
shimoga | ಶಿವಮೊಗ್ಗ : ಪೊಲೀಸ್ ಅಧಿಕಾರಿಗಳಿಗೆ ಎಡಿಜಿಪಿ ಖಡಕ್ ಎಚ್ಚರಿಕೆ!
ಶಿವಮೊಗ್ಗ (shivamogga), ಆಗಸ್ಟ್ 2: ‘ಪ್ರಮುಖ ಗಣೇಶಮೂರ್ತಿಗಳು ಹಾಗೂ ಈದ್ ಮಿಲಾದ್ ಹಬ್ಬದ ಮೆರವಣಿಗೆಗಳ ಹಿನ್ನೆಲೆಯಲ್ಲಿ, ಬಂದೋಬಸ್ತ್ ಕಾರ್ಯಕ್ಕೆ ಶಿವಮೊಗ್ಗ ಜಿಲ್ಲೆಗೆ ಹೊರ ಜಿಲ್ಲೆಗಳಿಂದ ಆಗಮಿಸಿರುವ ಪೊಲೀಸ್ ಅಧಿಕಾರಿಗಳು, ಅತ್ಯಂತ ಜವಾಬ್ದಾರಿಯಿಂದ ಬಂದೋಬಸ್ತ್ ಕರ್ತವ್ಯ ನಿರ್ವಹಣೆ ಮಾಡಬೇಕು’ ಎಂದು ರಾಜ್ಯ ಪೊಲೀಸ್ ಇಲಾಖೆ ಕಾನೂನು – ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಆರ್ ಸೂಚಿಸಿದ್ದಾರೆ.
ಸೆಪ್ಟೆಂಬರ್ 1 ರ ಸಂಜೆ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ವಿಮರ್ಶನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಬಿಡುಗಡೆ ಮಾಡಿದ್ದು, ಸಭೆಯಲ್ಲಿ ಎಡಿಜಿಪಿ ನೀಡಿದ ಸಲಹೆ – ಸೂಚನೆಗಳ ಮಾಹಿತಿ ನೀಡಿದೆ.
ಎಚ್ಚರಿಕೆಯಿರಲಿ : ಈಗಾಗಲೇ 5 ದಿನಗಳ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಗಳು ಮುಕ್ತಾಯವಾಗಿವೆ. ಮುಂದಿನ ದಿನಗಳಂದು ಮುಖ್ಯವಾಗಿ ಭದ್ರಾವತಿ, ಶಿವಮೊಗ್ಗ, ರಿಪ್ಪನ್ ಪೇಟೆ, ಸಾಗರದ ಹಿಂದೂ ಮಹಾಸಭಾ ಗಣಪತಿಗಳ ವಿಸರ್ಜನಾ ಪೂರ್ವ ಮೆರವಣಿಗೆಗಳು ನಡೆಯಲಿವೆ. ಬಂದೋಬಸ್ತ್ ಕರ್ತವ್ಯವನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು ಎಂದು ತಿಳಿಸಿದ್ದಾರೆ.
ಹಾಗೆಯೇ ಶಿವಮೊಗ್ಗ ಜಿಲ್ಲೆಯ (ಸ್ಥಳೀಯ) ಅಧಿಕಾರಿಗಳು ಕೂಡ, ಬಂದೋಬಸ್ತ್ ಕರ್ತವ್ಯವನ್ನು ಜಾಗರೂಕತೆಯಿಂದ ನಿರ್ವಹಿಸಬೇಕು. ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು, ತಮಗೆ ನೇಮಕವಾದ ಸೆಕ್ಟರ್ ನಲ್ಲಿಯೇ ಕಾರ್ಯನಿರ್ವಹಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು ಎಂದು ತಾಕೀತು ಮಾಡಿದ್ದಾರೆ.
ಸಾಕಷ್ಟು ಮುಂಜಾಗ್ರತಾ ಕ್ರಮಗಳ ಪಾಲನೆ ಮಾಡಬೇಕು. ಮೆರವಣಿಗೆಗಳ ವೇಳೆ ಬೈಲೈನ್ ಪೆಟ್ರೋಲಿಂಗ್ ಕರ್ತವ್ಯವನ್ನು ಹೆಚ್ಚಾಗಿ ನಿರ್ವಹಿಸಬೇಕು. ಘೋಷಣೆಗಳನ್ನು ಕೂಗುವವರ ಮೇಲೆ ಅತ್ಯಂತ ಹೆಚ್ಚಿನ ನಿಗಾವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಮೆರವಣಿಗೆ ಹಾದು ಹೋಗುವ ಪ್ರಮುಖ ಸ್ಥಳಗಳಲ್ಲಿ ಡ್ರೋನ್ ಕ್ಯಾಮೆರಾ ಬಳಸಿಕೊಳ್ಳಬೇಕು. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ, ಮೆರವಣಿಗೆಗಳಲ್ಲಿ 75 ಡೆಸಿಬಲ್ ಗಿಂತ ಹೆಚ್ಚಿಗೆ ಶಬ್ದವನ್ನುಂಟು ಮಾಡುವವರ ವಿರುದ್ಧ ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಪೂರ್ವ ವಲಯ ಐಜಿಪಿ ಡಾ. ರವಿಕಾಂತೇ ಗೌಡ, ಎಸ್ಪಿ ಮಿಥುನ್ ಕುಮಾರ್ ಜಿ ಕೆ, ಬಿ ಎಂ ಟಿ ಎಫ್ ಪೊಲೀಸ್ ಅಧೀಕ್ಷರಾದ ಮುತ್ತುರಾಜ್, ಹುಬ್ಬಳ್ಳಿಯ ಐಎಸ್’ಡಿ ವಿಭಾಗದ ರಾಜೀವ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ ಎ ಜಿ, ಎಸ್ ರಮೇಶ್ ಕುಮಾರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
Shivamogga, August 2: ‘In the wake of important Ganesh idols and Eid Milad festival processions, police officers who have arrived in Shivamogga district from outside districts for bandobast work should perform bandobast duties with utmost responsibility’ — Hitendra R, ADGP, Law and Order Department, State Police Department