code), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (Criminal Procedure Code) ಮತ್ತು 1872ರ ಭಾರತೀಯ ಸಾಕ್ಷಿ ಕಾಯಿದೆಗೆ (evidence act) ತಿದ್ದುಪಡಿ ಮಾಡಿ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆ ಎಂದು ಬದಲಿಸಲಾಗಿದೆ.
ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (ಬಿಪಿಆರ್‍ಡಿ) ಈ ಹೊಸ ಕಾನೂನುಗಳಿಗೆ ತರಬೇತಿಯನ್ನು ನೀಡಿದೆ. ನ್ಯಾಯಾಂಗ ಅಕಾಡೆಮಿಗಳು, ನ್ಯಾಯಾಧೀಶರಿಗೂ ನ್ಯಾಯಾಂಗ ಇಲಾಖೆಯಿಂದ (Department of Justice) ತರಬೇತಿ ನೀಡುತ್ತಿದ್ದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳು (National Law Universities) ಸಹ ತರಬೇತಿಯನ್ನು ನೀಡುತ್ತಿವೆ.
ಭಯೋತ್ಪಾದಕರ ಆಸ್ತಿ ಮುಟ್ಟುಗೋಲು : ಭಯೋತ್ಪಾದನೆಯನ್ನು (Terrorism) ಮೊದಲ ಬಾರಿಗೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 113 (1) ಅಡಿಯಲ್ಲಿ ಶಿಕ್ಷಾರ್ಹ ಅಪರಾಧ (punishable offence) ಎಂದು ವ್ಯಾಖ್ಯಾನಿಸಲಾಗಿದೆ. ಭಾರತದಲ್ಲಿ ಅಥವಾ ಯಾವುದೇ ವಿದೇಶದಲ್ಲಿ ಭಾರತದ ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಯಾವುದೇ ಕೃತ್ಯವನ್ನು ಎಸಗುವ ವ್ಯಕ್ತಿಯನ್ನು ಈ ಕಾನೂನಿನಲ್ಲಿ ಭಯೋತ್ಪಾದಕ ಎಂದು ವ್ಯಾಖ್ಯಾನಿಸಲಾಗುತ್ತದೆ.
ಸಾಮಾನ್ಯ ಸಾರ್ವಜನಿಕರನ್ನು ಅಥವಾ ಅದರ ಒಂದು ಭಾಗವನ್ನು ಬೆದರಿಸಲು ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಭಯೋತ್ಪಾದಕರ ಆಸ್ತಿಯನ್ನು ಮುಟ್ಟುಗೋಲು (confiscation) ಹಾಕಿಕೊಳ್ಳುವ ಅವಕಾಶವೂ ಈ ಕಾನೂನಿನ ಅಡಿಯಲ್ಲಿ ಇದೆ. ಭಯೋತ್ಪಾದನೆಗೆ ಸಂಬಂಧಿಸಿದ ಕೃತ್ಯಗಳನ್ನು ಮರಣದಂಡನೆ (death penalty) ಅಥವಾ ಪೆರೋಲ್ ಇಲ್ಲದೆ ಜೀವಾವಧಿ ಶಿಕ್ಷೆಗೆ (Life imprisonment) ಒಳಪಡಿಸಲಾಗಿದೆ. ‘ಆಸ್ತಿಗೆ ಹಾನಿ, ಅಥವಾ ಕರೆನ್ಸಿಯ ತಯಾರಿಕೆ ಅಥವಾ ಕಳ್ಳಸಾಗಣೆಯನ್ನು ಇದು ಒಳಗೊಂಡಿದೆ.
