
ಸಿಎಂ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ : ಮುಂದೇನು?
ಬೆಂಗಳೂರು (bengaluru), ಆ. 17: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (muda) ದ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ, ಸಿಎಂ ಸಿದ್ದರಾಮಯ್ಯ (cm siddaramaiah) ವಿರುದ್ದ ರಾಜ್ಯಪಾಲ (governor) ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್ (prosecution) ಗೆ ಅನುಮತಿ ನೀಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ನಂತರ ಮುಂದೇನಾಗಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಕೆಲ ಕಾನೂನು ತಜ್ಞರು ಕಾನೂನು ಪ್ರಕ್ರಿಯೆಗಳ ಬಗ್ಗೆ ತಮ್ಮದೆ ಆದ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಸಿಎಂ ವಿರುದ್ದ ವಿಚಾರಣೆಗೆ ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು, ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಅನುಮತಿ ಆಧಾರದೊಂದಿಗೆ ಸೆಷನ್ಸ್ ನ್ಯಾಯಾಲಯದಲ್ಲಿ ತನಿಖೆಗೆ ಆದೇಶ ನೀಡುವಂತೆ ಮನವಿ ಮಾಡಬೇಕಾಗುತ್ತದೆ.
ನ್ಯಾಯಾಲಯವು ಅರ್ಜಿದಾರರ ಹೇಳಿಕೆಯನ್ನು ದಾಖಲಿಸಿಕೊಂಡು, ಅರ್ಜಿದಾರರ ಕೋರಿಕೆಗೆ ಮನ್ನಣೆ ನೀಡಬಹುದು ಅಥವಾ ತಿರಸ್ಕರಿಸಬಹುದಾಗಿದೆ. ಒಂದು ವೇಳೆ ತನಿಖೆಗೆ ಅನುಮತಿ ನೀಡಿದರೆ ಲೋಕಾಯುಕ್ತ ಅಥವಾ ಪೊಲೀಸ್ ತನಿಖೆಗೆ ಒಪ್ಪಿಸಬಹುದು. ನಂತರ ಎಫ್.ಐ.ಆರ್ (fir) ದಾಖಲಿಸಿಕೊಂಡು ತನಿಖೆ ಆರಂಭವಾಗುತ್ತದೆ ಎಂದು ಹೇಳುತ್ತಾರೆ.
ನ್ಯಾಯಾಲಯದ ತೀರ್ಪಿನ ವಿರುದ್ದ ಸಿಎಂ ಹೈಕೋರ್ಟ್ (high court) ತದನಂತರ ಸುಪ್ರೀಂ ಕೋರ್ಟ್ ಮೊರೆ ಹೋಗಲು ಅವಕಾಶಗಳಿರುತ್ತವೆ. ಅದಕ್ಕೂ ಮುನ್ನವೇ, ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶದ ವಿರುದ್ದ ಹೈ ಕೋರ್ಟ್ ಗೆ ಮೊರೆ ಹೋಗಬಹುದಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ.
ರಾಜೀನಾಮೆ ಕೊಡಲ್ಲ : ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ (governor’s permission for prosecution against cm) ಕುರಿತಂತೆ ಶನಿವಾರ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯಪಾಲರು ಕೇಂದ್ರ ಸರ್ಕಾರದ (central govt) ಕೈಗೊಂಬೆಯಾಗಿದ್ದು, ಅವರ ಈ ನಿರ್ಣಯ ಚುನಾಯಿತ ಸರ್ಕಾರವನ್ನು ಅಭದ್ರಗೊಳಿಸುವ ಷಡ್ಯಂತ್ರವಾಗಿದೆ. ಬಿಜೆಪಿ, ಜೆಡಿಎಸ್ ಹಾಗೂ ರಾಜ್ಯದ ಕೆಲ ಮುಖಂಡರು ಈ ಷಡ್ಯಂತ್ರ ಕೈಗೊಂಡಿದ್ದಾರೆ.
ಉತ್ತರಾಖಂಡ, ಜಾರ್ಖಂಡ್, ನವದೆಹಲಿಯಲ್ಲಿ ಮಾಡಿದಂತೆ ಕರ್ನಾಟಕದಲ್ಲಿಯೂ ಷಡ್ಯಂತ್ರ ಮಾಡಿದ್ದಾರೆ. ಮೇಲ್ನೋಟಕ್ಕೆ ನನ್ನ ಮೇಲೆ ಯಾವುದೇ ಪ್ರಕರಣವಿಲ್ಲ ರಾಜ್ಯಪಾಲರ ನಿರ್ಣಯ ಸಂವಿಧಾನ ಬಾಹಿರವಾಗಿದ್ದು, ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಕಾನೂನು ಹೋರಾಟ ಮಾಡಲಾಗುವುದು ಎಂದರು.
ತನ್ನ ವಿರುದ್ದ ದೂರು ಬಂದ ದಿನವೇ ಶೋಕಾಸ್ ನೋಟೀಸ್ ನೀಡಲಾಗಿತ್ತು. ರಾಜ್ಯಪಾಲರ ಈ ನಡೆಯನ್ನು ನಿರೀಕ್ಷಿಸಲಾಗಿತ್ತು. ಶಾಸಕರು, ಸಂಪುಟ ಸಚಿವರು, ಪಕ್ಷದ ವರಿಷ್ಠರೆಲ್ಲರೂ ನನ್ನ ಪರವಾಗಿದ್ದಾರೆ. ನಾನು ರಾಜಿನಾಮೆ ನೀಡುವ ಪ್ರಶ್ನೆಯಿಲ್ಲ. ರಾಜ್ಯಪಾಲರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ.
ಬಿಜೆಪಿಯವರಿಗೆ ನನ್ನ ರಾಜಿನಾಮೆ ಕೇಳಲು ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ ಸರ್ಕಾರ ಹಾಗೂ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಅವರಿಗೆ ಸಹಿಸಲಾಗುತ್ತಿಲ್ಲ .ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯ ಹಾಗೂ ಗ್ಯಾರಂಟಿ ಯೋಜನೆಗಳ ವಿರುದ್ಧವಾಗಿದೆ . ಬಿಜೆಪಿಯವರ ಈ ನಿಲುವಿಗ ಈಗ ಜೆಡಿಎಸ್ ನವರೂ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದ್ದಾರೆ.