
ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದಿಂದಲೇ ರಸ್ತೆ ಒತ್ತುವರಿ! : ಮುಖಂಡರ ಎಚ್ಚರಿಕೆ
ಶಿವಮೊಗ್ಗ, ಜೂ. 12: ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (shivamogga bhadravathi urban development authority) ವು ತನ್ನ ಕಚೇರಿ ಪಕ್ಕದ ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿಕೊಂಡು, ಕಾರು ನಿಲುಗಡೆ ಶೆಡ್ ನಿರ್ಮಿಸಿದೆ. ಇದು ಕಾನೂನುಬಾಹಿರವಾಗಿದ್ದು, ತಕ್ಷಣವೇ ಶೆಡ್ ತೆರವುಗೊಳಿಸಬೇಕು ಎಂದು ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಮುಖಂಡ ಕೆ.ವಿ.ವಸಂತಕುಮಾರ್ ಆಗ್ರಹಿಸಿದ್ದಾರೆ.
ಪ್ರಾಧಿಕಾರದ ಈ ನಡೆಯು ಬೇಲಿಯೇ ಎದ್ದು ಹೊಲ ಮೇಯ್ದದಂತಿದೆ. ಕಳೆದ ಹಲವು ವರ್ಷಗಳಿಂದ ಜನ – ವಾಹನ ಸಂಚಾರವಿರುವ ರಸ್ತೆಯನ್ನು ಒತ್ತುವರಿ (encroachment) ಮಾಡಲಾಗಿದೆ. ಶೆಡ್ ನಿರ್ಮಿಸಲಾಗಿದೆ. ಇದು ಖಂಡನಾರ್ಹವಾದುದಾಗಿದೆ ಎಂದು ದೂರಿದ್ದಾರೆ.
ಸೂಡಾ ಆಡಳಿತವೇ 2030 ರ ಮಹಾ ಯೋಜನೆಯಡಿ ರಸ್ತೆ ಎಂದು ಗುರುತಿಸಿತ್ತು. ಆದರೆ 2012 ರ ಯೋಜನೆಯಡಿ ರಸ್ತೆಯಿರಲಿಲ್ಲ ಎಂದು ಸೂಡಾ ಆಡಳಿತ ಹೇಳುತ್ತದೆ. ಸದರಿ ಶೆಡ್ ಕಳೆದ 5 ತಿಂಗಳ ಹಿಂದೆ ಶೆಡ್ ನಿರ್ಮಿಸಲಾಗಿತ್ತು. ಈ ವೇಳೆ ಚಾಲ್ತಿಯಲ್ಲಿದ್ದುದು 2030 ರ ಮಹಾ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ.
ನಿಯಮದ ಪ್ರಕಾರ ಮಹಾಯೋಜನೆಯಡಿ ಗುರುತಿಸಲಾದ ಸ್ಥಳವನ್ನು ಬದಲಾವಣೆಗೊಳಿಸುವ ಅಧಿಕಾರ ಸೂಡಾಕ್ಕಿಲ್ಲ. ಆದರೆ ಕಾನೂನುಬಾಹಿರವಾಗಿ (illegal) ಸೂಡಾ ಆಡಳಿತವು ರಸ್ತೆಯಲ್ಲಿಯೇ ಶೆಡ್ (shed) ನಿರ್ಮಾಣ ಮಾಡಿದೆ. ಇದು ಅಪರಾಧಿಕ ಕೃತ್ಯವಾಗಿದೆ ಎಂದು ತಿಳಿಸಿದ್ದಾರೆ.
ಸೂಡಾ ಆಡಳಿತದ ಸ್ಪಷ್ಟನೆ ಒಪ್ಪಲು ಸಾಧ್ಯವೇ ಇಲ್ಲವಾಗಿದೆ. ಕಾನೂನು ಏನೆಂಬುವುದನ್ನು ತಿಳಿಸಿದ್ದೆವೆ. ಒಂದು ವಾರದೊಳಗೆ ಶೆಡ್ ತೆರವುಗೊಳಿಸಿ ಜನ – ವಾಹನ ಸಂಚಾರಕ್ಕೆ ರಸ್ತೆ (road) ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಪ್ರಾಧಿಕಾರದ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು.
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಳ್ಳುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಹಾಗೆಯೇ ಲೋಕಾಯುಕ್ತ ಸಂಸ್ಥೆಗೂ ದೂರು ನೀಡಲಾಗುವುದು ಎಂದು ಕೆ.ವಿ.ವಸಂತಕುಮಾರ್ (k v vasanthakumar) ಅವರು ಸ್ಪಷ್ಟಪಡಿಸಿದ್ದಾರೆ.