ದೇಶದ್ರೋಹ ನಿಬಂಧನೆ ರದ್ದು: ಭಾರತೀಯ ದಂಡ ಸಂಹಿತೆ 1860 ರ ದೇಶ ದ್ರೋಹದ ನಿಬಂಧನೆಗಳನ್ನು ರದ್ದುಗೊಳಿಸಲಾಗಿದೆ. ಇದನ್ನು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152 ಕ್ಕೆ ಬದಲಾಯಿಸಲಾಗಿದೆ. ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಕಾರ್ಯಗಳ ಮೇಲೆ ಕೇಂದ್ರೀಕರಿಸುವ ವಿಭಾಗಗಳನ್ನು ಪರಿಚಯಿಸಲಾಗಿದೆ.
ಅತ್ಯಾಚಾರಿಗಳಿಗೆ ಮರಣ ದಂಡನೆ : ಭಾರತೀಯ ನ್ಯಾಯ ಸಂಹಿತೆ ಲೈಂಗಿಕ ಅಪರಾಧಗಳನ್ನು (Sexual Offenses) ಪರಿಹರಿಸಲು ಮಹಿಳೆ ಮತ್ತು ಮಕ್ಕಳ ವಿರುದ್ಧದ ಅಪರಾಧಗಳು ಎಂಬ ಅಧ್ಯಾಯವನ್ನು ಪರಿಚಯಿಸಿದೆ. 18 ವರ್ಷದೊಳಗಿನ ಬಾಲಕಿಯರ ಅತ್ಯಾಚಾರಕ್ಕೆ (rape cases) ಸಂಬಂಧಿಸಿದ ನಿಬಂಧನೆಗಳಿಗೆ ಮಾರ್ಪಾಡುಗಳನ್ನು ಶಿಫಾರಸು ಮಾಡಲಾಗಿದ್ದು ಅಪ್ರಾಪ್ತ ವಯಸ್ಸಿನ ಬಾಲಕಿಯ (minor girl) ಸಾಮೂಹಿಕ ಅತ್ಯಾಚಾರಕ್ಕೆ (gang rape case) ಸಂಬಂಧಿಸಿದ ನಿಬಂಧನೆಯನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ – posco)ಗೆ ಅನುಗುಣವಾಗಿ ಮಾಡಲಾಗಿದೆ. 18 ವರ್ಷದೊಳಗಿನ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಗೆ ಅವಕಾಶ ಕಲ್ಪಿಸಲಾಗಿದೆ.
ಅತ್ಯಾಚಾರ ಎಸಗುವವರಿಗೆ ಕಾನೂನಿನ ಪ್ರಕಾರ 10 ವರ್ಷಗಳಿಗಿಂತ ಕಡಿಮೆಯಿಲ್ಲದ ಕಠಿಣ ಜೈಲು ಶಿಕ್ಷೆಯನ್ನು (Rigorous imprisonment) ವಿಧಿಸಲಾಗುತ್ತದೆ. ಆದರೆ ಇದು ಜೀವಾವಧಿಯವರೆಗೆ ಜೈಲು ಶಿಕ್ಷೆಗೆ ವಿಸ್ತರಿಸಬಹುದು ಮತ್ತು ದಂಡಕ್ಕೆ ಸಹ ಹೊಣೆಗಾರರಾಗಬೇಕಾಗುತ್ತದೆ. ಸಾಮೂಹಿಕ ಅತ್ಯಾಚಾರಕ್ಕೆ 20 ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಗೆ ಅವಕಾಶವಿದೆ. ಮದುವೆ, ಉದ್ಯೋಗ, ಬಡ್ತಿಯ ನೆಪದಲ್ಲಿ ಅಥವಾ ಯಾವುದೇ ಆಮಿಷದ ಮೂಲಕ ಮಹಿಳೆಯರ ಲೈಂಗಿಕ ಶೋಷಣೆಯನ್ನು (Sexual exploitation of women) ಅಪರಾಧವೆಂದು ಪರಿಗಣಿಸಲಾಗುತ್ತದೆ.
