
bengaluru | ‘ಪೊಲೀಸರಿಗೆ ಸಾಮಾಜಿಕ ಬದ್ಧತೆಯಿರಬೇಕು’ : ಸಿಎಂ ಸಿದ್ದರಾಮಯ್ಯ
ಬೆಂಗಳೂರು (bangalore), ಆಗಸ್ಟ್ 30: ರಾಜ್ಯದಲ್ಲಿ ಜಾತಿವ್ಯವಸ್ಥೆಯಿದ್ದು, ಅನೇಕ ದುರ್ಬಲವರ್ಗದವರು ಜಾತಿ ತಾರತಮ್ಯವನ್ನು ಅನುಭವಿಸುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ದೌರ್ಜನ್ಯಗಳನ್ನು ತಡೆಗಟ್ಟಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ರಾಜಭವನದ್ಲಿ ನಡೆದ , ರಾಜ್ಯ ಗೃಹ ಇಲಾಖೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು
ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ಡಿಸಿಆರ್ ಇ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ನಾನು ಇತ್ತೀಚೆಗೆ ನಡೆಸಿದ ಪರಿಶೀಲನಾ ಸಭೆಯಲ್ಲಿ ಡಿಸಿಆರ್ ಇ ಪೊಲೀಸ್ ಠಾಣೆಗಳ ಕಾರ್ಯ ಮತ್ತು ಪ್ರಗತಿ ತೃಪ್ತಿದಾಯಕವಿಲ್ಲ ಎಂಬುದನ್ನು ಗಮನಿಸಿದ್ದೇನೆ.
ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ದುರ್ಬಲವರ್ಗದವರಿಗೆ ಸುರಕ್ಷತೆ ಒದಗಿಸುವ ಸರ್ಕಾರದ ಉದ್ದೇಶ ಸಫಲವಾಗಬೇಕು. ಇತರೆ ರಾಜ್ಯಗಳಿಗೆ ಹೋಲಿಸಿದರೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳ ವಿರುದ್ಧ ಶಿಕ್ಷೆಯ ಪ್ರಮಾಣ ಬಹಳ ಕಡಿಮೆಯಿದೆ. ಈ ಬಗ್ಗೆ ಪೊಲೀಸರು ಗಮನಹರಿಸಬೇಕು ಎಂದು ತಿಳಿಸಿದರು.
ಇಂದು ವಿಶಿಷ್ಠ ಸೇವೆ ಸಲ್ಲಿಸಿರುವ ಪೊಲೀಸರಿಗೆ ಕೊಡಮಾಡಲಾದ ಸೇವಾಪದಕದ ಹಿಂದೆ ಅವರ ಸೇವಾ ಮನೋಭಾವ, ಪ್ರಮಾಣಿಕತೆ ಹಾಗೂ ಪರಿಶ್ರಮವಿರುತ್ತದೆ. ಸಾಮಾಜಿಕ ಕಳಕಳಿಯೊಂದಿಗೆ ಸೇವೆ ಸಲ್ಲಿಸಿದಾಗ ಮಾತ್ರ ಇಂತಹ ಸಾಧನೆ ಸಾಧ್ಯವಾಗುತ್ತದೆ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಜನರ ಆಸ್ತಿಪಾಸ್ತಿ ಸಂರಕ್ಷಿಸುವುದು ಪೊಲೀಸರ ಜವಾಬ್ದಾರಿ. ದೇಶದಲ್ಲಿ ಶಾಂತಿ ನೆಮ್ಮದಿ ನೆಲೆಸುವಲ್ಲಿ ಪೊಲೀಸರ ಪಾತ್ರ ಅತ್ಯಂತ ಮಹತ್ವವಾದುದು.
ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ತಡೆಗಟ್ಟುವ ಜವಾಬ್ದಾರಿ ಸರ್ಕಾರ ಹಾಗೂ ಪೊಲೀಸಿನವರದ್ದಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಬಹಳಷ್ಟು ಅಪರಾಧಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪೊಲೀಸರಿಗೆ ಸಾಮಾಜಿಕ ಬದ್ದತೆಯಿದ್ದರೆ, ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಸಮಾಜದಲ್ಲಿನ ಅಸಮಾನತೆಗಳನ್ನು ತೊಡೆದು ಸಂವಿಧಾನ ನೀಡುವ ರಕ್ಷಣೆಯನ್ನು ಜಾರಿಗೊಳಿಸುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ. ಬಲಾಢ್ಯರ ಕೈಯ್ಯಲ್ಲಿ ಅಧಿಕಾರವಿದ್ದರೆ, ದುರ್ಬಲ ವರ್ಗದವರ ಜೀವನ ದುಸ್ತರವಾಗುತ್ತದೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಅವರು ತಿಳಿಸಿದ್ದರು.
ದುರ್ಬಲವರ್ಗಗಳ ಮೇಲಾಗುವ ದೌಜರ್ನ್ಯಗಳನ್ನು ಪೊಲೀಸರು ತಡೆಗಟ್ಟಬೇಕಿದೆ. ಸಾಮಾನ್ಯ ಜನರಿಗೆ ನ್ಯಾಯ ದೊರಕಿಸಿಕೊಡಬೇಕು. ಪೊಲೀಸರ ಸಂಖ್ಯೆಯ ಬಗ್ಗೆ ಗಮನಹರಿಸದೇ, ಅವರು ತಡೆಗಟ್ಟಿರುವ ಅಪರಾಧಗಳೆಷ್ಟು ಎಂದು ಪರಿಗಣಿಸಬೇಕಾಗಿದೆ ಎಂದರು.
ಇಂದಿನ ಪ್ರಶಸ್ತಿ ವಿಜೇತರ ಸಾಧನೆ ಶ್ಲಾಘನೀಯವಾಗಿದ್ದು, ಇತರರಿಗೆ ಮಾದರಿಯಾಗಬೇಕು. ಸಮಾಜದಲ್ಲಿನ ನ್ಯೂನ್ಯತೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಆತ್ಮವಿಮರ್ಶೆ ಮಾಡಿಕೊಂಡು ಉತ್ತಮ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.
Bengaluru, August 30: There is a caste system in the state and many weaker sections are facing caste discrimination. Chief Minister Siddaramaiah said that such cases should be taken seriously and atrocities should be prevented.