shimoga palike | ಶಿವಮೊಗ್ಗ ಪಾಲಿಕೆ ಚುನಾವಣೆಯೂ ಇಲ್ಲ, ವ್ಯಾಪ್ತಿ ಪರಿಷ್ಕರಣೆಯೂ ನಡೆಯುತ್ತಿಲ್ಲ, ನಾಗರೀಕರ ಗೋಳು ಕೇಳೋರಿಲ್ಲ..!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜು. 23: ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಸದಸ್ಯರಿಲ್ಲದೆ ವರ್ಷವಾಗುತ್ತಿದೆ. ಪ್ರಸ್ತುತ ಸ್ಥಿತಿಗತಿ ಗಮನಿಸಿದರೆ, ಸದ್ಯಕ್ಕೆ ವಾರ್ಡ್ ಚುನಾವಣೆ ನಡೆಯುವ ಲಕ್ಷಣಗಳು ಗೋಚರವಾಗುತ್ತಿಲ್ಲವಾಗಿದೆ!
ಈ ನಡುವೆ ಕಳೆದೊಂದು ವರ್ಷದಿಂದ ನಡೆಯುತ್ತಿರುವ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯೂ ವಿಳಂಬಗತಿಯಲ್ಲಿ ಸಾಗುತ್ತಿದೆ. ಆಡಳಿತದ ಇಚ್ಛಾಶಕ್ತಿಯ ಕೊರತೆಯಿಂದ ಇಡೀ ಪ್ರಕ್ರಿಯೆ ನೆನೆಗುದಿಗೆ ಬೀಳುವಂತಾಗಿದೆ. ಡಿಸಿ ಆದೇಶಕ್ಕೂ ಪಾಲಿಕೆ ಆಡಳಿತ ಕಿಮ್ಮತ್ತೂ ನೀಡುತ್ತಿಲ್ಲವಾಗಿದೆ..!
ಇದರಿಂದ ನಾಗರೀಕರ ಅಹವಾಲು ಆಲಿಸುವ ವ್ಯವಸ್ಥೆಯೇ ಇಲ್ಲವಾಗಿದೆ. ಪಾಲಿಕೆ ಆಡಳಿತದಲ್ಲಿ ಅಧಿಕಾರಿಗಳ ದರ್ಬಾರ್ ಮಿತಿಮೀರಲಾರಂಭಿಸಿದ್ದು, ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ಪ್ರತಿಯೊಂದಕ್ಕೂ ಪಾಲಿಕೆ ಕಚೇರಿಗೆ ಎಡತಾಕುವಂತಹ ದುಃಸ್ಥಿತಿ ನಿರ್ಮಾಣವಾಗಿದೆ.
ವಿಳಂಬ : ಸದ್ಯ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ವಿಷಯವನ್ನೇ ಮುಂದಿಟ್ಟುಕೊಂಡು, ಚುನಾವಣೆ ವಿಳಂಬ ಮಾಡುತ್ತಿರುವ ಆರೋಪಗಳು ಕೆಲ ಜನಪ್ರತಿನಿಧಿಗಳ ವಲಯದಿಂದ ಕೇಳಿಬರಲಾರಂಭಿಸಿದೆ. ಆಡಳಿತ ವರ್ಗ ಚುನಾವಣೆಯ ಅಗತ್ಯವೇ ಇಲ್ಲದಂತೆ ವರ್ತಿಸುತ್ತಿದೆ. ಮತ್ತೊಂದೆಡೆ, ರಾಜಕೀಯ ಪಕ್ಷಗಳು ಕೂಡ ಈ ವಿಷಯದ ಬಗ್ಗೆ ದಿವ್ಯ ನಿರ್ಲಕ್ಷ್ಯವಹಿಸಿಕೊಂಡು ಬರುತ್ತಿವೆ.
ಈಗಾಗಲೇ ವ್ಯಾಪ್ತಿ ಪರಿಷ್ಕರಣೆ ಕುರಿತಂತೆ ಪಾಲಿಕೆ ಆಡಳಿತ, ಮೊದಲ ಹಂತದ ವರದಿ ಸಿದ್ದಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿತ್ತು. ಪಾಲಿಕೆಗೆ ಸೇರ್ಪಡೆ ಮಾಡಿಕೊಳ್ಳಬಹುದಾದ ಪ್ರದೇಶಗಳ ಪಟ್ಟಿ ಸಿದ್ದಪಡಿಸಿದೆ. ಆದರೆ ನಗರಕ್ಕೆ ಹೊಂದಿಕೊಂಡಂತಿರುವ ಹಲವು ಜನವಸತಿ ಬಡಾವಣೆಗಳನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಿರಲಿಲ್ಲ.