ಡಿಜಿಟಲ್ ಸಾಕ್ಷ್ಯ ಪರಿಗಣನೆ : ಅನೇಕ ಪ್ರಕರಣಗಳಲ್ಲಿ ಡಿಜಿಟಲ್ ಸಾಕ್ಷ್ಯಗಳನ್ನು (Digital evidence) ನ್ಯಾಯಾಲಯವು ಪರಿಗಣಿಸುತ್ತಿರಲಿಲ್ಲ. ಬದಲಾದ ಕಾನೂನಿನಲ್ಲಿ ಡಿಜಿಟಲ್ ಸಾಕ್ಷ್ಯಗಳನ್ನು ಕೂಡ ಪರಿಗಣಿಸುವ ನಿಯಮಗಳನ್ನು ರೂಪಿಸಲಾಗಿದೆ. ಸಿಸಿಟಿವಿ (cctv), ಕಾಲ್ ರೆಕಾರ್ಡ್ (call record), ವಿಡಿಯೋ (video) ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ (social media) ಪ್ರಕಟವಾದ ಮಾಹಿತಿಗಳು ಹೀಗೆ ಡಿಜಿಟಲ್ ಸಾಕ್ಷ್ಯಗಳಿಗೂ ಜೀವ ನೀಡಿಲಾಗಿದ್ದು ಸೈಬರ್ ಪ್ರಕರಣಗಳಿಗೆ ಇದು ಹೆಚ್ಚು ಸಹಕಾರಿಯಾಲಿದೆ.
ದೇಶ ವಿರೋಧಿ ಕೃತ್ಯಗಳಿಗೆ ಜೀವಾವಧಿ ಶಿಕ್ಷೆ: ಸಶಸ್ತ್ರ ದಂಗೆ (Armed rebellion) ಅಥವಾ ವಿಧ್ವಂಸಕ ಚಟುವಟಿಕೆಗಳಿಗೆ (destructive activity) ಸಂಬಂಧಿಸಿದ ಕೃತ್ಯಗಳ ಸಂದರ್ಭದಲ್ಲಿ ಕಾನೂನುಗಳು ಕಠಿಣ ಶಿಕ್ಷೆಯನ್ನು ಒದಗಿಸುತ್ತವೆ. ಯಾರಾದರೂ ಉದ್ದೇಶಪೂರ್ವಕವಾಗಿ ಪದಗಳಲ್ಲಿ ಮಾತನಾಡುವ ಅಥವಾ ಬರೆಯುವ ಅಥವಾ ಚಿಹ್ನೆಗಳ ಮೂಲಕ, ಅಥವಾ ಗೋಚರ ಪ್ರಾತಿನಿಧ್ಯದಿಂದ, ಅಥವಾ ವಿದ್ಯುನ್ಮಾನ ಸಂವಹನದ ಮೂಲಕ ಅಥವಾ ಹಣಕಾಸಿನ ಅರ್ಥದ ಬಳಕೆಯಿಂದ ಅಥವಾ ಬೇರೆ ಬೇರೆ ಅಥವಾ ಸಶಸ್ತ್ರ ದಂಗೆ ಅಥವಾ ವಿಧ್ವಂಸಕವನ್ನು ಪ್ರಚೋದಿಸಲು ಪ್ರಯತ್ನಿಸಿದರೆ ಕಠಿಣ ಶಿಕ್ಷೆ ಕಾದಿದೆ.
ಅಕ್ರಮ ಚಟುವಟಿಕೆಗಳು, ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಗಳ (separatist activities) ಭಾವನೆಗಳನ್ನು ಪ್ರೋತ್ಸಾಹಿಸುವುದು ಅಥವಾ ಭಾರತದ ಸಾರ್ವಭೌಮತ್ವ ಅಥವಾ ಏಕತೆ (Sovereignty or unity) ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಅಥವಾ ಅಂತಹ ಯಾವುದೇ ಕೃತ್ಯದಲ್ಲಿ ತೊಡಗಿದರೆ ಅಥವಾ ಎಸಗಿದರೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಮತ್ತು ದಂಡಕ್ಕೆ ಗುರಿಯಾಗಬಹುದು.
