shimoga | ಶಿವಮೊಗ್ಗ ತಾಲೂಕಿನ ವಿವಿಧೆಡೆ ಮುಂದುವರಿದ ಕಾಡಾನೆಗಳ ದಾಳಿ!
ಶಿವಮೊಗ್ಗ, ಅ. 3: ಶಿವಮೊಗ್ಗ ತಾಲೂಕಿನ ವಿವಿಧೆಡೆ, ಗದ್ದೆ – ತೋಟಗಳಿಗೆ ಕಾಡಾನೆಗಳ ದಾಳಿ ಮುಂದುವರಿದೆ. ಇದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಲಕ್ಕಿನಕೊಪ್ಪ ಗ್ರಾಮದಲ್ಲಿ ಕಳೆದೆರೆಡು ದಿನಗಳಿಂದ ನಿರಂತರವಾಗಿ ಕಾಡಾನೆಗಳು ಗದ್ದೆ ಹಾಗೂ ತೋಟಗಳಿಗೆ ದಾಳಿಯಿಡುತ್ತಿವೆ. ಆದರೆ ಅರಣ್ಯ ಇಲಾಖೆ ಆನೆಗಳ ಉಪಟಳ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ಸಾಕಷ್ಟು ತೊಂದರೆಯಾಗಿ ಪರಿಣಮಿಸಿದೆ ಎಂದು ಸ್ಥಳೀಯ ರೈತರು ದೂರಿದ್ದಾರೆ.
ಭಾನುವಾರ ಓಂಕಾರಪ್ಪ ಎಂಬ ರೈತ ಸುದ್ದಿಗಾರರೊಂದಿಗೆ ಮಾತನಾಡಿ, ‘ತಮ್ಮ ಭತ್ತದ ಗದ್ದೆಗೆ ನುಗ್ಗಿದ ಕಾಡಾನೆ ಕಟಾವಿಗೆ ಬರುತ್ತಿದ್ದ ಬೆಳೆ ಹಾನಿ ಮಾಡಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಫಸಲು ನಷ್ಟವಾಗಿದೆ. ಅದೇ ರೀತಿಯಲ್ಲಿ ತಮ್ಮ ಜಮೀನಿನ ಸುತ್ತಮುತ್ತಲಿರುವ ತೋಟ, ಗದ್ದೆಗಳಿಗೂ ಕಾಡಾನೆಗಳು ನುಗ್ಗಿ ದಾಂಧಲೆ ನಡೆಸಿವೆ’ ಎಂದು ತಿಳಿಸಿದ್ದಾರೆ.
ಲಕ್ಕಿನಕೊಪ್ಪ ಸುತ್ತಮುತ್ತಲನ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿಯಿಂದ, ತೋಟಗದ್ದೆಗಳಿಗೆ ಹೋಗಲು ಭಯಪಡುವಂತಹ ಸ್ಥಿತಿಯಿದೆ. ತಕ್ಷಣವೇ ಅರಣ್ಯ ಇಲಾಖೆ ಕಾಡಾನೆಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು. ಹಾಗೆಯೇ ಬೆಳೆ ಹಾನಿಗೀಡಾದ ರೈತರಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಮತ್ತೊಂದೆಡೆ, ಶಿವಮೊಗ್ಗ ತಾಲೂಕಿನ ಆಲದೇವರ ಹೊಸೂರು ಗ್ರಾಮದಲ್ಲಿಯೂ ಕಾಡಾನೆಗಳ ಉಪಟಳ ಮುಂದುವರಿದಿದೆ. ಶನಿವಾರ ರಾತ್ರಿ ಚೇತನಗೌಡ ಎಂಬುವರ ತೋಟಕ್ಕೆ ನುಗ್ಗಿದ ಕಾಡಾನೆಗಳು, ಫಸಲಿಗೆ ಬಂದ ತೆಂಗಿನಮರಗಳನ್ನು ಹಾಳು ಮಾಡಿವೆ. ಸುಮಾರು 20 ಮರಗಳು ದಾಳಿಯಿಂದ ಹಾನಿಗೀಡಾಗಿವೆ.
ಆದರೆ ತೆಂಗಿನ ಮರಗಳು ಹಾಳಾಗಿರುವುದನ್ನು ಗಮನಿಸಿದರೆ ಸಾಕಷ್ಟು ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ರೈತರನ್ನು ಬೆದರಿಸುವ ಹುನ್ನಾರ ಅಡಗಿರುವ ಶಂಕೆಗಳು ವ್ಯಕ್ತವಾಗುತ್ತಿವೆ. ಕಳೆದ ಹಲವು ದಿನಗಳಿಂದ, ಸದರಿ ಪ್ರದೇಶದಲ್ಲಿ ನಿರಂತರವಾಗಿ ಆನೆಗಳ ದಾಳಿಯಿಂದ ತೋಟ – ಗದ್ದೆಗಳಲ್ಲಿನ ಬೆಳೆಗಳು ಹಾನಿಯಾಗುತ್ತಿವೆ. ಈ ಕುರಿತಂತೆ ಉನ್ನತಮಟ್ಟದ ತನಿಖೆ ನಡೆಸಬೇಕು. ರೈತರಿಗೆ ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ರೈತರು ಆಗ್ರಹಿಸುತ್ತಾರೆ.
In various parts of Shimoga taluk, the attack of wild elephants on fields and gardens continues. Farmers have lamented that huge amount of crop has been damaged due to this.
