shmoga | ಶಿವಮೊಗ್ಗದ ವ್ಯಕ್ತಿಗೆ 41 ಲಕ್ಷ ರೂ. ವಂಚಿಸಿದ್ದ ಉತ್ತರ ಪ್ರದೇಶದ ಇಬ್ಬರು ನಕಲಿ ಸಿಬಿಐ ಅಧಿಕಾರಿಗಳು ಅರೆಸ್ಟ್!
ಶಿವಮೊಗ್ಗ (shivamogga), ನ. 17: ಶಿವಮೊಗ್ಗದ ವ್ಯಕ್ತಿಯೋರ್ವರಿಗೆ ಸಿಬಿಐ ಅಧಿಕಾರಿಗಳೆಂದು ವೀಡಿಯೋ ಕರೆ ಮಾಡಿ ಲಕ್ಷಾಂತರ ರೂ. ವಂಚಿಸಿದ್ದ ಆರೋಪದ ಮೇರೆಗೆ, ಉತ್ತರ ಪ್ರದೇಶ ರಾಜ್ಯದ ಇಬ್ಬರನ್ನು ಶಿವಮೊಗ್ಗ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಉತ್ತರ ಪ್ರದೇಶ ರಾಜ್ಯದ ಮೌನಾತ್ ಬಂಜನ್ ಜಿಲ್ಲೆ ಜೆ ಎನ್ ಪುರ ಮಾರ್ಗ ವಲಿದಪುರದ ನಿವಾಸಿ ಮೊಹಮ್ಮದ್ ಅಹ್ಮದ್ (45) ಹಾಗೂ ಅಜಂಗಡ ಜಿಲ್ಲೆ ಮೊಹುಡಿಯಾ ಗ್ರಾಮದ ನಿವಾಸಿ ಅಭಿಷೇಕ್ ಕುಮಾರ್ ಶೆಟ್ (27) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ಠಾಣೆ ಡಿವೈಎಸ್ಪಿ ಕೃಷ್ಣಮೂರ್ತಿ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಮಂಜುನಾಥ್, ಎಎಸ್ಐ ಶೇಖರ್ ಮತ್ತವರ ಸಿಬ್ಬಂದಿಗಳಾದ ವಿಜಯ್, ರವಿ, ಶರತ್ ಕುಮಾರ್ ರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಪ್ರಕರಣದ ಹಿನ್ನೆಲೆ : 27/9/2024 ರಂದು ಶಿವಮೊಗ್ಗದ ಗೋಪಾಳದ ನಿವಾಸಿ ಆನಂದ್ (72) ಎಂಬುವರಿಗೆ ಅಪರಿಚಿತ ವ್ಯಕ್ತಿಯೋರ್ವರು ಸಿಬಿಐ ಅಧಿಕಾರಿ ಎಂದು ಹೇಳಿ ವೀಡಿಯೋ ಕಾಲ್ ಮಾಡಿದ್ದ.
ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹಣ ವರ್ಗಾವಣೆಯಾಗಿರುವ ಸಂಬಂಧ ದೂರು ದಾಖಲಾಗಿದೆ. ನಿಮ್ಮ ಬಂಧನಕ್ಕೆ ವಾರೆಂಟ್ ಜಾರಿಯಾಗಿದೆ. ನಿಮ್ಮ ಎಲ್ಲ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ ಎಂದು ವಂಚಕನು ಆನಂದ್ ಅವರಿಗೆ ಬೆದರಿಕೆ ಹಾಕಿದ್ದ.
ಪ್ರಕರಣದಿಂದ ಹೊರ ಬರಬೇಕಾದರೆ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ. ಆರೋಪಿಗಳು ಹೇಳಿದಂತೆ ಅವರ ಬ್ಯಾಂಕ್ ಖಾತೆಗೆ ಆನಂದ್ ಅವರು 41 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿದ್ದರು. ತದನಂತರ ವಂಚನೆಗೊಳಗಾಗಿರುವುದು ಗೊತ್ತಾಗುತ್ತಿದ್ದಂತೆ, ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Shimoga CEN station police arrested two persons from Uttar Pradesh state on the charge of cheating millions of rupees by making video calls to a person from Shimoga as they were CBI officers.
