Derogatory statement about PM Modi - MP B Y Raghavendra demands CM's apology ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ - ಸಿಎಂ ಕ್ಷಮೆಯಾಚನೆಗೆ ಸಂಸದ ಬಿ ವೈ ರಾಘವೇಂದ್ರ ಆಗ್ರಹ

shimoga | ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ – ಸಿಎಂ ಕ್ಷಮೆಯಾಚನೆಗೆ ಸಂಸದ ಬಿ ವೈ ರಾಘವೇಂದ್ರ ಆಗ್ರಹ

ಶಿವಮೊಗ್ಗ (shivamogga), ಅ. 3: ವಿಶ್ವದ ಪ್ರಬಲ ನಾಯಕರೆಂದು ಜಾಗತಿಕ ಸಂಸ್ಥೆ ಹಾಗೂ ಮಾಧ್ಯಮಗಳಿಂದ ಗೌರವಿಸಲ್ಪಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ, ಅವಹೇಳನಕಾರಿ ಹೇಳಿಕೆ ನೀಡಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಷರತ್ ಆಗಿ ಕ್ಷಮೆಯಾಚಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಆಗ್ರಹಿಸಿದ್ದಾರೆ.

ಈ ಕುರಿತಂತೆ ಭಾನುವಾರ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಇತರರ ಬಗ್ಗೆ ಹಗುರವಾಗಿ ಮಾತನಾಡುವ ಪ್ರವೃತ್ತಿಯನ್ನು ಸಿಎಂ ನಿಲ್ಲಿಸಬೇಕು. ಮೋದಿ ಅವರು ಪ್ರಸ್ತುತ ವಿಶ್ವ ನಾಯಕರಾಗಿ ಬೆಳೆದು ನಿಂತಿದ್ದಾರೆ. ಇಡೀ ವಿಶ್ವವೇ ಅವರನ್ನು ಗೌರವಿಸುತ್ತಿದೆ.  ವಿಶ್ವದ ಅತೀ ವೇಗವಾಗಿ ಬೆಳೆಯುವ ಆರ್ಥಿಕ ಶಕ್ತಿಯಾಗಿ ಭಾರತವನ್ನು ಬೆಳೆಸಿ ನಿಲ್ಲಿಸಿದ್ದಾರೆ.

ಕರ್ನಾಟಕ ಸರಕಾರದ ಆರ್ಥಿಕ ದುಃಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಹಿತವಚನವನ್ನು ಗೌರವಿಸುವ ಬದಲು, ಅವರ ವಿರುದ್ದವೇ ಅವಹೇಳನಕಾರಿ ಪದ ಪ್ರಯೋಗಿಸಿರುವುದು ಸಿದ್ದರಾಮಯ್ಯರಂತಹ ಹಿರಿಯ ನಾಯಕರಿಗೆ ಗೌರವ ತರುವುದಿಲ್ಲ ಎಂದು ತಿಳಿಸಿದ್ದಾರೆ.

ಆಯುಷ್ಮಾನ್ ಭಾರತ್, ಜನೌಷಧಿ, ಆವಾಸ್ ಯೋಜನಾ, ಉಚಿತ ರೇಷನ್, ಉಜ್ವಲಾ ಯೋಜನೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರ ಶ್ರೇಯೋಭಿವೃದ್ದಿಗೆ ಮೋದಿ ಅವರು ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ಸಿನ ಯಾವುದೇ ಗ್ಯಾರಂಟಿಗಳೂ ಮಾಡದಂತ ಜನಪರ ಕೆಲಸವನ್ನು ಮೋದೀಜೀಯವರ ಕಾರ್ಯಕ್ರಮಗಳು ಮಾಡಿವೆ ಎಂದಿದ್ದಾರೆ.

