
shimoga palike news | ‘ಶಿವಮೊಗ್ಗ ಪಾಲಿಕೆ ಚುನಾವಣೆಯೂ ಇಲ್ಲ, ವ್ಯಾಪ್ತಿ ಪರಿಷ್ಕರಣೆಯೂ ಇಲ್ಲ..!’ : ಗಮನಿಸುವರೆ ಸಿಎಂ, ಸಚಿವರು?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಸೆಪ್ಟೆಂಬರ್ 3: ಇನ್ನೂ ಕೆಲ ತಿಂಗಳುಗಳು ಕಳೆದರೆ, ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಬರೋಬ್ಬರಿ ಎರಡು ವರ್ಷವಾಗಲಿದೆ. ರಾಜ್ಯ ಸರ್ಕಾರದ ನಿರಾಸಕ್ತಿಯಿಂದ ಇಲ್ಲಿಯವರೆಗೂ ಪಾಲಿಕೆ ವಾರ್ಡ್ ಗಳ ಚುನಾವಣೆ ನಿಗದಿಯಾಗಿಲ್ಲ!
ಮತ್ತೊಂದೆಡೆ, ಜಿಲ್ಲಾಡಳಿತ ಹಾಗೂ ಪಾಲಿಕೆ ಆಡಳಿತದ ದಿವ್ಯ ನಿರ್ಲಕ್ಷ್ಯದಿಂದ, ಕಳೆದ ಒಂದೂವರೆ ವರ್ಷದಿಂದ ನಡೆಯುತ್ತಿರುವ ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯೂ ಪೂರ್ಣ ಹಂತಕ್ಕೆ ಬಂದಿಲ್ಲ. ಸದ್ಯ ಸಂಪೂರ್ಣ ನೆನೆಗುದಿಗೆ ಬಿದ್ದಿದೆ.
ಇದರಿಂದ ಮಹಾನಗರ ಪಾಲಿಕೆ ಆಡಳಿತದಲ್ಲಿ, ನಾಗರೀಕರ ಗೋಳು ಕೇಳುವ ವ್ಯವಸ್ಥೆಯೇ ಇಲ್ಲದಂತಾಗಿದೆ. ಜನಸಾಮಾನ್ಯರಿಂದ ಆಡಳಿತ ದೂರವಾಗಿರುವ ದೂರುಗಳೂ ನಾಗರೀಕರದ್ದಾಗಿದೆ.
ಜನಪ್ರತಿನಿಧಿಗಳ ಅನುಪಸ್ಥಿತಿಯಿಂದ ಅಧಿಕಾರಿಗಳ ದರ್ಬಾರ್ ಮಿತಿಮೀರಲಾರಂಭಿಸಿದೆ. ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ಜನಸ್ನೇಹಿ ಆಡಳಿತ ಮರೆಯಾಗಿದೆ. ಪ್ರತಿಯೊಂದಕ್ಕೂ ನಾಗರೀಕರು ಪಾಲಿಕೆ ಕಚೇರಿಗೆ ಎಡತಾಕುವಂತಹ ದುಃಸ್ಥಿತಿ ನಿರ್ಮಾಣವಾಗಿದೆ.
ಚುನಾವಣೆ ಯಾವಾಗ? : ಈಗಾಗಲೇ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಆಡಳಿತಗಳಿಗೆ ಚುನಾವಣೆಯಿಲ್ಲದೆ, 5 ವರ್ಷದ ಅವಧಿ ಪೂರ್ಣಗೊಂಡಿದೆ. ಇದೇ ದುಃಸ್ಥಿತಿ ಶಿವಮೊಗ್ಗ ಪಾಲಿಕೆ ಆಡಳಿತಕ್ಕೂ ಎದುರಾಗುವ ಸಾಧ್ಯತೆಗಳು ಗೋಚರವಾಗುತ್ತಿದೆ. ಇಲ್ಲಿಯವರೆಗೂ ಚುನಾವಣೆಯ ಯಾವುದೇ ಪೂರ್ವಭಾವಿ ಸಿದ್ದತೆಗಳನ್ನು ರಾಜ್ಯ ಸರ್ಕಾರ ಆರಂಭಿಸಿಲ್ಲ.
