
shimoga | ಶಿವಮೊಗ್ಗ – ಆಯನೂರು ಬೇಕರಿಗೆ ಬೆಂಕಿ ಹೊತ್ತಿದ್ದು ಹೇಗೆ? ನಷ್ಟವಾಗಿದ್ದು ಎಷ್ಟು?
ಶಿವಮೊಗ್ಗ (shivamogga), ಆ. 21: ಬೇಕರಿಯೊಂದರಲ್ಲಿ (bakery) ಬೆಂಕಿ ಕಾಣಿಸಿಕೊಂಡು, ಸಂಪೂರ್ಣ ಸುಟ್ಟು ಕರಕಲಾದ ಘಟನೆ ಶಿವಮೊಗ್ಗ ತಾಲೂಕಿನ ಆಯನೂರಿನಲ್ಲಿ (ayanur) ಆ. 21 ರ ಬುಧವಾರ ಮಧ್ಯಾಹ್ನ ನಡೆದಿದೆ.
ಹಣಗೆರೆಕಟ್ಟೆ ರಸ್ತೆಯಲ್ಲಿರುವ ಪ್ರೀತಂ ಎಂಬುವರಿಗೆ ಸೇರಿದ, ಎಸ್.ಎಲ್.ವಿ ಅಯ್ಯಂಗಾರ್ ಬೇಕರಿ (s l v Iyengar Bakery) ಯಲ್ಲಿ ಮಧ್ಯಾಹ್ನ ಸರಿಸುಮಾರು 2.30 ರ ವೇಳೆ ಘಟನೆ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ಶಿವಮೊಗ್ಗದಿಂದ ಆಗಮಿಸಿದ ಅಗ್ನಿಶಾಮಕ ದಳದ (fire brigade) ಎರಡು ವಾಹನಗಳು, ಅಂಗಡಿಗೆ ಹೊತ್ತಿದ್ದ ಬೆಂಕಿ (fire) ನಂದಿಸಿದೆ. ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ವ್ಯಾಪಿಸುವುದನ್ನು ತಡೆಗಟ್ಟಿದೆ. ಈ ಮೂಲಕ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಘಟನೆ ಹಿನ್ನಲೆ : ಬೇಕರಿಯಲ್ಲಿನ ಫ್ರಿಡ್ಜ್ ಸಿಲಿಂಡರ್ (fridge cylinder) ಓವರ್ ಹೀಟ್ (over heat) ಆಗಿ ಬೆಂಕಿ ಕಾಣಿಸಿಕೊಂಡಿದೆ (fire mishap). ಕ್ಷಣಮಾತ್ರದಲ್ಲಿಯೇ ಬೆಂಕಿಯು ಇಡೀ ಅಂಗಡಿಗೆ ವ್ಯಾಪಿಸಿ, ಧಗಧಗನೇ ಹೊತ್ತಿ ಉರಿಯಲಾರಂಭಿಸಿದೆ. ಅಂಗಡಿಯಲ್ಲಿದ್ದವರು ಹೊರಗೆ ಓಡಿ ಬಂದಿದ್ದಾರೆ.
ಬೇಕರಿಯಲ್ಲಿದ್ದ ಎರಡು ಸಿಲಿಂಡರ್ (cylinder) ಗಳು ಬೆಂಕಿಯ ಕೆನ್ನಾಲಿಗೆಗೆ ಸ್ಫೋಟಗೊಂಡಿವೆ. ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ. ಪ್ರಾಥಮಿಕ ಹಂತದ ಮಾಹಿತಿ ಅನುಸಾರ 9 ಲಕ್ಷ ರೂ. ಮೊತ್ತದ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ಹೇಳಲಾಗಿದೆ. ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.