ಡಿಜಿಟಲ್ ಎಕಾನಮಿಯ ಮೂಲಕ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಿವೆ. ಇವೆಲ್ಲ ಕ್ರಾಂತಿಕಾರಿ ಬೆಳವಣಿಗಗಳ ನಡುವೆಯೂ ದೇಶದ ಆರ್ಥಿಕತೆಯನ್ನು ಸದೃಢವಾಗಿ ಉಳಿಸಿಕೊಂಡಿರುವುದು ಮೋದೀಜೀ ಹಾಗೂ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಹೆಗ್ಗಳಿಕೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ ಸಿದ್ದರಾಮಯ್ಯರ ಸರ್ಕಾರ ಗ್ಯಾರಂಟಿ ಭರವಸೆಗಳನ್ನು ಸರಿಯಾಗಿ ನಿರ್ವಹಿಸಲಾಗದೆ, ರಾಜ್ಯವನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದೆ. ಅದರ ಬಿಸಿ ತಟ್ಟುತ್ತಿರುವುದರಿಂದಲೇ ಅವರದೇ ಪಕ್ಷದ ನಾಯಕರುಗಳು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಮಾತಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಹಣವೇ ಇಲ್ಲ ಎಂದು ಶಾಸಕರುಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಬಳವೇ ಬಂದಿಲ್ಲ ಎಂದು ಅನೇಕ ನೌಕರರು ಕೊರಗುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಇದ್ದದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದ… ಅನ್ನೊ ಹಾಗೆ ಸಿದ್ದರಾಮಯ್ಯನವರು ತಮ್ಮ ಹೊಣೆಗೇಡಿ ಮತ್ತು ಹಗುರ ಮಾತಿನ ಮೂಲಕ ತಮ್ಮ ಹತಾಶೆಯನ್ನು ಹೊರಹಾಕುತ್ತಿದ್ದಾರೆ.  ಈ ನೆಲದ ಕ್ರಾಂತಿಪುರುಷ, ಅಣ್ಣ ಬಸವಣ್ಣ ಬಗ್ಗೆ ಅಪಾರ ಗೌರವವಿದೆ ಎಂದು ಸಿಎಂ ಸದಾ ಹೇಳುತ್ತಿರುತ್ತಾರೆ. 

ಅಣ್ಣ ಬಸವಣ್ಣರ ವಚನವಾದ ‘ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ʼಅಹುದಹುದೆನಬೇಕು, ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮ ದೇವನೆಂತೊಲಿವನಯ್ಯಾ?’ ಎಂಬುವುದನ್ನು ಸಿಎಂ ಅರಿತುಕೊಳ್ಳಬೇಕು.

ಅಣ್ಣ ಬಸವಣ್ಣ ಅವರನ್ನು ಬರೀ ಭಾಷಣಕ್ಕೆ ಸೀಮಿತಗೊಳಿಸಿಕೊಳ್ಳದೆ ಅವರ ಆದರ್ಶವನ್ನು ಸಿಎಂ ಸಿದ್ದರಾಮಯ್ಯ ಅವರು ಪಾಲಿಸಬೇಕು. ಅದು ಎಲ್ಲರಿಗೂ ಶೋಭೆ ತರುತ್ತದೆ ಎಂದು ಬಿ ವೈ ರಾಘವೇಂದ್ರ ಅವರು ಸಿದ್ದರಾಮಯ್ಯ ಅವರ ವಿರುದ್ದ ಟೀಕಾಪ್ರಹಾರ ನಡೆಸಿದ್ದಾರೆ.

MP B. Y. Raghavendra has demanded that State Chief Minister Siddaramaiah should unconditionally apologize for making a derogatory statement about Prime Minister Narendra Modi, who is respected by global organizations and media as the world’s strongest leader.

director guruprasad | 'Mata' famed film director Guruprasad surrendered to suicide! ‘ಮಠ’ ಖ್ಯಾತಿಯ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣು! Previous post director guruprasad | ‘ಮಠ’ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣು!
The attack of wild elephants continued in different parts of Shimoga taluk! ಶಿವಮೊಗ್ಗ ತಾಲೂಕಿನ ವಿವಿಧೆಡೆ ಮುಂದುವರಿದ ಕಾಡಾನೆಗಳ ದಾಳಿ! Next post shimoga | ಶಿವಮೊಗ್ಗ ತಾಲೂಕಿನ ವಿವಿಧೆಡೆ ಮುಂದುವರಿದ ಕಾಡಾನೆಗಳ ದಾಳಿ!