ಮೊದಲ ಬಾರಿಗೆ ಸಂಘಟಿತ ಅಪರಾಧದ ವ್ಯಾಖ್ಯಾನ : ಸಂಘಟಿತ ಅಪರಾಧಕ್ಕೆ (organized crime) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸಲಾಗಿದೆ ಮತ್ತು ಭಾರತೀಯ ನ್ಯಾಯ ಸಂಹಿತಾ 111 (1) ಅಡಿಯಲ್ಲಿ ಪದವನ್ನು ಮೊದಲ ಬಾರಿಗೆ ವ್ಯಾಖ್ಯಾನಿಸಲಾಗಿದೆ. ಸಶಸ್ತ್ರ ದಂಗೆ, ವಿಧ್ವಂಸಕ ಕಾರ್ಯಾಚರಣೆಗಳು, ಪ್ರತ್ಯೇಕತಾವಾದಿ ಚಟುವಟಿಕೆಗಳು ಮತ್ತು ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಯಾವುದೇ ಕೃತ್ಯವನ್ನು ಒಳಗೊಂಡಿದೆ. ಶಿಕ್ಷೆಯು ವಿವಿಧ ಅಪರಾಧಗಳಿಗೆ ಮರಣದಂಡನೆ, ಜೀವಾವಧಿ ಶಿಕ್ಷೆ, ದಂಡ ಅಥವಾ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಒಳಗೊಂಡಿರುತ್ತದೆ.
ಗುಂಪು ಹತ್ಯೆಗೆ ಶಿಕ್ಷೆ ಹೆಚ್ಚಳ : ಮೊದಲ ಬಾರಿಗೆ ಮೂಲ ಮಸೂದೆಯು ಗುಂಪು ಹತ್ಯೆ ಮತ್ತು ದ್ವೇಷದ ಅಪರಾಧಗಳನ್ನು (Gang killings and hate crimes) ಪ್ರತ್ಯೇಕ ರೀತಿಯ ಕೊಲೆಗಳೆಂದು ವರ್ಗೀಕರಿಸಿದೆ. ಈ ಕಾಯಿದೆಯು ಗುಂಪು ಹತ್ಯೆಯಂತಹ ಅಪರಾಧಗಳಿಗೆ ಗರಿಷ್ಠ ಮರಣದಂಡನೆಯನ್ನು ನೀಡಲು ಬಯಸುತ್ತದೆ.
ತ್ವರಿತ ವಿಚಾರಣೆ ಮತ್ತು ನ್ಯಾಯ : ಹೊಸ ಕಾನೂನುಗಳ ಪ್ರಕಾರ 90 ದಿನಗಳಲ್ಲಿ ಆರೋಪಪಟ್ಟಿ (charge sheet) ಸಲ್ಲಿಸಬೇಕಾಗುತ್ತದೆ ಮತ್ತು ಪರಿಸ್ಥಿತಿಯನ್ನು ನೋಡಿ ನ್ಯಾಯಾಲಯವು ಇನ್ನೂ 90 ದಿನಗಳವರೆಗೆ ಅನುಮತಿ ನೀಡಬಹುದು. ತನಿಖೆಯನ್ನು 180 ದಿನಗಳಲ್ಲಿ ಮುಗಿಸಿ ವಿಚಾರಣೆಗೆ ಕಳುಹಿಸಬೇಕು. ಪೊಲೀಸರು 90 ದಿನಗಳಲ್ಲಿ ಪ್ರಕರಣದ ಸ್ಥಿತಿಯನ್ನು ಅಪ್‍ಡೇಟ್ ಮಾಡಬೇಕಾಗುತ್ತದೆ. ವಿಚಾರಣೆಯ ಅನಂತರ 30 ದಿನಗಳಲ್ಲಿ ತೀರ್ಪು ನೀಡಬೇಕಾಗುತ್ತದೆ. ಒಂದು ವಾರದೊಳಗೆ ಆನ್‍ಲೈನ್‍ನಲ್ಲಿ ಅಪ್‍ಲೋಡ್ (online upload) ಮಾಡಬೇಕು.
