What did the Minister of Forest Department say about the construction of 'elephant Vihara Dham' in Bhadra Sanctuary? ಭದ್ರಾ ಅಭಯಾರಣ್ಯದಲ್ಲಿ ‘ಆನೆ ವಿಹಾರ ಧಾಮ’ ನಿರ್ಮಾಣ ಕುರಿತಂತೆ ಅರಣ್ಯ ಇಲಾಖೆ ಸಚಿವರು ಹೇಳಿದ್ದೇನು?

shimoga | ಭದ್ರಾ ಅಭಯಾರಣ್ಯದಲ್ಲಿ ‘ಆನೆ ವಿಹಾರ ಧಾಮ’ : ಅರಣ್ಯ ಸಚಿವರು ಹೇಳಿದ್ದೇನು?

ಶಿವಮೊಗ್ಗ (shivamogga), ಅ. 4:  ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಿಸಲು, ಭದ್ರಾ ಅಭಯಾರಣ್ಯದಲ್ಲಿಆನೆ ಶಿಬಿರ ಸ್ಥಾಪಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಘೋಷಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ, ಭದ್ರಾ ಹುಲಿ ಸಂರಕ್ಷಿತ ಪ್ರದೇಶ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದ್ದು, ಆನೆಗಳಿಂದ ಹೆಚ್ಚಿನ ಜೀವಹಾನಿ ಮತ್ತು ಬೆಳೆ ಹಾನಿ ಸಂಭವಿಸುತ್ತಿದೆ. ಇದನ್ನು ನಿಯಂತ್ರಿಸಲು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆನೆ ವಿಹಾರ ಧಾಮ ಅಂದರೆ ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ವನ್ಯಜೀವಿ ಪರಿಪಾಲಕರಿಗೆ ಸೂಚನೆ ನೀಡಿರುವುದಾಗಿ ಹೇಳಿದರು.

ಈ ಆನೆ ವಿಹಾರ ಧಾಮದ ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ ಆನೆಗಳಿಗೆ ಇಷ್ಟವಾದ ಬಿದಿರು, ಹಲಸು, ಹುಲ್ಲು ಇತ್ಯಾದಿ ಬೆಳೆಸಲಾಗುವುದು. ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಸೆರೆ ಹಿಡಿದ ಆನೆಗಳನ್ನು ಇಲ್ಲಿ ತಂದು ಬಿಡಲಾಗುವುದು. ಇದರಿಂದ ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಿನ ಹೊರಗೆ ಇರುವ ಆನೆಗಳಿಂದ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಭದ್ರಾ ಹುಲಿ ಅಭಯಾರಣ್ಯ ಒಂದು ಸಾವಿರ ಚದರ ಕಿಲೋ ಮೀಟರ್ ವ್ಯಾಪ್ತಿಯ ವಿಶಾಲವಾದ ಸುಭದ್ರ ಅರಣ್ಯವಾಗಿದೆ. ಇದು ವಿಶ್ವ ಪಾರಂಪರಿಕ ತಾಣವಾದ ಪಶ್ಚಿಮ ಘಟ್ಟಗಳ ಶ್ರೀಮಂತ ಅರಣ್ಯ ಸಂಪತ್ತನ್ನು ಒಳಗೊಂಡಿದೆ. ಕರ್ನಾಟಕ ಹುಲಿ ಸಂಖ್ಯೆಯಲ್ಲಿ ದೇಶದಲ್ಲೇ 2 ನೇ ಸ್ಥಾನದಲ್ಲಿದೆ.

ರಾಜ್ಯದಲ್ಲಿ ಸುಮಾರು 563 ಹುಲಿಗಳಿವೆ. ಅಳಿವಿನಂಚಿನಲ್ಲಿರುವ ಹುಲಿಗಳನ್ನು ಸಂರಕ್ಷಿಸಲು ಅಂದಿನ ಪ್ರಧಾನಿ ಇಂದಿರಾಗಾಂಧೀ ಅವರು 1973ರಲ್ಲಿ ಆರಂಭಿಸಿದ ಹುಲಿ ಯೋಜನೆಗೆ 50 ವರ್ಷ ತುಂಬಿರುವುದೂ ಮತ್ತೊಂದು ಸಂತೋಷದಾಯಕ ವಿಚಾರವಾಗಿದೆ ಎಂದರು.

ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ನಿಸರ್ಗದತ್ತವಾದ ರಮಣೀಯ ಭೂಪ್ರದೇಶವನ್ನು ಒಳಗೊಂಡಿದೆ. ಇಲ್ಲಿ ವರ್ಷದ 365 ದಿನವೂ ನದಿ, ತೊರೆ, ಹಳ್ಳಗಳು ಹರಿಯುತ್ತಲೇ ಇರುತ್ತವೆ.  ಜಲ ಸಮೃದ್ಧಿ, ಸಸ್ಯ ಸಂಕುಲ, ಪ್ರಾಣಿ ಸಂಕುಲ, ಕೀಟ ಸಂಕುಲ ಇರುವ ಈ ಪ್ರದೇಶ ಅತ್ಯಮೂಲ್ಯ ಜೀವವೈಧ್ಯತೆಯಿಂದ ಕೂಡಿದ್ದು, ನೂರಾರು ಪ್ರಬೇಧದ ವನ್ಯಜೀವಿಗಳಿಗೆ ನೆಲೆಯಾಗಿದೆ.

ಈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಿಂದೆ 16 ಗ್ರಾಮಗಳ 736 ಕುಟುಂಬಗಳು ವಾಸವಿದ್ದು, ಆ ಕುಟುಂಬಗಳು ಸ್ವ ಇಚ್ಛೆಯಿಂದ ಭದ್ರಾ ಪುನರ್ವಸತಿ ಯೋಜನೆಯಡಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೆಳಗೂರು ಹಾಗೂ ಮಳಲಿ ಚನ್ನೇನಹಳ್ಳಿ ಗ್ರಾಮಗಳಿಗೆ ಸ್ಥಳಾಂತರಗೊಂಡಿರುತ್ತಾರೆ.

ಇದೊಂದು ಭಾರತದಲ್ಲಿಯೇ ಅತ್ಯಂತ ಯಶಸ್ವಿ ಪುನರ್ವಸತಿ ಯೋಜನೆಯಾಗಿದ್ದು, ಹುಲಿ ಸಂರಕ್ಷಣೆಯಲ್ಲಿ ಜನರ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಇದೇ ಪ್ರಕಾರವಾಗಿ ರಾಜ್ಯದ ಇತರ ಅರಣ್ಯ ಪ್ರದೇಶದ ಒಳಗೆ ವಾಸಿಸುತ್ತಿರುವವರ ಮನವೊಲಿಸಿ ಅವರೆಲ್ಲರಿಗೂ ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

40 ಹುಲಿಗಳ ತಾಣ: ಭದ್ರಾ ಅರಣ್ಯವಾಸಿಗಳ ಪುನರ್ವಸತಿಯಾದ ನಂತರದಲ್ಲಿ ಮಾನವ ವನ್ಯಜೀವಿ ಸಂಘರ್ಷ ಗಣನೀಯವಾಗಿ ಕಡಿಮೆಯಾಗಿದ್ದು, ಆರಂಭದಲ್ಲಿ 8 ಹುಲಿಗಳನ್ನು ಹೊಂದಿದ್ದ ಈ ಸಂರಕ್ಷಿತ ಪ್ರದೇಶದಲ್ಲಿ ಪ್ರಸ್ತುತ 40 ಹುಲಿಗಳಿವೆ. ಇದಕ್ಕೆ ಕಾರಣ ಹುಲಿಗಳ ಆವಾಸಸ್ಥಾನದ ಸಂರಕ್ಷಣೆಯೇ ಆಗಿದೆ. ಇಲ್ಲಿ ದಟ್ಟವಾದ ಕಾನನವಿದ್ದು, ಸುಮಾರು 400 ಕ್ಕೂ ಅಧಿಕ ಆನೆಗಳಿವೆ ಎಂದು ಎಂದರು. 

ಇದೇ ಸಂದರ್ಭದಲ್ಲಿ ಸಚಿವರು ಭದ್ರಾ ರಜತ ಮಹೋತ್ಸವ ಸ್ಮರಣಾರ್ಥ ಅಂಚೆ ಚೀಟಿ, ಅಂತರ್ಜಾಲ ತಾಣ ಮತ್ತು ಕಿರು ಹೊತ್ತಗೆಗಳನ್ನು ಬಿಡುಗಡೆ ಮಾಡಿದರು.

shimoga : Forest, Biology and Environment Minister eshwara B Khandre has announced that an elephant camp will be set up in Bhadra Sanctuary to control the plague of wild elephants in Hassan, Chikkamagaluru and Shimoga regions. He was speaking while inaugurating the Bhadra Tiger Reserve Silver Jubilee Ceremony held at Kuvempu University Auditorium in Shimoga District’s Shankarghatta on Friday.

Shimoga - What is the demand of the farmers union to the forest department minister? ಶಿವಮೊಗ್ಗ - ಅರಣ್ಯ ಇಲಾಖೆ ಸಚಿವರಿಗೆ ರೈತ ಸಂಘದ ಆಗ್ರಹವೇನು? Previous post shimoga | ಶಿವಮೊಗ್ಗ –  ಅರಣ್ಯ ಇಲಾಖೆ ಸಚಿವರಿಗೆ ರೈತ ಸಂಘದ ಆಗ್ರಹವೇನು?
What did CM Siddaramaiah say about implementation of caste census report? ಜಾತಿ ಗಣತಿ ವರದಿ ಜಾರಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು? Next post caste census | ಜಾತಿ ಗಣತಿ ವರದಿ ಜಾರಿ ಬಗ್ಗೆ CM ಸಿದ್ದರಾಮಯ್ಯ ಹೇಳಿದ್ದೇನು?