ಶಿಕಾರಿಪುರ (shikaripur), ಜನವರಿ 14: ಸರ್ಕಾರಿ ಶಾಲೆಯ ಕೊಠಡಿಯಲ್ಲಿಯೇ ಶಿಕ್ಷಕರೋರ್ವರು ನೇಣು ಬಿಗಿದುಕೊಂಡು ಆ*ತ್ಮಹ*ತ್ಯೆಗೆ ಶರಣಾದ ಘಟನೆ ಶಿಕಾರಿಪುರ ತಾಲೂಕಿನ ಬಳೂರು ಗ್ರಾಮದಲ್ಲಿ ಜನವರಿ 13 ರಂದು ನಡೆದಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಧನಂಜಯಪ್ಪ (51) ಆ*ತ್ಮಹ*ತ್ಯೆಗೆ ಶರಣಾದ ಶಿಕ್ಷಕರೆಂದು ಗುರುತಿಸಲಾಗಿದೆ. ಇವರು ಹೊನ್ನಾಳ್ಳಿಯಲ್ಲಿ ನೆಲೆಸಿದ್ದು, ಅಲ್ಲಿಂದ ಪ್ರತಿನಿತ್ಯ ಶಾಲೆಗೆ ಆಗಮಿಸುತ್ತಿದ್ದರು.
ಬೆಳಿಗ್ಗೆ 11.30 ರ ಸರಿಸುಮಾರಿಗೆ ತರಗತಿ ಕೊಠಡಿಯಲ್ಲಿದ್ದ ಮಕ್ಕಳನ್ನು ಹೊರಗೆ ಕಳುಹಿಸಿರುವ ಧನಂಜಯಪ್ಪರವರು, ಕೊಠಡಿಯ ಬಾಗಿಲು ಹಾಕಿಕೊಂಡು ಆ*ತ್ಮಹ*ತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿದ ಸಹ ಶಿಕ್ಷಕರು ತಕ್ಷಣವೇ ಅವರನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧನಂಜಯಪ್ಪರವರ ಆ*ತ್ಮಹ*ತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

