
shimoga news | ಶಿವಮೊಗ್ಗದ ಕಾಶೀಪುರ ಫ್ಲೈ ಓವರ್ ಬಳಿ ಘನತ್ಯಾಜ್ಯದ ರಾಶಿ – ನಾಗರೀಕರ ಆಕ್ರೋಶ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಅಕ್ಟೋಬರ್ 18: ಶಿವಮೊಗ್ಗ ನಗರದ ಕಾಶೀಪುರ ರೈಲ್ವೆ ಗೇಟ್ ಬಳಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಸುಸಜ್ಜಿತ ರೈಲ್ವೆ ಮೇಲ್ಸೇತುವೆ (ಫ್ಲೈ ಓವರ್) ನಿರ್ಮಿಸಲಾಗಿದೆ. ಆದರೆ ಸದರಿ ಫ್ಲೈ ಓವರ್ ಕೆಳಭಾಗವನ್ನು, ಕೆಲವರು ಘನತ್ಯಾಜ್ಯ ವಿಲೇವಾರಿ ತಾಣವಾಗಿ ಪರಿವರ್ತಿಸಿದ್ದಾರೆ!
ಹೌದು. ರೈಲ್ವೆ ಹಳಿ ಪಕ್ಕದ ಫ್ಲೈ ಓವರ್ ಕೆಳಭಾಗದಲ್ಲಿ, ಕೆಲವರು ಭಾರೀ ಪ್ರಮಾಣದಲ್ಲಿ ಕಟ್ಟಡದ ನಿರುಪಯುಕ್ತ ಸಾಮಗ್ರಿ ಸೇರಿದಂತೆ ಘನತ್ಯಾಜ್ಯ, ಕೊಳಚೆ ವಸ್ತುಗಳನ್ನು ಕಾನೂನುಬಾಹಿರವಾಗಿ ತಂದು ಹಾಕುತ್ತಿದ್ದಾರೆ. ಈಗಾಗಲೇ ಸದರಿ ಸ್ಥಳದಲ್ಲಿ ಅಪಾರ ಪ್ರಮಾಣದ ಕಸದ ರಾಶಿ ಸಂಗ್ರಹವಾಗಿದೆ ಎಂದು ನಾಗರೀಕರು ಆರೋಪಿಸುತ್ತಾರೆ.
‘ಫ್ಲೈ ಓವರ್ ಕೆಳಭಾಗದ ಇಕ್ಕೆಲದ ರಸ್ತೆ ಮೂಲಕ ಕನಕ ನಗರ, ಪಿ ಅಂಡ್ ಟಿ ಕಾಲೋನಿ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಿಗೆ ನಾಗರೀಕರು ಸಂಚರಿಸುತ್ತಾರೆ. ಆದರೆ ಫ್ಲೈ ಓವರ್ ಕೆಳಭಾಗದಲ್ಲಿನ ವಿಶಾಲವಾದ ಖಾಲಿ ಜಾಗದಲ್ಲಿ ಬೇಕಾಬಿಟ್ಟಿಯಾಗಿ ಕಟ್ಟಡ ಸಾಮಗ್ರಿ, ಕೊಳಚೆ ವಸ್ತುಗಳನ್ನು ನಗರದ ವಿವಿಧೆಡೆಯಿಂದ ತಂದು ಸುರಿಯುತ್ತಿದ್ದಾರೆ.
ಹಗಲು ವೇಳೆಯೇ ಟ್ರ್ಯಾಕ್ಟರ್, ಲಾರಿಗಳಲ್ಲಿ ಘನತ್ಯಾಜ್ಯ ವಸ್ತುಗಳನ್ನು ತಂದು ಹಾಕಲಾಗುತ್ತಿದೆ. ಕಸದ ಗುಡ್ಡವೇ ನಿರ್ಮಾಣವಾಗುತ್ತಿದೆ. ಇದರಿಂದ ದುರ್ನಾತ ಬೀರುತ್ತಿದೆ. ನಾಗರೀಕರು ಓಡಾಡಲು ತೊಂದರೆಯಾಗಿ ಪರಿಣಮಿಸುತ್ತಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಸ್ವಚ್ಛವಾಗಿರುವ ಪರಿಸರವನ್ನು ಹಾಳು ಮಾಡುತ್ತಿದ್ದಾರೆ’ ಎಂದು ಸ್ಥಳೀಯ ನಾಗರೀಕರು ಆರೋಪಿಸುತ್ತಾರೆ.
ಗಮನಿಸಲಿ : ಫ್ಲೈ ಓವರ್ ತಳಭಾಗದಲ್ಲಿ ಕಸ ಹಾಕಿ ಪರಿಸರ ಮಲೀನ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಅವರ ವಾಹನ ಮುಟ್ಟುಗೋಲು ಹಾಕಿಕೊಳ್ಳಬೇಕು. ಅವರಿಂದಲೇ ಸದರಿ ಸ್ಥಳದಲ್ಲಿ ಹಾಕಿರುವ ಕಸದ ರಾಶಿ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು.
ಹಾಗೆಯೇ ಫ್ಲೈ ಓವರ್ ಕೆಳಭಾಗದಲ್ಲಿ ಅನದಿಕೃತ ಚಟುವಟಿಕೆಗಳಿಗೆ ಅವಕಾಶವಾಗದಂತೆ ತಂತಿ ಬೇಲಿ ಹಾಕಬೇಕು. ಸೂಚನಾ ಫಲಕ ಅಳವಡಿಸಬೇಕು. ತಕ್ಷಣವೇ ಮಹಾನಗರ ಪಾಲಿಕೆ ಆಡಳಿತ, ರೈಲ್ವೆ ಹಾಗೂ ಪಿಡಬ್ಲ್ಯೂಡಿ ಇಲಾಖೆಯವರು ಇತ್ತ ಗಮನಹರಿಸಬೇಕು ಎಂದು ಸ್ಥಳೀಯ ನಾಗರೀಕರು ಆಗ್ರಹಿಸುತ್ತಾರೆ.
Shivamogga, October 18: A well-equipped railway flyover has been built near Kashipur Railway Gate in Shivamogga city at a cost of crores of rupees. But some people have converted the lower part of the flyover into a solid waste disposal site!