
shimoga | ಬೆಂಗಳೂರಿನಿಂದ ಸಿಗಂದೂರಿಗೆ ಹೊರಟಿದ್ದವರ ಕಾರು ಶಿವಮೊಗ್ಗದ ಕುಂಸಿ ಬಳಿ ಪಲ್ಟಿ : ಓರ್ವ ಸಾವು, ನಾಲ್ವರಿಗೆ ಗಾಯ!
ಶಿವಮೊಗ್ಗ (shivamogga), ಅ. 13: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು, ಪಲ್ಟಿಯಾಗಿ ರಸ್ತೆ ಬದಿಯ ಗದ್ದೆಗೆ ಬಿದ್ದ ಪರಿಣಾಮ ಓರ್ವ ಯುವಕ ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪ ಅ. 13 ರ ಭಾನುವಾರ ಬೆಳಿಗ್ಗೆ ಸಂಭವಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ನಿವಾಸಿ ಚಂದನ್ (25) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಡಿಕೇರಿ ಮೂಲದ ನಂದನ್ (22), ಕೋಲಾರ ಮೂಲದ ಕೋದಂಡ (18), ಮಂಡ್ಯ ಮೂಲದ ಯೋಗೇಶ್ (24) ಹಾಗೂ ಹಾಸನ ಮೂಲದ ಭರತ್ (20) ಗಾಯಗೊಂಡವರೆಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದರಿ ಯುವಕರ ತಂಡ ಬೆಂಗಳೂರಿನ ಯಲಹಂಕದ ಅಮೃತಹಳ್ಳಿ ಬೇಕರಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಭಾನುವಾರ ಬೇಕರಿಗೆ ರಜೆಯಿದ್ದ ಕಾರಣದಿಂದ, ಸಿಗಂದೂರು ದೇವಾಲಯಕ್ಕೆ ಹೋಗಲು ನಿರ್ಧರಿಸಿದ್ದರು. ಅದರಂತೆ ಶನಿವಾರ ರಾತ್ರಿ ಬೆಂಗಳೂರಿನಿಂದ ಕಾರಿನಲ್ಲಿ ಶಿವಮೊಗ್ಗ ಮಾರ್ಗವಾಗಿ ಸಿಗಂದೂರಿಗೆ ಹೊರಟಿದ್ದರು.
ಬೆಳಿಗ್ಗೆ 7 ಗಂಟೆ ಸರಿಸುಮಾರಿಗೆ, ಕುಂಸಿಯ ಕೆರೆ ಕೋಡಿ ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಪಲ್ಟಿಯಾಗಿ ಬಿದ್ದು ಅವಘಡ ಸಂಭವಿಸಿದೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A young man died on the spot and four others were injured when a car overturned and fell into a roadside field after the driver lost control. The incident took place near Kumsi in Shimoga taluk on Sunday morning. The said team of youths were working in a bakery in Amritahalli, Yalahanka, Bangalore. Since Sunday was a holiday for the bakery, had decided to go to the Siganduru temple. Accordingly, on Saturday night, he left for Siganduru by car from Bangalore via Shimoga.