
shimoga | ಶಿವಮೊಗ್ಗ : ಪಾಳು ಬಿದ್ದ ಬಹು ಕೋಟಿ ರೂ. ವೆಚ್ಚದ ಅಂಡರ್ ಪಾಸ್ – ಮುಂದೇನು?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ನ. 18: ಶಿವಮೊಗ್ಗ ನಗರದ ಹೃದಯ ಭಾಗ ಅಮೀರ್ ಅಹಮದ್ ಸರ್ಕಲ್ (ಎ ಎ ವೃತ್ತ) ಹಾಗೂ ಶಿವಪ್ಪನಾಯಕ ಸರ್ಕಲ್ ಗಳಲ್ಲಿ, ಕಳೆದ ಹಲವು ವರ್ಷಗಳ ಹಿಂದೆ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಅಂಡರ್ ಪಾಸ್ ಪ್ರಸ್ತುತ ಅಕ್ಷರಶಃ ಪಾಳು ಬಿದ್ದಿದೆ..!
ಸದ್ಯ ಅಂಡರ್ ಪಾಸ್ ನಲ್ಲಿ ಭಾರೀ ಪ್ರಮಾಣದ ನೀರು ತುಂಬಿಕೊಂಡಿದೆ. ಕಸಕಡ್ಡಿಯಿಂದ ಆವೃತವಾಗಿದೆ. ಅಂಡರ್ ಪಾಸ್ ಇದೆ ಎಂಬುವುದನ್ನೇ ಪಾಲಿಕೆ ಆಡಳಿತ ಮರೆತಂತೆ ಕಾಣುತ್ತಿದೆ. ಇದರಿಂದ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗದಂತಾಗಿದೆ..!
ಏನೀದು ಯೋಜನೆ?: 2008 ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ, ಎಎ ವೃತ್ತ ಹಾಗೂ ಶಿವಪ್ಪನಾಯಕ ವೃತ್ತಗಳಲ್ಲಿ ಅಂಡರ್ ಪಾಸ್ ನಿರ್ಮಿಸುವ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗಿತ್ತು.
ಸದರಿ ವೃತ್ತಗಳಿಗೆ ಹೊಂದಿಕೊಂಡಂತಿರುವ ಗಾಂಧಿ ಬಜಾರ್, ಬಿ ಹೆಚ್ ರಸ್ತೆ, ನೆಹರು ರಸ್ತೆ, ಎನ್. ಟಿ. ರಸ್ತೆ, ಹೂವಿನ ಮಾರ್ಕೆಟ್ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳಿಗೆ ಓಡಾಡುವ ಪಾದಚಾರಿಗಳಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಅಂಡರ್ ಪಾಸ್ ನಿರ್ಮಿಸಲಾಗಿತ್ತು.
ಪಾಲಿಕೆ ಆಡಳಿತಕ್ಕೆ ನಿರ್ವಹಣೆಯ ಜವಾಬ್ದಾರಿ ಹಸ್ತಾಂತರಿಸಲಾಗಿತ್ತು. ಆದರೆ ಪಾದಚಾರಿಗಳು ಅಂಡರ್ ಪಾಸ್ ಮೂಲಕ ಓಡಾಡಲು ಉತ್ಸಾಹ ತೋರಲಿಲ್ಲ. ತದನಂತರ ಕಡ್ಡಾಯವಾಗಿ ಅಂಡರ್ ಪಾಸ್ ಮೂಲಕವೇ ಓಡಾಡಲು ಪಾದಚಾರಿಗಳಿಗೆ ಸೂಚಿಸಲಾಗಿತ್ತು. ಪೊಲೀಸರನ್ನು ನಿಯೋಜಿಸಲಾಗಿತ್ತು.
ಇವ್ಯಾವ ಕ್ರಮಗಳು ಫಲಪ್ರದವಾಗಿರಲಿಲ್ಲ. ಕಾಲಕ್ರಮೇಣ ಅಂಡರ್ ಪಾಸ್ ಅನೈತಿಕ ಚಟುವಟಿಕೆ ತಾಣವಾಗಲಾರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಇದರ ಬಾಗಿಲುಗಳನ್ನು ಮುಚ್ಚಲಾಗಿತ್ತು. ಮತ್ತೊಂದೆಡೆ, ಅಂಡರ್ ಪಾಸ್ ನಲ್ಲಿ ಪುಟ್’ಪಾತ್ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿಕೊಡುವ ನಿರ್ಧಾರ ಕೂಡ ಮಾಡಲಾಗಿತ್ತು. ಅದು ಕೂಡ ಕಾರ್ಯರೂಪಕ್ಕೆ ಬರಲಿಲ್ಲ.
ಇತ್ತೀಚೆಗೆ ಅಂಡರ್ ಪಾಸ್ ನಲ್ಲಿ ನೀರು ತುಂಬಿಕೊಳ್ಳಲಾರಂಭಿಸಿತ್ತು. ಕಾಮಗಾರಿ ಮಾಡುವ ವೇಳೆ, ನೀರು ಹೊರಹೋಗುವ ಯಾವುದೇ ವ್ಯವಸ್ಥೆ ಮಾಡಿರದಿದ್ದ ಕಾರಣದಿಂದ, ಅವ್ಯವಸ್ಥೆ ಸೃಷ್ಟಿಯಾಗುವಂತಾಗಿತ್ತು.
ಆಗಾಗ್ಗೆ ಪಂಪ್ ಸೆಟ್ ಗಳ ಮೂಲಕ ಅಂಡರ್ ಪಾಸ್ ನಲ್ಲಿ ಸಂಗ್ರಹವಾಗುತ್ತಿದ್ದ ನೀರನ್ನು ಹೊರ ಹಾಕಲಾಗುತ್ತಿತ್ತು. ಕಳೆದ ಕೆಲ ವರ್ಷಗಳಿಂದ ಆ ಕೆಲವೂ ಆಗಿಲ್ಲ. ಸದ್ಯ ಅಂಡರ್ ಪಾಸ್ ನಲ್ಲಿ ಭಾರೀ ಪ್ರಮಾಣದ ನೀರು ತುಂಬಿಕೊಂಡು, ಕಾಲುವೆಯಂತಾಗಿ ಪರಿಣಮಿಸಿದೆ.
ಗಮನಹರಿಸಲಿ: ಪಾಳು ಬಿದ್ದಿರುವ ಅಂಡರ್ ಪಾಸ್ ಗೆ ಕಾಯಕಲ್ಪ ನೀಡುವ ಕಾರ್ಯವಾಗಬೇಕಾಗಿದೆ. ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಆಡಳಿತ ಆದ್ಯ ಗಮನಹರಿಸಬೇಕಾಗಿದೆ. ನಾಗರೀಕರ ತೆರಿಗೆ ಹಣ ವ್ಯರ್ಥವಾಗದಂತೆ ಎಚ್ಚರವಹಿಸಬೇಕಾಗಿದೆ ಎಂಬುವುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.
In the heart of Shimoga city Ameer Ahmed Circle (AA Circle) and Shivappanayaka Circles, crores of crores of rupees were spent last many years. The underpass that was built at a cost is now literally in ruins..!