shimoga | ಶಿವಮೊಗ್ಗ ತಾಲೂಕಿನ SSLC ಪರೀಕ್ಷಾ ಫಲಿತಾಂಶ – ತಹಶೀಲ್ದಾರ್ ಖಡಕ್ ಸೂಚನೆ!
ಶಿವಮೊಗ್ಗ (shivamogga), ನ. 5: ಶಿವಮೊಗ್ಗ ತಾಲೂಕಿನ ಎಸ್ಎಸ್ಎಲ್’ಸಿ ಪರೀಕ್ಷಾ ಫಲಿತಾಂಶದಲ್ಲಿ ಸುಧಾರಣೆಯಾಗಬೇಕು. ಈ ನಿಟ್ಟಿಲ್ಲಿ ಮುಖ್ಯೋಪಾಧ್ಯಾಯರು ಆದ್ಯ ಗಮನಹರಿಸಬೇಕು ಎಂದು ತಹಶೀಲ್ದಾರ್ ಬಿ ಎನ್ ಗಿರೀಶ್ ಅವರು ಸೂಚನೆ ನೀಡಿದ್ದಾರೆ.
ಶಿವಮೊಗ್ಗ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಸಭಾಂಗಣದಲ್ಲಿ ನ. 5 ರಂದು ಶಿವಮೊಗ್ಗ ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ನಡೆಸಿದರು.
ಜಿಲ್ಲೆಯ ಇತರೆ ತಾಲೂಕುಗಳಿಗೆ ಹೋಲಿಸಿದರೆ, ಜಿಲ್ಲಾ ಕೇಂದ್ರವಾದ ಶಿವಮೊಗ್ಗ ತಾಲೂಕಿನ ಎಸ್ಎಸ್ಎಲ್’ಸಿ ಪರೀಕ್ಷಾ ಫಲಿತಾಂಶದಲ್ಲಿ ಹಿಂದಿದೆ. ಪ್ರಸ್ತುತ ಶೈಕ್ಷಣಿಕ ಅವಧಿಯಲ್ಲಿ, ತಾಲೂಕು ಮೊದಲ ಸ್ಥಾನಕ್ಕೆ ಬರಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ವಿಶೇಷ ಶಿಕ್ಷಣ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ, ಅಗತ್ಯಬಿದ್ದರೆ ತಾಲೂಕು ಆಡಳಿತದಿಂದಲೇ ವಿಶೇಷ ಶಿಕ್ಷಣ ವ್ಯವಸ್ಥೆ ಮಾಡಲಾಗುವುದು. ಶಿಕ್ಷಕರ ಕೊರತೆಯಿದ್ದರೆ ತಮ್ಮ ಗಮನಕ್ಕೆ ತಂದರೆ, ಅಗತ್ಯ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಇನ್ನು ಮುಂದೆ ತಾವು ಕೂಡ ನಿಯಮಿತವಾಗಿ ಶಾಲೆಗಳಿಗೆ ಭೇಟಿಯಿತ್ತು ಪರಿಶೀಲನೆ ನಡೆಸುತ್ತೆನೆ ಎಂದರು.
ಸರ್ಕಾರಿ ಶಾಲೆಗಳ ಕಟ್ಟಡಕ್ಕೆ ನಿಯಮಿತವಾಗಿ ಸುಣ್ಣಬಣ್ಣದ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯದ ವ್ಯವಸ್ಥೆ ಮಾಡಬೇಕು. ಶಾಲೆಗಳ ಅಭಿವೃದ್ದಿಗೆ ತಾಲೂಕು ಆಡಳಿತದಿಂದ ಎಲ್ಲ ರೀತಿಯ ಅಗತ್ಯ ನೆರವಿನಹಸ್ತ ನೀಡಲಾಗುವುದು ಎಂದು ತಹಶೀಲ್ದಾರ್ ಅವರು ತಿಳಿಸಿದ್ದಾರೆ.
ವಿರಳ : ಶಿವಮೊಗ್ಗ ತಾಲೂಕಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಸುಧಾರಣೆಯ ಕುರಿತಂತೆ, ಈ ಹಿಂದಿನ ತಹಶೀಲ್ದಾರ್ ಗಳು ಪ್ರೌಢಶಾಲೆಗಳ ಮುಖ್ಯಸ್ಥರ ಸಭೆ ನಡೆಸುತ್ತಿರಲಿಲ್ಲ. ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ನಡೆದುಕೊಳ್ಳುತ್ತಿದ್ದರು. ಶಿಕ್ಷಣ ಇಲಾಖೆಯು ಕೂಡ ಗಂಭೀರ ಚಿತ್ತ ಹರಿಸುವ ಗೋಜಿಗೆ ಹೋಗಿರಲಿಲ್ಲ.
ಆದರೆ ಬಿ ಎನ್ ಗಿರೀಶ್ ಅವರು ಶಿಕ್ಷಣ ಇಲಾಖೆ ಮೂಲಕ ಸಭೆ ನಡೆಸಿ, ಚುರುಕು ಮುಟ್ಟಿಸುವ ಕಾರ್ಯ ನಡೆಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಈ ಬಾರಿಯಾದರೂ ಶಿವಮೊಗ್ಗ ತಾಲೂಕಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಸುಧಾರಣೆ ಕಂಡುಬರಲಿದೆಯೇ? ಎಂಬುವುದನ್ನು ಕಾದು ನೋಡಬೇಕಾಗಿದೆ.
There should be improvement in SSLC exam result of Shimoga taluk. Tehsildar BN Girish has instructed that the principals should pay attention to this issue.
