
bhadravati crime news | ಭದ್ರಾವತಿ : ಮನೆಯೊಂದರಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಐಟಿ ಉದ್ಯೋಗಿ ಅರೆಸ್ಟ್!
ಶಿವಮೊಗ್ಗ (shivamogga), ನ. 6: ಮನೆಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪದ ಮೇರೆಗೆ, ಐಟಿ ಉದ್ಯೋಗಿ ಯುವಕನೋರ್ವನನ್ನು ಭದ್ರಾವತಿ ಹೊಸಮನೆ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಭದ್ರಾವತಿ ಹೊಸಮನೆಯ ಕೇಶಾವಪುರ ಬಡಾವಣೆ ನಿವಾಸಿ ಎಸ್ ಎಸ್ ನಿತಿನ್ (27) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆರೋಪಿಯಿಂದ 16. 50 ಲಕ್ಷ ರೂ. ಮೌಲ್ಯದ 259 ಗ್ರಾಂ ತೂಕದ ಆರು ಬಂಗಾರದ ಗಟ್ಟಿಗಳು, ಒಂದು ಬಂಗಾರದ ಕೈಗಡವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತಂತೆ ನ. 6 ರಂದು ಶಿವಮೊಗ್ಗದ ಡಿಎಆರ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಭದ್ರಾವತಿ ಡಿವೈಎಸ್ಪಿ ನಾಗರಾಜ್ ಅವರ ಮೇಲ್ವಿಚಾರಣೆಯಲ್ಲಿ,
ಇನ್ಸ್’ಪೆಕ್ಟರ್ ಶ್ರೀಶೈಲಕುಮಾರ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಕೃಷ್ಣಕುಮಾರ ಬಿ ಮಾನೆ ಮತ್ತವರ ಸಿಬ್ಬಂದಿಗಳಾದ ಸಿಹೆಚ್’ಸಿ ಮಧು ಪ್ರಸಾದ್, ಆದರ್ಶ ಶೆಟ್ಟಿ, ತೇಜಕುಮಾರ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕಳವು : 15-8-2024 ರಂದು ಭದ್ರಾವತಿ ಹೊಸಮನೆ ಬಡಾವಣೆ ನಿವಾಸಿ ವಿನೋದ ಜಿ. ಆರ್ (69) ಎಂಬುವರು ಮನೆ ಮುಂಬಾಗಿಲಿಗೆ ಬೀಗ ಹಾಕಿಕೊಂಡು ಹಬ್ಬಕ್ಕೆಂದು, ಸಂಬಂಧಿಕರ ಮನೆಗೆ ತೆರಳಿದ್ದರು. 21/8/2024 ರಂದು ಮಧ್ಯಾಹ್ನ ಮನೆಗೆ ಹಿಂದಿರುಗಿದಾಗ, ಮನೆಯಲ್ಲಿ ಕಳ್ಳತನವಾಗಿರುವ ಕೃತ್ಯ ಬೆಳಕಿಗೆ ಬಂದಿತ್ತು.
ಬೀರುವಿನಲ್ಲಿಟ್ಟಿದ್ದ 20 ಲಕ್ಷ ರೂ. ಮೌಲ್ಯದ 400 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದರು.
Millions of rupees in a house. An IT employee was arrested by the Bhadravati Hosamane Police Station on the charge of stealing valuable gold jewellery.