The number of borewells being drilled in Shivamogga city is increasing: Is the administration turning a blind eye?! *Is the focus shifting towards strengthening public drinking water supply? ಶಿವಮೊಗ್ಗ ನಗರದಲ್ಲಿ ಹೆಚ್ಚಾಗುತ್ತಿದೆ ಬೋರ್ವೆಲ್ ಗಳ ಕೊರೆತ : ಕಣ್ಮುಚ್ಚಿ ಕುಳಿತ್ತಿದೆಯೇ ಆಡಳಿತ?! *ಸಾರ್ವಜನಿಕ ಕುಡಿಯುವ ನೀರು ಪೂರೈಕೆಯ ಬಲವರ್ಧನೆಯತ್ತ ಹರಿಯುವುದೆ ಚಿತ್ತ?

shimoga news | ಶಿವಮೊಗ್ಗ ನಗರದಲ್ಲಿ ಹೆಚ್ಚಾಗುತ್ತಿದೆ ಬೋರ್‌ವೆಲ್‌ ಗಳ ಕೊರೆತ : ಕಣ್ಮುಚ್ಚಿ ಕುಳಿತಿದೆಯೇ ಆಡಳಿತ?!

ಶಿವಮೊಗ್ಗ (shivamogga), ಡಿಸೆಂಬರ್ 23: ಶಿವಮೊಗ್ಗ ನಗರ ಹಾಗೂ ಹೊರವಲಯದಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡುವ ಮುಕ್ಕಾಲುಪಾಲು ಜನರು, ಕೊಳವೆ ಬಾವಿ (ಬೋರ್‌ವೆಲ್‌ ಗಳ) ಯ ಮೊರೆ ಹೋಗುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಬೋರ್‌ವೆಲ್‌ ಕೊರೆತ ಹೆಚ್ಚಾಗುತ್ತಿದ್ದು, ಇದು ಸಾರ್ವಜನಿಕ ನೀರು ಪೂರೈಕೆ ವ್ಯವಸ್ಥೆಯ ಬಲವರ್ಧನೆಯ ತುರ್ತು ಅಗತ್ಯತೆ ತೋರ್ಪಡಿಸುತ್ತಿದೆ.

ಶಿವಮೊಗ್ಗ ನಗರಕ್ಕೆ ತುಂಗಾ ನದಿಯು ಪ್ರಾಕೃತಿಕ ವರದಾನವಾಗಿದೆ ಎಂದರೆ ತಪ್ಪಾಗಲಾರದು. ಗಾಜನೂರು ಗ್ರಾಮದಲ್ಲಿರುವ ತುಂಗಾ ಜಲಾಶಯದಿಂದ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ತುಂಗಾ ನದಿಯ ನೀರಿನಿಂದ ದಿನನಿತ್ಯ ಲಕ್ಷಾಂತರ  ನಾಗರೀಕರ ದಾಹ ತಣಿಸುವ ಕಾರ್ಯ ನಡೆಸಲಾಗುತ್ತಿದೆ.

ಆದರೆ ಬೆಳೆಯುತ್ತಿರುವ ನಗರ, ಜನಸಂಖ್ಯೆಗೆ ಅನುಗುಣವಾಗಿ ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನವಾಗಿಲ್ಲ. ತುಂಗಾ ಜಲಾಶಯದಿಂದ ಕುಡಿಯುವ ನೀರಿನ ಬಳಕೆಯ ಯಥೇಚ್ಛ ಅವಕಾಶಗಳಿದ್ದರೂ ಆಡಳಿತಗಾರರ ನಿರ್ಲಕ್ಷ್ಯದಿಂದ ಯೋಜನೆಗಳು ಅನುಷ್ಠಾನವಾಗುತ್ತಿಲ್ಲ.

ಇದರಿಂದ ನಗರದ ಹೊರವಲಯದ ಅದೆಷ್ಟೊ ಬಡಾವಣೆಗಳಿಗೆ ಇಲ್ಲಿಯವರೆಗೂ ಸಾರ್ವಜನಿಕ ನೀರಿನ ಸಂಪರ್ಕ ವ್ಯವಸ್ಥೆಯೇ ಲಭ್ಯವಾಗದಂತಾಗಿದೆ! ಹೊಸದಾಗಿ ಮನೆ ಸೇರಿದಂತೆ ಇತರೆ ಕಟ್ಟಡ ನಿರ್ಮಾಣ ಮಾಡುವವರು, ಬೇರೆ ಆಯ್ಕೆಗಳಿಲ್ಲದೆ ಬೋರ್‌ವೆಲ್‌ ಕೊರೆಯಿಸುವಂತಾಗಿದೆ.

ನಗರದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಲೇಔಟ್ ಗಳಲ್ಲಿ ಕಟ್ಟಡ ನಿರ್ಮಾಣ ಮಾಡುವ ಪ್ರತಿಯೋರ್ವರು ಕೂಡ ಬೋರ್‌ವೆಲ್‌ ಕೊರೆಯಿಸುವ ಜರೂರತ್ತಿದೆ. ಇದಕ್ಕಾಗಿ ಲಕ್ಷಾಂತರ ರೂ. ವ್ಯಯಿಸುತ್ತಿದ್ದಾರೆ.

ಗಮನಿಸಲಿ : ರಾಷ್ಟ್ರ – ರಾಜ್ಯದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ 2 ನೇ ಹಂತದ ನಗರಗಳಲ್ಲಿ ಶಿವಮೊಗ್ಗವೂ ಒಂದಾಗಿದೆ. ನಗರ ವ್ಯಾಪ್ತಿ, ಜನಸಂಖ್ಯೆ ಹೆಚ್ಚಾಗುತ್ತಿದೆ. ಈ ಕಾರಣದಿಂದ ಶಿವಮೊಗ್ಗ ನಗರದ ಹೊರವಲಯದ ಬಡಾವಣೆ, ಗ್ರಾಮಗಳಿಗೂ ತುಂಗಾ ಜಲಾಶಯದಿಂದ ನೀರು ಪೂರೈಕೆಯ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕಾಗಿದೆ.

ಇದರಿಂದ ನಾಗರೀಕರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗುತ್ತದೆ. ಸಾರ್ವಜನಿಕ ಕುಡಿಯುವ ನೀರು ಲಭ್ಯವಾದರೆ, ಹೊಸದಾಗಿ ಕಟ್ಟಡ ನಿರ್ಮಾಣ ಮಾಡುವ ಅರ್ಧದಷ್ಟು ಜನರಾದರೂ ಬೋರ್‌ವೆಲ್‌ ಕೊರೆಯಿಸುವ ಗೋಜಿಗೆ ಹೋಗುವುದಿಲ್ಲ. ಬೋರ್‌ವೆಲ್‌ ಗಳ ಅನಗತ್ಯ ಕೊರೆತಕ್ಕೆ ಕಡಿವಾಣ ಬೀಳುತ್ತದೆ.

ಎಲ್ಲದಕ್ಕಿಂತ ಮುಖ್ಯವಾಗಿ ಬೋರ್‌ವೆಲ್‌ ಗಳ ಯರ್ರಾಬಿರ್ರಿ ಕೊರೆತದಿಂದ ಭೂಮಿ ಮೇಲಾಗುವ ಒತ್ತಡ, ಅಂತರ್ಜಲದ ದುರ್ಬಳಕೆ, ಪ್ರಾಕೃತಿಕ ಅಸಮತೋಲನಕ್ಕೆ ಕಡಿವಾಣ ಬೀಳಲಿದೆ. ನಾಗರೀಕರಿಗೂ ಬೋರ್‌ವೆಲ್‌ ಕೊರೆಯಿಸುವುದರಿಂದ ಉಂಟಾಗುವ ಹೊರೆ ತಪ್ಪಲಿದೆ ಎಂಬುವುದು ಜಲತಜ್ಞರ ಅಭಿಪ್ರಾಯವಾಗಿದೆ.

*** ಶಿವಮೊಗ್ಗ ನಗರ ಸೇರಿದಂತೆ ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಮಗಳಿಗೆ, ಮುಂದಿನ 50 ರಿಂದ 60 ವರ್ಷಗಳವರೆಗೆ ಗಾಜನೂರು ತುಂಗಾ ಜಲಾಶಯದಿಂದ ಕುಡಿಯುವ ನೀರು ಪೂರೈಕೆಯ ಯೋಜನೆಯೊಂದನ್ನು ಜಲ ಮಂಡಳಿ ಆಡಳಿತ ಸಿದ್ದಪಡಿಸಿದೆ. ಈ ಹಿಂದೆ ಶಿವಮೊಗ್ಗ ಜಲ ಮಂಡಳಿಯ ಕಾರ್ಯಪಾಲಕ ಅಭಿಯಂತರರುಗಳಾಗಿ ಕಾರ್ಯನಿರ್ವಹಣೆ ಮಾಡಿದ್ದ ರವಿಕುಮಾರ್, ಪುಟ್ಟಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಿಥುನ್ ಕುಮಾರ್ ರವರು ಮಹತ್ತರ ಜನೋಪಯೋಗಿ ನೀಲನಕ್ಷೆಯೊಂದನ್ನು ಸಿದ್ದಪಡಿಸಿಟ್ಟಿದ್ದಾರೆ.