ಮೂರು ವರ್ಷಕ್ಕಿಂತ ಕಡಿಮೆ ಜೈಲು ಶಿಕ್ಷೆಗೆ ಒಳಪಡುವ ಪ್ರಕರಣಗಳಿಗೆ (For cases punishable with imprisonment of less than three years) ಸಾಮಾನ್ಯ ವಿಚಾರಣೆ ಸಾಕಾಗುತ್ತದೆ. ಇದರಿಂದ ಸೆಷನ್ ಕೋರ್ಟ್‍ಗಳಲ್ಲಿನ (Sessions Courts) ಪ್ರಕರಣಗಳು ಶೇ. 40 ರಷ್ಟು ಕಡಿಮೆಯಾಗಲಿವೆ. ಶೂನ್ಯ ಎಫ್‍ಐಆರ್ (fir) ದಾಖಲಿಸುವ ಪದ್ಧತಿಯನ್ನು ಸಾಂಸ್ಥಿಕಗೊಳಿಸಲಾಗಿದೆ. ಎಲ್ಲೇ ಘಟನೆ ನಡೆದರೂ ಎಲ್ಲಿ ಬೇಕಾದರೂ ಎಫ್‍ಐಆರ್ ದಾಖಲಿಸಬಹುದು.
ಸಂತ್ರಸ್ತರ ಮಾಹಿತಿ ಹಕ್ಕನ್ನು ಬಲಪಡಿಸಲಾಗಿದೆ. ಎಫ್‍ಐಆರ್‍ನ ಉಚಿತ ಪ್ರತಿಯನ್ನು ಪಡೆಯುವ ಹಕ್ಕು ಸಂತ್ರಸ್ತರಿಗೆ ಇದೆ. 90 ದಿನಗಳಲ್ಲಿ ತನಿಖೆಯ ಸ್ಥಿತಿಯನ್ನು ಸಂತ್ರಸ್ತರಿಗೆ ತಿಳಿಸಲು ಅವಕಾಶವಿದೆ. ಹೊಸ ಸಂಹಿತೆಯು ಕ್ರಿಮಿನಲ್ ಪ್ರಕರಣಗಳಲ್ಲಿ ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುತ್ತದೆ.
ಇತರ ನಿಬಂಧನೆಗಳು : ಹೊಸ ಕಾನೂನಿನ ಪ್ರಕಾರ ಆರ್ಥಿಕ ಅಪರಾಧಗಳನ್ನು (Financial crime) ಹೊರತುಪಡಿಸಿ ಘೋರ ಅಪರಾಧಿಗಳಿಗೆ ಮಾತ್ರ ಕೈಕೋಳವನ್ನು (handcuffs) ಬಳಸಲಾಗುವುದು. ಅಂಗವೈಕಲ್ಯ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಅಪರಾಧ ಕಾರ್ಯಗಳಿಗೆ ಕಠಿಣ ದಂಡವನ್ನು ಪರಿಚಯಿಸಲಾಗಿದೆ. ಶಿಕ್ಷೆ ಮನ್ನಾಗೊಳಿಸಲು ಕಾನೂನುಗಳಲ್ಲಿ ಹೊಸ ನಿಬಂಧನೆಯನ್ನು ಮಾಡಲಾಗಿದೆ. ಮರಣದಂಡನೆಗಳನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬಹುದು. ಏಳು ವರ್ಷಗಳ ಒಳಗಿನ ಸೆರೆವಾಸ ಮತ್ತು ಜೀವಾವಧಿ ಶಿಕ್ಷೆಯನ್ನು ಮಾತ್ರ ಕ್ಷಮಿಸಬಹುದು.