ಸದರಿ ಬಡಾವಣೆಗಳ ನಿವಾಸಿಗಳು, ತಮ್ಮ ಬಡಾವಣೆಗಳನ್ನು ಕೂಡ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, ನಾಗರೀಕರ ಬೇಡಿಕೆ ಪರಿಶೀಲಿಸಿ ಎರಡ್ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಪಾಲಿಕೆ ಆಡಳಿತಕ್ಕೆ ಸೂಚಿಸಿದ್ದರು.
ಆದರೆ ಅವರು ಸೂಚನೆ ನೀಡಿ ಎರಡು ತಿಂಗಳಾಗುತ್ತ ಬಂದಿದೆ. ಆದರೆ ಇಲ್ಲಿಯವರೆಗೂ ಪಾಲಿಕೆ ಆಡಳಿತ ವರದಿ ಸಲ್ಲಿಸಿಲ್ಲವೆಂಬ ಮಾಹಿತಿಗಳು ಜಿಲ್ಲಾಡಳಿತದ ಮೂಲಗಳು ತಿಳಿಸುತ್ತವೆ. ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯಾಗಿ, ವಾರ್ಡ್ ಗಳ ನಿಗದಿ ಪ್ರಕ್ರಿಯೆ ಪೂರ್ಣಗೊಂಡೆರೆ ಪಾಲಿಕೆ ಚುನಾವಣೆ ನಡೆಯಲು ಸಾಕಷ್ಟು ಸಹಕಾರಿಯಾಗುತ್ತದೆ ಎಂಬ ಅಭಿಪ್ರಾಯ ಜನಪ್ರತಿನಿಧಿಗಳ ವಲಯದ್ದಾಗಿದೆ.
ಗಮನಿಸಲಿ : ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರುಗಳಾದ ಚನ್ನಬಸಪ್ಪ, ಶಾರದಾ ಪೂರ್ಯನಾಯ್ಕ್ ಅವರು ಇತ್ತ ಗಮನಹರಿಸಬೇಕಾಗಿದೆ. ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಬಗ್ಗೆ ನಾಗರೀಕರ ಅಹವಾಲು ಆಲಿಸಬೇಕು. ವಿಳಂಬ ಧೋರಣೆ ಅನುಸರಿಸುತ್ತಿರುವ ಆಡಳಿತಕ್ಕೆ ಚುರಕು ಮುಟ್ಟಿಸುವ ಕಾರ್ಯ ನಡೆಸಬೇಕಾಗಿದೆ.
ಜೊತೆಗೆ ಪ್ರತಿಯೊಂದು ವಾರ್ಡ್ ನಲ್ಲಿ, ನಾಗರೀಕರ ಸಮಸ್ಯೆ ಪರಿಹಾರಕ್ಕೆ ನಿಯಮಿತವಾಗಿ ಅಧಿಕಾರಿಗಳು ಸಭೆ ನಡೆಸುವ ವ್ಯವಸ್ಥೆ ಮಾಡಬೇಕು. ಸಹಾಯವಾಣಿ, ಸಾಮಾಜಿಕ ಜಾಲತಾಣಗಳ ಮೂಲಕ ನಾಗರೀಕರ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂಬುವುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.
Shivamogga, Jul. 23: It has been a year without elected members in the Shivamogga Municipal Corporation. Given the current situation, there are no signs of ward elections being held at the moment! Meanwhile, the revision of the corporation’s jurisdiction, which has been going on for the past year, is also progressing at a slow pace. The entire process is stalled due to the administration’s lack of willpower. The corporation administration is not paying any heed to the DC’s orders!
District in-charge Minister Madhu Bangarappa, MLAs Channabasappa and Sharada Puryanaik need to pay attention to this. Citizens’ demands regarding the revision of the corporation’s jurisdiction should be listened to. The administration, which is following a policy of delay, needs to be quickened.
