
ಶಿವಮೊಗ್ಗ – ವಿದ್ಯಾರ್ಥಿಗಳ ಪಾಲಿಗೆ ಗಂಡಾಂತರಕಾರಿಯಾದ ಹೆದ್ಧಾರಿ : ಸಿಎಂ ಕಚೇರಿ ಸೂಚನೆಯೇನು?
ಶಿವಮೊಗ್ಗ (shivamogga), ಡಿ. 11: ಶಿವಮೊಗ್ಗ ನಗರದ ಮಹಾನಗರ ಪಾಲಿಕೆ ವ್ಯಾಪ್ತಿ ಗಾಡಿಕೊಪ್ಪದ ಸರ್ಕಾರಿ ಶಾಲೆಗೆ ಹೊಂದಿಕೊಂಡಂತಿರುವ ರಾಷ್ಟ್ರೀಯ ಹೆದ್ಧಾರಿಯು ಶಾಲಾ ಮಕ್ಕಳ ಪಾಲಿಗೆ ಗಂಡಾಂತರಕಾರಿಯಾಗಿ ಪರಿಣಮಿಸಿರುವ ದೂರಿನ ಕುರಿತಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯರ ಕಚೇರಿ ಸ್ಪಂದಿಸಿದೆ.
ಮಕ್ಕಳು ಸುರಕ್ಷಿತವಾಗಿ ಹೆದ್ಧಾರಿ ದಾಟಿಕೊಂಡು ಶಾಲೆ – ಮನೆಗೆ ಓಡಾಡಲು ಅಗತ್ಯ, ತ್ವರಿತ ಕ್ರಮಕೈಗೊಳ್ಳುವಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗವು ಸೂಚನೆ ನೀಡಿದೆ.
ಗಾಡಿಕೊಪ್ಪದ ಸರ್ಕಾರಿ ಶಾಲೆ ಮಕ್ಕಳಿಗೆ ರಾಷ್ಟ್ರೀಯ ಹೆದ್ಧಾರಿ ಅಪಾಯಕಾರಿಯಾಗಿ ಪರಿಣಮಿಸಿರುವ ಕುರಿತಂತೆ, ಪತ್ರಕರ್ತ ಬಿ. ರೇಣುಕೇಶ್ ಅವರು ವರದಿ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ, ಸಿಎಂ ಕಚೇರಿ ಕುಂದುಕೊರತೆ ವಿಭಾಗದ ಗಮನಕ್ಕೆ ತಂದಿದ್ದರು.
ಇದನ್ನು ಗಮನಿಸಿದ ಸಿಎಂ ಕಚೇರಿಯು, ಕಾಲಮಿತಿಯೊಳಗೆ ಶಾಲಾ ಮಕ್ಕಳಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಶಿವಮೊಗ್ಗ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮೌಖಿಕ ಸೂಚಿಸಿತ್ತು. ಈ ಕುರಿತಂತೆ ಸಿಎಂ ಕಚೇರಿಗೆ ಪಾಲಿಕೆ ಆಯುಕ್ತರು ಪತ್ರ ಕೂಡ ಬರೆದಿದ್ದಾರೆ.
ಮೆಚ್ಚುಗೆ : ‘ಸರ್ಕಾರಿ ಶಾಲೆಗೆ ಹೊಂದಿಕೊಂಡಂತಿರುವ ಸರ್ಕಲ್ ನಲ್ಲಿ, ಶಾಲಾ ಮಕ್ಕಳ ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಿಸಿದವರಿಗೆ ಮನವಿ ಮಾಡಿಕೊಂಡು ಬರಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.
ಇದೀಗ ಸಿಎಂ ಕಚೇರಿ ಕುಂದುಕೊರತೆ ವಿಭಾಗವು ಮಕ್ಕಳ ಸುರಕ್ಷಿತ ಸಂಚಾರಕ್ಕೆ ಆದ್ಯ ಗಮನಹರಿಸುವಂತೆ ಸೂಚನೆ ನೀಡಿರುವುದು ನಿಜಕ್ಕೂ ಅಭಿನಂದನೀಯ ಸಂಗತಿಯಾಗಿದೆ’ ಎಂದು ಸ್ಥಳೀಯ ನಿವಾಸಿ ಬಸವರಾಜ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮ’ – ಶಿವಮೊಗ್ಗ ಪಾಲಿಕೆ ಆಯುಕ್ತೆ

*** ‘ಗಾಡಿಕೊಪ್ಪದ ಸರ್ಕಾರಿ ಶಾಲೆ ಸಮೀಪದ ರಾಷ್ಟ್ರೀಯ ಹೆದ್ಧಾರಿ ಸರ್ಕಲ್ ನಲ್ಲಿ ಸಿಗ್ನಲ್ ಲೈಟ್ ಅಳವಡಿಕೆ ಕುರಿತಂತೆ ಪೊಲೀಸ್ ಇಲಾಖೆಯೊಂದಿಗೆ ಸಮಾಲೊಚನೆ ನಡೆಸಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಎನ್ಓಸಿ ಪಡೆದು ಅಗತ್ಯ ಕ್ರಮಕೈಗೊಳ್ಳಲಾಗುವುದು. ಶಾಲಾ ಮಕ್ಕಳ ಸುರಕ್ಷಿತ ಸಂಚಾರಕ್ಕೆ ಪಾಲಿಕೆ ಆಡಳಿತದಿಂದಾಗುವ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುವುದು’ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಅವರು ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.