
shimoga | ಶಿವಮೊಗ್ಗ | ಆಡಳಿತದ ದಿವ್ಯ ನಿರ್ಲಕ್ಷ್ಯ : ರಸ್ತೆಯ ಗುಂಡಿ-ಗೊಟರುಗಳಿಗೆ ಏಕಾಂಗಿಯಾಗಿ ಮಣ್ಣು ಹಾಕಿ ಮುಚ್ಚುತ್ತಿರುವ ಯುವಕ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಸೆ. 10: ರಸ್ತೆಯಲ್ಲಿ ಬಿದ್ದ ಗುಂಡಿ – ಗೊಟರು ಮುಚ್ಚಲು ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ತಳೆದ ಆಡಳಿತದ ಕ್ರಮದಿಂದ ಬೇಸತ್ತ ಯುವಕನೋರ್ವ, ಏಕಾಂಗಿಯಾಗಿ ಗುಂಡಿ-ಗೊಟರುಗಳಿಗೆ ಮಣ್ಣು ಹಾಕಿ ಮುಚ್ಚುವ ಮೂಲಕ ಆಡಳಿತದ ಕಣ್ತೆರೆಸುವ ಕಾರ್ಯ ನಡೆಸುತ್ತಿದ್ದಾರೆ!
ಶಿವಮೊಗ್ಗ ನಗರದ ಹೊರವಲಯ ಅಬ್ಬಲಗೆರೆ ಗ್ರಾಮ ಪಂಚಾಯ್ತಿ (abbalagere grama panchayat) ವ್ಯಾಪ್ತಿಯ ಶ್ರೀ ಬಡಾವಣೆ ನಿವಾಸಿಯಾದ ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಗುರುಚರಣ್, ಏಕಾಂಗಿಯಾಗಿ ರಸ್ತೆಯ ಗುಂಡಿ – ಗೊಟರುಗಳಿಗೆ ಮಣ್ಣು ಹಾಕಿ ಮುಚ್ಚುತ್ತಿರುವ ಯುವಕನಾಗಿದ್ದಾನೆ. ಕಳೆದ ಹಲವು ದಿನಗಳಿಂದ ರಸ್ತೆ ಅವ್ಯವಸ್ಥೆ ಸರಿಪಡಿಸುವ ಕಾರ್ಯ ನಡೆಸುತ್ತಿದ್ದಾರೆ.
ರಸ್ತೆ ಅವ್ಯವಸ್ಥೆ : ಅಬ್ಬಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆ.ಹೆಚ್.ಬಿ. ಪ್ರೆಸ್ ಕಾಲೋನಿ, ಮಹಾಲಕ್ಷ್ಮೀ, ಶ್ರೀ ಬಡಾವಣೆ ಹಾಗೂ ಸುತ್ತಮುತ್ತಲಿನ ತೋಟ-ಗದ್ದೆಗಳಿಗೆ ಸುಮಾರು 1 ಕಿ.ಮೀ. ಉದ್ದವಿರುವ 60 ಅಡಿ ಅಗಲದ ಸ್ವಾಮಿ ವಿವೇಕಾನಂದ ಮುಖ್ಯ ರಸ್ತೆ (swami vivekananda road) ಯು ಪ್ರಮುಖ ಸಂಪರ್ಕ ಕೊಂಡಿಯಾಗಿದೆ.
ಭಾರೀ ಮಳೆ (heavy rainfall), ಕೆರೆ ನೀರು ನುಗ್ಗುವುದು ಸೇರಿದಂತೆ ಭಾರೀ ಸರಕು ಸಾಗಾಣೆ ಲಾರಿಗಳ ಸಂಚಾರದಿಂದ, ಸದರಿ ರಸ್ತೆಯು ಗುಂಡಿ – ಗೊಟರು ಬಿದ್ದಿದೆ. ಜನ – ವಾಹನ ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿದೆ. ಕಳೆದ ಹಲವು ವರ್ಷಗಳಿಂದ ಇದೇ ದುಃಸ್ಥಿತಿಯಿದೆ. ಕಳೆದ ವರ್ಷ ಕರ್ನಾಟಕ ನೀರಾವರಿ ನಿಗಮದ ಅನುದಾನದಲ್ಲಿ, ಸದರಿ ರಸ್ತೆಯ ಅಲ್ಪ ಭಾಗಕ್ಕೆ ಡಾಂಬರೀಕರಣ ನಡೆಸಲಾಗಿತ್ತು.
