ಶಿವಮೊಗ್ಗ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷದ ವಿಜಯ ದಶಮಿ ಉತ್ಸವ

shimoga news | ಶಿವಮೊಗ್ಗ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷದ ವಿಜಯ ದಶಮಿ ಉತ್ಸವ

ಶಿವಮೊಗ್ಗ (shivamogga), ಅಕ್ಟೋಬರ್ 12: ಸಂಘ ಕಳೆದ ನೂರು ವರ್ಷಗಳಿಂದ ಸಮಾಜದ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿಕೊಂಡು ಬಂದಿದ್ದು, ಮುಂದೆ ಇನ್ನಷ್ಟು ಕಾರ್ಯಕ್ಷೇತ್ರದ ವಿಸ್ತರಣೆ ಮಾಡಲು ಸ್ವಯಂ ಸೇವಕರು ಸಮಯ ನೀಡುವಂತೆ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಕರೆ ನೀಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷದ ವಿಜಯ ದಶಮಿ ಉತ್ಸವದ ಅಂಗವಾಗಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಆಕರ್ಷಕ ಪಥಸಂಚಲನ ಬಳಿಕ ಅಲ್ಲಮ ಪ್ರಭು ಮೈದಾನದಲ್ಲಿ ಏರ್ಪಡಿಸಿದ್ದ ಸಭೆಯನ್ನುದ್ದೇಶಿಸಿ  ಅವರು ಮಾತನಾಡಿದರು.

ಸಾಮಾಜಿಕ ಸಾಮರಸ್ಯಕ್ಕಾಗಿ ಸಂಘ ನೂರು ವರ್ಷಗಳಿಂದಲೂ ಕೆಲಸ ಮಾಡಿದ್ದರೂ ಇನ್ನೂ ಅಸ್ಪಶ್ಯತೆ ಹೋಗಿಲ್ಲ. ಮನೆಗಳಲ್ಲಿ, ಮಂದಿರಗಳಲ್ಲಿ, ಸ್ಮಶಾನಗಳಲ್ಲಿ ಸಾಮರಸ್ಯ ತರಲು ಎಲ್ಲರೂ ಶ್ರಮಿಸಬೇಕಿದೆ. ದೇಶದ ಪ್ರಗತಿಗೆ ಪೂರಕವಾಗಿ ಮಾತೃ ಭಾಷೆಯಲ್ಲಿ ಎಲ್ಲರೂ ವ್ಯವಹರಿಸುವುದು, ಸ್ವದೇಶಿ ವಸ್ತುಗಳ ಬಳಕೆ ಮಾಡುವುದು ಕಡ್ಡಾಯ ಮಾಡಬೇಕೆಂದು ಹೇಳಿದರು.

ನಾಗರಿಕ ಸಂಹಿತೆ ಬೆಳೆಸಲು ಮುಂದಾಗಬೇಕಿದೆ. ಹಿರಿಯರಿಗೆ ಗೌರವ ನೀಡಬೇಕು. ಕಾನೂನು ಪಾಲನೆ ಕಟ್ಟುನಿಟ್ಟಾಗಿ ಮಾಡಬೇಕು. ಅದರಲ್ಲೂ ವಾಹನ ಚಾಲನೆ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಅನುಸರಿಸಬೇಕು. ಪಂಚಪರಿವರ್ತನೆಗೆ ಎಲ್ಲರೂ ಗಮನ ನೀಡಬೇಕಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಪ್ರತಿಯೊಂದು ಪ್ರಾಂತದ ಎ ಮಂಡಲದಲ್ಲೂ ಹಿಂದು ಸಮಾವೇಶ ನಡೆಸಬೇಕು. ಜಿಲ್ಲಾ ಪ್ರಮುಖರನ್ನು ಸೇರಿಸಿ ಕಾರ್ಯಕ್ರಮ ಮಾಡಬೇಕಿದೆ. ತಾಲ್ಲೂಕು ಮಟ್ಟದಲ್ಲಿಯೂ ಜಾಗೃತಿ ಕಾರ್ಯಕ್ರಮ ಮಾಡಬೇಕಿದೆ ಎಂದರು.

