
shimoga news | ಶಿವಮೊಗ್ಗದ ಹೊಸಮನೆ, ಶರಾವತಿ ನಗರದ ರಸ್ತೆಗಳಲ್ಲಿ ಹೆಚ್ಚುತ್ತಿರುವ ಅಪಘಾತ : ಆಡಳಿತಕ್ಕೆ ರೇಖಾ ರಂಗನಾಥ್ ಆಗ್ರಹವೇನು?
ಶಿವಮೊಗ್ಗ (shivamogga), ಸೆಪ್ಟೆಂಬರ್ 19: ಶಿವಮೊಗ್ಗ ನಗರದ ಹೊಸಮನೆ ಹಾಗೂ ಶರಾವತಿ ನಗರ ಬಡಾವಣೆಗಳಲ್ಲಿನ ರಸ್ತೆಗಳಲ್ಲಿ ದಿನದಿಂದ ದಿನಕ್ಕೆ ಅಪಘಾತಗಳು ಹೆಚ್ಚಾಗುತ್ತಿದ್ದು, ಸಾವು-ನೋವುಗಳು ಸಂಭವಿಸುತ್ತಿವೆ ಎಂದು ಮಹಾನಗರ ಪಾಲಿಕೆ ಮಾಜಿ ಕಾರ್ಪೋರೇಟರ್ ರೇಖಾ ರಂಗನಾಥ್ ತಿಳಿಸಿದ್ದಾರೆ.
ಸದರಿ ಬಡಾವಣೆಗಳಲ್ಲಿನ ಮುಖ್ಯ ರಸ್ತೆಗಳಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ, ಸೆಪ್ಟೆಂಬರ್ 19 ರಂದು ರೇಖಾ ರಂಗನಾಥ್ ನೇತೃತ್ವದಲ್ಲಿ, ಸ್ಥಳೀಯ ನಿವಾಸಿಗಳು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಟ್ರಾಫಿಕ್ ಪೊಲೀಸರಿಗೆ ಪ್ರತ್ಯೇಕವಾಗಿ ಮನವಿ ಪತ್ರ ಅರ್ಪಿಸಿದ್ದಾರೆ.
ಸಾವುನೋವು : ಶರಾವತಿ ನಗರ ಮುಖ್ಯ ರಸ್ತೆ ಹಾಗೂ ಜೈಲ್ ರಸ್ತೆಗೆ ಸಂಪರ್ಕ ಕಲ್ಪಿಸುವ ಚಾನಲ್ ಪಕ್ಕದ ರಸ್ತೆಯಲ್ಲಿ, ವಾಹನಗಳ ಸಂಚಾರ ಹೆಚ್ಚಾಗಿದೆ. ಹಾಗೆಯೇ ಅಪಘಾತಗಳ ಪ್ರಮಾಣವೂ ಕೂಡ ಏರಿಕೆಯಾಗಿದೆ. ಕಳೆದ ಕೆಲ ತಿಂಗಳುಗಳ ಹಿಂದೆ ಸದರಿ ರಸ್ತೆಯ ನಾಗಪ್ಪ ದೇವಾಲಯ ಬಳಿ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದನು. ಮತ್ತೋಂದು ಅಪಘಾತದಲ್ಲಿ ಯುವಕನೋರ್ವ ಗಂಭೀರ ಸ್ವರೂಪದ ಗಾಯಕ್ಕೆ ತುತ್ತಾಗಿದ್ದ ಎಂದು ರೇಖಾ ರಂಗನಾಥ್ ಅವರು ತಿಳಿಸಿದ್ದಾರೆ.
ಶರಾವತಿ ನಗರ ಹಾಗೂ ಹೊಸಮನೆ ಬಡಾವಣೆ ರಸ್ತೆಗಳನ್ನು, ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ದಿಗೊಳಿಸಲಾಗಿದೆ. ಇದೀಗ ಕೆಲ ವಾಹನ ಚಾಲಕರು ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದಾರೆ. ಇದರಿಂದ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದೆ ಎಂದು ದೂರಿದ್ದಾರೆ.
ಈ ಕಾರಣದಿಂದ ಜೈಲ್ ರಸ್ತೆ – ಶರಾವತಿ ನಗರ ಸಂಪರ್ಕಿಸುವ ಚಾನಲ್ ಪಕ್ಕದ ರಸ್ತೆ, ಶರಾವತಿ ನಗರ ಆದಿಚುಂಚನಗಿರಿ ಶಾಲೆ ಸಮೀಪದ ರಸ್ತೆ, ಎ ಮತ್ತು ಬಿ ಬ್ಲಾಕ್ ನಲ್ಲಿ ಹಾದು ಹೋಗುವ ಮುಖ್ಯ ರಸ್ತೆಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್ ಹಾಕಬೇಕು. ಸೂಚನಾ ಫಲಕ, ವೇಗ ನಿಯಂತ್ರಣ ಫಲಕಗಳ ಅಳವಡಿಕೆ ಮಾಡಬೇಕು ಎಂದು ರೇಖಾ ರಂಗನಾಥ್ ಅವರು ಆಗ್ರಹಿಸಿದ್ದಾರೆ.
ಮನವಿ ಅರ್ಪಿಸುವ ಸಂದರ್ಭದಲ್ಲಿ ಹೊಸಮನೆ ವಾರ್ಡ್ ಅಧ್ಯಕ್ಷ ರಾಜೇಶ್ ಮಂದಾರ, ಪಂಚ ಗ್ಯಾರಂಟಿ ಪ್ರಾಧಿಕಾರದ ಸದಸ್ಯರಾದ ಬಸವರಾಜ್, ಸ್ಥಳೀಯರಾದ ಕೆ ಎಲ್ ಪವನ್, ರಾಘವೇಂದ್ರ ರಾವ್, ಶ್ರೀಕಾಂತ್, ಹರೀಶ್ ಮೊದಲಾದವರಿದ್ದರು.
Shivamogga, September 19: Former corporator Rekha Ranganath has alleged that accidents are increasing day by day on the roads in Hosamane and Sharavathi Nagar areas of Shivamogga city, resulting in deaths and injuries.