ಆದರೆ ಉಳಿದ ಭಾಗದ ರಸ್ತೆ ಅವ್ಯವಸ್ಥೆ ಹಾಗೆಯೇ ಇದೆ. ರಸ್ತೆಯ ಉಳಿದ ಭಾಗಕ್ಕೂ ಡಾಂಬರೀಕರಣ ನಡೆಸುವಂತೆ ಈಗಾಗಲೇ ಕರ್ನಾಟಕ ನೀರಾವರಿ ನಿಗಮ, ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಆಡಳಿತ ಸೇರಿದಂತೆ ತಾಲೂಕು, ಜಿಲ್ಲಾ ಪಂಚಾಯ್ತಿ (zilla panchayat), ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗಕ್ಕೆ ಮನವಿ ಮಾಡಲಾಗಿದೆ.
ಆದರೆ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ಪ್ರಸ್ತುತ ಬೀಳುತ್ತಿರುವ ಭಾರೀ ಮಳೆಗೆ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಗುಂಡಿಗಳು (road potholes) ಬಿದ್ದಿವೆ. ಸಂಚಾರ ದುಸ್ತರವಾಗಿ ಪರಿಣಮಿಸಿದೆ’ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.
ದುರಸ್ತಿ : ‘ಬಿಡುವಿನ ವೇಳೆ ರಸ್ತೆಯಲ್ಲಿ ಬಿದ್ದ ಗುಂಡಿ-ಗೊಟರುಗಳಿಗೆ ಮಣ್ಣು ಹಾಕಿ ಮುಚ್ಚುವ ಕಾರ್ಯ ನಡೆಸುತ್ತಿದ್ದೆನೆ. ಸ್ಥಳೀಯ ನಿವಾಸಿ ಕೃಷ್ಣಪ್ಪ ಎಂಬುವರು ಎರಡು ಟ್ರ್ಯಾಕ್ಟರ್ ನಷ್ಟು ಮಣ್ಣು ಕೊಡಿಸಿದ್ದಾರೆ. ಇನ್ನಾದರೂ ಆಡಳಿತ ಎಚ್ಚೆತ್ತುಕೊಳ್ಳಬೇಕು. ರಸ್ತೆ ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಬೇಕು’ ಎಂದು ಗುರುಚರಣ್ ಅವರು ಆಗ್ರಹಿಸುತ್ತಾರೆ.
ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆ!
*** ‘ಕೆ.ಹೆಚ್.ಬಿ. ಪ್ರೆಸ್ ಕಾಲೋನಿಯ ಸ್ವಾಮಿ ವಿವೇಕಾನಂದ ರಸ್ತೆ ಅವ್ಯವಸ್ಥೆ ಸರಿಪಡಿಸಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಪಂಚಾಯ್ತಿ ಆಡಳಿತ ತತ್’ಕ್ಷಣವೇ ಕ್ರಮಕೈಗೊಳ್ಳಬೇಕು. ಕಾಲಮಿತಿಯೊಳಗೆ ರಸ್ತೆಗೆ ಡಾಂಬರೀಕರಣ ನಡೆಸಬೇಕು. ರಸ್ತೆ ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಆಡಳಿತದ ವಿರುದ್ದ ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ’ ಎಂದು ಸ್ಥಳೀಯ ಕೆಲ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಗಮನಹರಿಸುವರೆ ಸಚಿವರು, ಸಂಸದರು, ಶಾಸಕರು?

*** ಕೆ.ಹೆಚ್.ಬಿ ಪ್ರೆಸ್ ಕಾಲೋನಿ ಸ್ವಾಮಿ ವಿವೇಕಾನಂದ ಮುಖ್ಯ ರಸ್ತೆ ಅವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕ್ ಅವರು ಆದ್ಯ ಗಮನಹರಿಸಬೇಕಾಗಿದೆ. ಸೂಕ್ತ ಅನುದಾನ ಬಿಡುಗಡೆಗೊಳಿಸುವ ಮೂಲಕ ರಸ್ತೆ ದುರಸ್ತಿಗೊಳಿಸಿ, ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡುವ ಕಾರ್ಯ ನಡೆಸಬೇಕಾಗಿದೆ ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.