ಪುಟ್ಟಯ್ಯರವರು ಕಾರ್ಯಪಾಲಕ ಅಭಿಯಂತರರಾಗಿದ್ದ ವೇಳೆ, ಗಾಜನೂರು ಗ್ರಾಮದ ಬಳಿ ಹೊಸ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆಂದು ಜಾಗ ಗುರುತಿಸಿ, ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಸರ್ಕಾರದಿಂದ ಅನುಮತಿ ಪಡೆಯುವ ಹಂತದ ವೇಳೆಯೇ, ಅವರನ್ನು ದಿಢೀರ್ ಆಗಿ ಶಿವಮೊಗ್ಗದಿಂದ ವರ್ಗಾವಣೆಗೊಳಿಸಲಾಗಿತ್ತು. ಸದ್ಯ ಹೊಸ ನೀರು ಶುದ್ಧೀಕರಣ ಘಟಕ ಸ್ಥಾಪನೆಯ ಯೋಜನೆಯು ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಜಿಲ್ಲಾಡಳಿತದಿಂದಲೂ ಅಗತ್ಯ ಜಾಗ ಮಂಜೂರಾಗಿಲ್ಲವೆಂಬ ಮಾಹಿತಿಗಳಿವೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಆದ್ಯ ಗಮನಹರಿಸಬೇಕಾಗಿದೆ. ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ.

*** ಶಿವಮೊಗ್ಗ ನಗರದಲ್ಲಿ ಪ್ರಸ್ತುತ ಕೋಟ್ಯಾಂತ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿರುವ, 24X7 ಯೋಜನೆಯ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಯೋಜನೆ ಆರಂಭಕ್ಕೂ ಮುನ್ನ, ದಿನದ 24 ಗಂಟೆಗಳ ಕಾಲ ನೀರು ಪೂರೈಕೆ ಮಾಡಲಾಗುವುದು, ಕುಡಿಯುವ ನೀರು ಪೂರೈಕೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ನಾಗರೀಕರಿಗೆ ಭರವಸೆ ನೀಡಲಾಗಿತ್ತು. ಆದರೆ ಸದರಿ ಯೋಜನೆಯಡಿ ನಗರದ ಮುಕ್ಕಾಲುಪಾಲು ಪ್ರದೇಶಗಳಿಗೆ ದಿನದ 24 ಗಂಟೆಯಿರಲಿ, ಕೆಲ ಗಂಟೆಯೂ ನೀರು ಪೂರೈಕೆಯಾಗುತ್ತಿಲ್ಲ. ಈ ಕಾರಣದಿಂದ ತುಂಗಾ ಜಲಾಶಯದಿಂದ ಪರಿಣಾಮಕಾರಿಯಾಗಿ ನೀರು ಬಳಕೆಯ ಯೋಜನೆಗಳ ಅನುಷ್ಠಾನದತ್ತ ಆಡಳಿತಗಾರರು ಚಿತ್ತ ಹರಿಸಬೇಕಾಗಿದೆ.

shivamogga : It is becoming inevitable for those constructing new buildings in Shivamogga city and its outskirts to drill borewells. The number of borewells being drilled is increasing year by year, highlighting the urgent need to strengthen public water supply.

Shivamogga: Mother and daughter who went to a ceremony go missing! ಶಿವಮೊಗ್ಗ : ಸಮಾರಂಭಕ್ಕೆ ಹೋದ ತಾಯಿ – ಮಗಳು ನಾಪತ್ತೆ! Previous post shimoga news | ಶಿವಮೊಗ್ಗ : ಸಮಾರಂಭಕ್ಕೆ ಹೋದ ತಾಯಿ – ಮಗಳು ನಾಪತ್ತೆ!
Auto rickshaw prepaid counters at KSRTC and private bus stands in Shivamogga city: DC information ಶಿವಮೊಗ್ಗ ನಗರದ ಕೆಎಸ್ಆರ್ಟಿಸಿ - ಖಾಸಗಿ ಬಸ್ ನಿಲ್ದಾಣಗಳಲ್ಲಿ ಆಟೋ ರಿಕ್ಷಾ ಪ್ರೀ ಪೇಯ್ಡ್ ಕೌಂಟರ್ : ಡಿಸಿ ಮಾಹಿತಿ Next post shimoga news | ಶಿವಮೊಗ್ಗ ನಗರದ ಕೆಎಸ್‌ಆರ್‌ಟಿಸಿ – ಖಾಸಗಿ ಬಸ್ ನಿಲ್ದಾಣಗಳಲ್ಲಿ ಆಟೋ ಪ್ರೀ ಪೇಯ್ಡ್ ಕೌಂಟರ್ : DC ಮಾಹಿತಿ