
ಶಿವಮೊಗ್ಗ : ಹಾಳಾಗುತ್ತಿರುವ ಕೋಟ್ಯಾಂತರ ರೂ. ಮೌಲ್ಯದ ಕಟ್ಟಡ – ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲು ಆಗ್ರಹ!
ಶಿವಮೊಗ್ಗ, ನ. 21: ಶಿವಮೊಗ್ಗ ನಗರದ ಹೃದಯ ಭಾಗವಾದ ಶಿವಪ್ಪನಾಯಕ ಸರ್ಕಲ್ ಸಮೀಪ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ, ಬಹುಮಹಡಿ ಪಾರ್ಕಿಂಗ್ ಕಟ್ಟಡವನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲು ಕಾಂಗ್ರೆಸ್ ಮುಖಂಡರ ನಿಯೋಗ, ಮಹಾನಗರ ಪಾಲಿಕೆ ಆಯುಕ್ತರಿಗೆ ಆಗ್ರಹಿಸಿದೆ.
ಈ ಸಂಬಂಧ ನವೆಂಬರ್ 21 ರಂದು ಬೆಳಿಗ್ಗೆ ಪಾಲಿಕೆ ಕಚೇರಿಯಲ್ಲಿ, ಆಯುಕ್ತೆ ಕವಿತಾ ಯೋಗಪ್ಪನವರ್ ಅವರಿಗೆ ಕಾಂಗ್ರೆಸ್ ಮುಖಂಡರ ನಿಯೋಗ ಮನವಿ ಪತ್ರ ಅರ್ಪಿಸಿತು.
ಬಿ.ಹೆಚ್.ರಸ್ತೆ, ಗಾಂಧಿ ಬಜಾರ್ ಸುತ್ತಮುತ್ತಲಿನ ಪ್ರಮುಖ ಸ್ಥಳಗಳಲ್ಲಿ ಜನ, ವಾಹನ ಸಂಚಾರ ದಟ್ಟಣೆ ಹೆಚ್ಚಿದೆ. ವಾಹನಗಳ ನಿಲುಗಡೆ ಮಾಡಲು ಸವಾರರು ಪರದಾಡುವಂತಾಗಿದೆ. ಈ ಎಲ್ಲ ಕಾರಣಗಳಿಂದ ಕೋಟ್ಯಾಂತರ ರೂ. ವೆಚ್ಚದಲ್ಲಿ ಕಾರು ಹಾಗೂ ದ್ವಿಚಕ್ರ ವಾಹನಗಳ ನಿಲುಗಡೆಗೆ ಬಹುಮಹಡಿ ಕಟ್ಟಡ ನಿರ್ಮಿಸಲಾಗಿದೆ.
ಕಟ್ಟಡ ಉದ್ಘಾಟನೆಗೊಂಡಿದ್ದರೂ ಇಲ್ಲಿಯವರೆಗೂ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿಲ್ಲ. ಇದರಿಂದ ಕಟ್ಟಡ ಹಾಳಾಗಲಾರಂಭಿಸಿದೆ. ಸದರಿ ಸ್ಥಳದಲ್ಲಿ ಕಾಲಮಿತಿಯೊಳಗೆ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ.
ನಗರದ ಗಾರ್ಡನ್ ಏರಿಯಾದಲ್ಲಿ ಕೋಟ್ಯಾಂತ ರೂ. ವೆಚ್ಚದಲ್ಲಿ ಹೂವು-ಹಣ್ಣು ವ್ಯಾಪಾರ ಮಳಿಗೆಗಳನ್ನು ನಿರ್ಮಿಸಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಸದರಿ ಮಳಿಗೆಗಳನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಲು ಕ್ರಮಕೈಗೊಳ್ಳಬೇಕು. ಇದರಿಂದ ಪಾಲಿಕೆಗೆ ಆದಾಯ ಸಂಗ್ರಹಣೆಯಾಗಲಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ
ಹಾಗೆಯೇ ಪಾಲಿಕೆ ಆಡಳಿತದಿಂದ ಗಾಂಧಿನಗರ ಬಡಾವಣೆಯಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಸಂಕೀರ್ಣಕ್ಕೆ, ಗಾಂಧಿನಗರ ವಾಣಿಜ್ಯ ಸಂಕೀರ್ಣವೆಂದೇ ನಾಮಕರಣಗೊಳಿಸಬೆಕು ಎಂದು ಇದೇ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಿಗೆ ಮುಖಂಡರು ಒತ್ತಾಯಿಸಿದ್ದಾರೆ.
ಮನವಿ ಅರ್ಪಿಸುವ ಸಂದರ್ಭದಲ್ಲಿ ಮುಖಂಡರಾದ ಹೆಚ್. ಸಿ. ಯೋಗೇಶ್, ಎಂ ಎಸ್ ಶಿವಕುಮಾರ್, ರಮೇಶ್ ಹೆಗಡೆ, ನಾಗರಾಜ್ ಕನಕಾರಿ, ವಿಶ್ವನಾಥ್ ಕಾಶಿ, ಕೆ ರಂಗನಾಥ್, ಚಂದ್ರು, ಗಂಗಾಧರ್, ಬಾಲಾಜಿ, ವಿನಯ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
A delegation of Congress leaders has requested the Commissioner of the Municipal Corporation to open the multi-storied parking building built under the Smart City project near Shivappanayaka Circle in the heart of Shimoga city for public service. In this regard, on the morning of November 21 at the Corporation office, a delegation of Congress leaders submitted a petition to Commissioner Kavita Yogappanavar.