ಸಂಘಕ್ಕೆ ನೂರು ವರ್ಷ ತುಂಬಿ ನೂರ ಒಂದನೆ ವರ್ಷಕ್ಕೆ ಕಾಲಿಟ್ಟಿದೆ. ಅನೇಕರು ನೂರು ವರ್ಷದಲ್ಲಿ ಸಂಘ ಏನು ಮಾಡಿದೆ ಎಂದು ಕೇಳುವವರಿದ್ದಾರೆ. ಇಂದು ಹಿಂದು ಸಮಾಜ ಜಾಗೃತವಾಗಿದೆ. ಹಿಂದು ಎಂದು ಹೇಳಿಕೊಳ್ಳುವ ಪ್ರತಿಯೊಬ್ಬರೂ ಹೆಮ್ಮೆ ಪಡುತ್ತಾರೆ. ವಿಶ್ವಾಸ, ನಂಬಿಕೆಯನ್ನು ಹೆಚ್ಚಿಸುವಲ್ಲಿ ಸಂಘ ಕೆಲಸ ಮಾಡಿದೆ. ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಶಾಖೆಗಳು ನಡೆಯುತ್ತಿವೆ ಎಂದರು.

ದೇಶಕ್ಕೆ ಇಬ್ಬರು ಪ್ರಧಾನ ಮಂತ್ರಿಗಳನ್ನು ನೀಡಿದೆ. ರಾಷ್ಟ್ರಪತಿ, ಉಪ ರಾಷ್ಟ್ರಪತಿಗಳನ್ನು ನೀಡಿದೆ. ವನವಾಸಿಗಳನ್ನು ಸಂಘಟಿಸಿ ಅವರ ಏಳಿಗೆಗೆ ಶ್ರಮಿಸುತ್ತಿದೆ. ವಿಕಲಚೇತನರಿಗೆ ಬೇಕಾದ ಸೌಲಭ್ಯಗಳನ್ನು ಕೊಡುತ್ತಿದೆ. ಹೀಗೆ ಅನೇಕ ಸ್ತರದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಂಘದ ಸಾಧನೆ ಎಂದರು.

ಹಿಂದು ಸಂಘಟಿತನಾಗಬಲ್ಲ. ಒಂದು ವಿಚಾರಕ್ಕಾಗಿ ಕೆಲಸ ಮಾಡಬಲ್ಲ ಎಂಬುದನ್ನು ತೋರಿಸಲಾಗಿದೆ. ಸಂಘ ನೂರು ವರ್ಷದಲ್ಲಿ ಎರಡಾಗಿಲ್ಲ. ಸ್ವಯಂ ಸೇವಕರು ದೇಶ ಮೊದಲು ಎಂಬ ನಿಸ್ವಾರ್ಥ ಭಾವನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಪತ್ತು, ವಿಪತ್ತು, ಯುದ್ಧ ಬಂದಾಗ ಸ್ವಯಂ ಸೇವಕರು ಕೆಲಸ ಮಾಡಿದ್ದಾರೆ. ನಗರ, ಗ್ರಾಮ, ಗುಡ್ಡಗಾಡು ಪ್ರದೇಶದಲ್ಲಿಯೂ ಕೂಡ ಗಣವೇಷ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ವೇದಿಕೆಯಲ್ಲಿ ಶಿವಮೊಗ್ಗ ವಿಭಾಗ ಸಂಘಚಾಲಕ ದಿನೇಶ್ ಭಾರತೀಪುರ, ಜಿ ಸಂಘಚಾಲಕ ಬಿ.ಎ. ರಂಗನಾಥ್, ನಗರ ಸಂಘಚಾಲಕ ಲೋಕೇಶ್ವರರಾವ್ ಕಾಳೆ, ಪ್ರಾಂತ ಘೋಷ್ ಪ್ರಮುಖ ಗಿರೀಶ್, ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ, ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್, ವಿಭಾಗ ಸಹ ಕಾರ್ಯವಾಹ ಮಧುಕರ, ವಿಭಾಗ ಪ್ರಚಾರಕ ಭರತ್‌ರಾಜ್, ಜಿಲ್ಲಾ ಕಾರ್ಯವಾಹ ಚೇತನ, ಜಿಲ್ಲಾ ಪ್ರಚಾರಕ ವೀರೇಶ್, ನಗರ ಕಾರ್ಯವಾಹ ವರುಣ್, ನಗರ ಸಹ ಕಾರ್ಯವಾಹ ಕಿರಣ್ ಕಾಂಬ್ಳೆ ಇದ್ದರು.

Shivamogga : A young man committed suicide by falling from a building under construction! ಶಿವಮೊಗ್ಗ : ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಯುವಕ ಆತ್ಮಹತ್ಯೆಗೆ ಶರಣು! Previous post shimoga BREAKING NEWS | ಶಿವಮೊಗ್ಗ : ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಯುವಕ ಆತ್ಮಹತ್ಯೆಗೆ ಶರಣು!