ರಾಜ್ಯ ಚುನಾವಣಾ ಆಯೋಗವು ಅಧಿಕಾರಾವಧಿ ಪೂರ್ಣಗೊಳಿಸಿರುವ ರಾಜ್ಯದ ಪಾಲಿಕೆಗಳ ಚುನಾವಣೆ ನಡೆಸುವ ಸಂಬಂಧ, ಹಲವು ಬಾರಿ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಿದರೂ, ಇಲ್ಲಿಯವರೆಗೂ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿಲ್ಲ. ಯಾವಾಗ ಚುನಾವಣೆ ನಡೆಯಲಿದೆ ಎಂಬುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಪರಿಷ್ಕರಣೆಯೂ ನೆನೆಗುದಿಗೆ : ಸುಮಾರು 30 ವರ್ಷಗಳ ನಂತರ, ರಾಜ್ಯ ಸರ್ಕಾರದ ಸೂಚನೆಯಂತೆ ಶಿವಮೊಗ್ಗ ನಗರಾಡಳಿತ ವ್ಯಾಪ್ತಿ ಪರಿಷ್ಕರಣೆ ಆರಂಭಿಸಲಾಗಿದೆ. ಈಗಾಗಲೇ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಕುರಿತಂತೆ, ಪಾಲಿಕೆ ಆಡಳಿತ ಮೊದಲ ಹಂತದ ವರದಿ ಸಿದ್ದಪಡಿಸಿ, ಜಿಲ್ಲಾಡಳಿತಕ್ಕೆ ಸಲ್ಲಿಸಿದೆ.
ಪಾಲಿಕೆಗೆ ಸೇರ್ಪಡೆ ಮಾಡಿಕೊಳ್ಳಬಹುದಾದ ಪ್ರದೇಶಗಳ ಪಟ್ಟಿ ಸಿದ್ದಪಡಿಸಿದೆ. ಆದರೆ ನಗರಕ್ಕೆ ಹೊಂದಿಕೊಂಡಂತಿರುವ ಹಲವು ಜನವಸತಿ ಬಡಾವಣೆಗಳನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಿರಲಿಲ್ಲ. ಸದರಿ ಬಡಾವಣೆಗಳ ನಿವಾಸಿಗಳು, ತಮ್ಮ ಬಡಾವಣೆಗಳನ್ನು ಕೂಡ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, ನಾಗರೀಕರ ಬೇಡಿಕೆ ಪರಿಶೀಲಿಸಿ ಎರಡ್ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಪಾಲಿಕೆ ಆಡಳಿತಕ್ಕೆ ಸೂಚಿಸಿದ್ದರು. ಆದರೆ ಅವರು ಸೂಚನೆ ನೀಡಿ ತಿಂಗಳೂಗಳೇ ಉರುಳಿದರೂ, ಇಲ್ಲಿಯವರೆಗೂ ಪಾಲಿಕೆ ಆಡಳಿತ ವರದಿ ಸಲ್ಲಿಸಿಲ್ಲವೆಂಬ ಮಾಹಿತಿಗಳು ಜಿಲ್ಲಾಡಳಿತದ ಮೂಲಗಳು ತಿಳಿಸುತ್ತವೆ.
ವಾರ್ಡ್ ಗಳಿಂದ ದೂರ : ಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲದಿರುವುದರಿಂದ, ಅಧಿಕಾರಿ-ಸಿಬ್ಬಂದಿಗಳ ಮೇಲಿನ ಜವಾಬ್ದಾರಿ ಹೆಚ್ಚಿದೆ. ಅಧಿಕಾರಿಗಳು ವಾರ್ಡ್ ಗಳಿಗೆ ನಿಯಮಿತವಾಗಿ ಭೇಟಿಯಿತ್ತು ನಾಗರೀಕರ ಅಹವಾಲು ಆಲಿಸಬೇಕಾಗಿದೆ. ನಿಯಮಿತವಾಗಿ ವಾರ್ಡ್ ವ್ಯಾಪ್ತಿಗಳಲ್ಲಿ ನಾಗರೀಕರ ಸಭೆಗಳನ್ನು ನಡೆಸಬೇಕಾಗಿದೆ. ಆದರೆ ಕೆಲ ಹಿರಿಯ ಅಧಿಕಾರಿಗಳು ವಾರ್ಡ್ ಗೆ ಭೇಟಿ ನೀಡುವುದನ್ನೇ ಮರೆತಂತೆ ಕಾಣುತ್ತಿದೆ? ಇದರಿಂದ ನಾಗರೀಕರು ಸಣ್ಣಪುಟ್ಟ ಸಮಸ್ಯೆಗಳಿಗೂ ಪಾಲಿಕೆ ಕಚೇರಿಗಳಿಗೆ ಎಡತಾಕುವಂತಾಗಿದೆ ಎಂಬ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಸಿಎಂ ಗಮನಿಸಲಿ : ಶಿವಮೊಗ್ಗ ಪಾಲಿಕೆ ವಾರ್ಡ್ ಚುನಾವಣೆ, ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಹಾಗೂ ವಾರ್ಡ್ ಗಳ ಸಂಖ್ಯೆ ಹೆಚ್ಚಳದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ದಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಆದ್ಯ ಗಮನಹರಿಸಬೇಕಾಗಿದೆ. ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ, ಕಾಲಮಿತಿಯೊಳಗೆ ಕ್ರಮಕೈಗೊಳ್ಳಲಿದ್ದಾರೆಯೇ? ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
Shivamogga, September 3: In a few more months, it will be exactly two years without the rule of the people’s representatives in the Shivamogga Municipal Corporation. Due to the apathy of the state government, the elections for the municipal wards have not been scheduled till now!