
bhadravati | ಭದ್ರಾವತಿ | ಹೊಳೆಹೊನ್ನೂರು : ಯುವಕನ ಮೇಲೆ ಮಚ್ಚಿನಿಂದ ದಾಳಿ ಪ್ರಕರಣ – ನಾಲ್ವರ ಬಂಧನ!
ಭದ್ರಾವತಿ (bhadravathi), ಅಕ್ಟೋಬರ್ 18: ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಮೂಡಲ ವಿಠಲಾಪುರ ಗ್ರಾಮದ ಬಳಿ, ಯುವಕನೋರ್ವನ ಮೇಲೆ ಮಚ್ಚಿನಿಂದ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಟಿಪ್ಪು ನಗರದ ನಿವಾಸಿಗಳಾದ ಮುಬಾರಕ್ (24), ಪೌಹದ್ (23), ತೋಹಿಬ್ (22) ಹಾಗೂ ತನ್ವೀರ್ (24) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಆನವೇರಿ ಗ್ರಾಮದ ತೌಫಿಕ್ (32) ಹಲ್ಲೆಯಿಂದ ಗಾಯಗೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತನನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗದಿಂದ ಹಿಂದಿರುಗುತ್ತಿದ್ದ ತೌಫಿಕ್ ನನ್ನು, ಕಾರಿನಲ್ಲಿ ಆರೋಪಿಗಳು ಹಿಂಬಾಲಿಸಿಕೊಂಡು ಬಂದಿದ್ದಾರೆ. ಮೂಡಲ ವಿಠಲಾಪುರ ಗ್ರಾಮದ ಹೋಟೆಲ್ ವೊಂದರಲ್ಲಿ ತೌಫಿಕ್ ತಿಂಡಿ ತಿನ್ನಲು ತೆರಳಿದ ವೇಳೆ, ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ. ಇಬ್ಬರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಕ್ರಮಕೈಗೊಂಡಿದ್ದಾರೆ. ಇನ್ಸ್’ಪೆಕ್ಟರ್ ಶಿವಪ್ರಸಾದ್ ಮತ್ತವರ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ಕಾರಣವೇನು? : ಹಲ್ಲೆಗೊಳಗಾದ ತೌಫಿಕ್ ಹಾಗೂ ಆರೋಪಿಗಳ ನಡುವೆ ಮಾಂಸ ವ್ಯವಹಾರದ ಸಂಬಂಧದ ಹಣಕಾಸಿನ ವ್ಯವಹಾರವಿತ್ತು ಎನ್ನಲಾಗಿದೆ. ಹಾಗೆಯೇ ದನಗಳ ಕಳ್ಳ ಸಾಗಾಣೆ ದಂಧೆಯಲ್ಲಿ ತೊಡಗಿಕೊಂಡಿದ್ದವರ ಬಗ್ಗೆ ತೌಫಿಕ್ ಪೊಲೀಸರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಆರೋಪಿಗಳು ತೌಫಿಕ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.
Shivamogga, October 18: Police have arrested four accused in connection with a case of a machete attack on a youth near Mudala Vithalapur village under Holehonnur police station limits in Bhadravati taluk.