
shimoga | ಶಿವಮೊಗ್ಗ : ಅಣ್ಣನ ಕೊಲೆ – ತಮ್ಮ ಪೊಲೀಸ್ ಬಲೆಗೆ!
ಶಿವಮೊಗ್ಗ (shivamogga), ಜು. 28: ಮನೆಯಲ್ಲಿಯೇ ಅಣ್ಣನನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪದ ಮೇರೆಗೆ, ತಮ್ಮನನ್ನು ಶಿವಮೊಗ್ಗ ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಸಂತೋಷ್ (38) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ತುಂಗಾನಗರ ಠಾಣೆ ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್ ನೇತೃತ್ವದ ಪೊಲೀಸ್ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಘಟನೆ ನಡೆದ ಕೆಲ ಗಂಟೆಗಳಲ್ಲಿಯೇ ಆರೋಪಿಯನ್ನು ಬಂಧಿಸುವಲ್ಲಿ ಸಫಲವಾಗಿದೆ.
ಪ್ರಕರಣದ ಹಿನ್ನೆಲೆ : ಮೇಲಿನ ತುಂಗಾನಗರ ಬಡಾವಣೆಯಲ್ಲಿ ಕೊಲೆಗೀಡಾದ ಮಣಿಕಂಠ ಹಾಗೂ ಆತನ ತಮ್ಮ ಆರೋಪಿ ಸಂತೋಷ ಜೊತೆಯಾಗಿ ವಾಸಿಸುತ್ತಿದ್ದರು. ಆರೋಪಿಗೆ ವಿವಾಹವಾಗಿದ್ದು, ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ತೊರೆದಿದ್ದಳು ಎಂಬ ಮಾಹಿತಿಯಿದೆ.
ಇವರು ವಾಸವಿದ್ದ ಮನೆಯ ಹಂಚಿಕೆ ವಿಚಾರದಲ್ಲಿ, ಇಬ್ಬರ ನಡುವೆ ಆಗಾಗ್ಗೆ ಗಲಾಟೆಯಾಗುತ್ತಿತ್ತು. ಜುಲೈ 26 ರ ರಾತ್ರಿ ಕೂಡ ಇಬ್ಬರ ನಡುವೆ ಕಲಹವಾಗಿದೆ. ಇದು ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾವಣೆಯಾಗಿದೆ.
ಮದ್ಯದ ಅಮಲಿನಲ್ಲಿದ್ದ ಆರೋಪಿಯು ಗದ್ದಲಿಯಿಂದ ಅಣ್ಣನ ತಲೆಗೆ ಹೊಡೆದಿದ್ದಾನೆ. ನಂತರ ಕಲ್ಲೊಂದನ್ನು ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ತದನಂತರ ರಾತ್ರಿ ಮನೆಯಲ್ಲಿಯೇ ನಿದ್ರಿಸಿದ್ದಾನೆ. ಜು. 27 ರ ಮುಂಜಾನೆ ನಿದ್ರೆಯಿಂದ ಎದ್ದ ನಂತರ ಮನೆಯಿಂದ ಪರಾರಿಯಾಗಿದ್ದ ಎಂದು ಪೊಲೀಸ್ ಇಲಾಖೆ ಮೂಲಗಳು ಮಾಹಿತಿ ನೀಡುತ್ತವೆ.
ಸದರಿ ಮನೆಯ ಸಮೀಪದಲ್ಲಿಯೇ ವಾಸವಾಗಿರುವ ಸಹೋದರಿಯು, ಎಂದಿನಂತೆ ಟೀ ಕೊಡಲು ಮನೆಗೆ ಆಗಮಿಸಿದಾಗ ಮಣಿಕಂಠ ಕೊಲೆಗೀಡಾಗಿರುವುದು ಹಾಗೂ ಮತ್ತೋರ್ವ ಸಹೋದರ ಕಣ್ಮರೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿದ್ದ ತುಂಗಾನಗರ ಠಾಣೆ ಪೊಲೀಸರು ಕೆಲ ಗಂಟೆಗಳಲ್ಲಿಯೇ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ಧಾರೆ.
Shimoga, Ju. 28: brother was arrested by the Shimoga Tunganagar Police Station on the charge of brutally murdering his elder brother at home and running away. A police team led by Tunganagar Police Station Inspector KT Gururaj conducted a swift operation and succeeded in arresting the accused within a few hours of the incident.