shimoga | ಶಿವಮೊಗ್ಗ : ವ್ಯರ್ಥವಾಗುತ್ತಿರುವ ನಾಗರೀಕರ ತೆರಿಗೆ ಹಣ – ಹೇಳೋರಿಲ್ಲ, ಕೇಳೋರಿಲ್ಲ..!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಡಿ. 20: ಶಿವಮೊಗ್ಗ ನಗರದ ವಿವಿಧೆಡೆ ಸ್ಮಾರ್ಟ್ ಸಿಟಿ ಯೋಜನೆಯಡಿ, ನೂರಾರು ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಪುಟ್ಪಾತ್ ಅಭಿವೃದ್ದಿ ಸೇರಿದಂತೆ ಹಲವು ಕಾಮಗಾರಿಗಳ ಅನುಷ್ಠಾನ ಮಾಡಲಾಗಿದೆ.
ಆದರೆ ಕಾಮಗಾರಿ ಅನುಷ್ಠಾನದ ವೇಳೆ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆ ಹಾಗೂ ಭವಿಷ್ಯದ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಕಾಮಗಾರಿ ಅನುಷ್ಠಾನಗೊಳಿಸದ ಪರಿಣಾಮದಿಂದ, ಪ್ರಸ್ತುತ ಹಲವು ರೀತಿಯ ಸಮಸ್ಯೆಗಳು ಸೃಷ್ಟಿಯಾಗುವಂತಾಗಿದೆ!
ಹೌದು. ನಗರದ ವಿವಿಧೆಡೆ ಇತ್ತೀಚೆಗೆ ಕೋಟಿ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಗೊಳಿಸಿದ ಕಾಮಗಾರಿಗಳನ್ನು, ಇತರೆ ಇಲಾಖೆಗಳು ನಾನಾ ಕೆಲಸ ಕಾರ್ಯಗಳ ನಿಮಿತ್ತ ಹಾಳುಗೆಡವುತ್ತಿರುವುದು ಕಂಡುಬರುತ್ತಿದೆ. ಇದರಿಂದ ಕಾಮಗಾರಿಗೆ ಮಾಡಿದ ನಾಗರೀಕರ ಅಮೂಲ್ಯ ತೆರಿಗೆ ಹಣದ ವ್ಯರ್ಥವಾಗುವಂತಾಗಿದೆ.
ಇತ್ತೀಚೆಗೆ ಜಲ ಮಂಡಳಿ, ಮೆಸ್ಕಾಂ ಸೇರಿದಂತೆ ಕೆಲ ಸರ್ಕಾರಿ ಸಂಸ್ಥೆಗಳು ನಗರದ ವಿವಿಧೆಡೆ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ದಿಗೊಳಿಸಿದ ರಸ್ತೆ ಹಾಗೂ ಪುಟ್ಪಾತ್ ಗಳಲ್ಲಿ ಗುಂಡಿ ತೆಗೆಯುತ್ತಿರುವುದು ಕಂಡುಬರುತ್ತಿದೆ. ಇದರಿಂದ ರಸ್ತೆ, ಪುಟ್ಪಾತ್ ಗಳಲ್ಲಿ ಗುಂಡಿ – ಗೊಟರು ಬೀಳುತ್ತಿವೆ.
ಮತ್ತೊಂದೆಡೆ, ಕಾಮಗಾರಿ ನಡೆಸುವ ವೇಳೆ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದ ಕಾರಣದಿಂದ ನಾಗರೀಕರು ತೀವ್ರ ತೊಂದರೆ ಎದುರಿಸುವಂತಾಗಿದೆ. ಜನ – ವಾಹನ ಸಂಚಾರಕ್ಕೆ ಅಡೆತಡೆ ಎದುರಾಗುವಂತಾಗಿದೆ. ಈ ಬಗ್ಗೆ ಹೇಳುವವರು, ಕೇಳುವವರು ಯಾರೂ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.
ಸ್ಮಾರ್ಟ್ ಸಿಟಿ ಆಡಳಿತದ ಪ್ರಕಟಣೆ : ಈ ನಡುವೆ ಸ್ಮಾರ್ಟ್ ಸಿಟಿ ಆಡಳಿತ ಶುಕ್ರವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಶಿವಮೊಗ್ಗ ನಗರದ ಸ್ಮಾರ್ಟ್ ಸಿಟಿ ಅನುಮೋದಿತ ವ್ಯಾಪ್ತಿ ಪ್ರದೇಶದಲ್ಲಿ ರಸ್ತೆ ಕಾಮಗಾರಿಗಳನ್ನು ಅಂತರ್ ಇಲಾಖೆಯ ಸಮನ್ವಯ ಸಮಿತಿಯ ಒಪ್ಪಿಗೆಯ ಮೇರೆಗೆ ಈಗಾಗಲೇ ನಿರ್ವಹಿಸಲಾಗಿದೆ ಎಂದು ತಿಳಿಸಿದೆ.
ಆದರೂ ಸಹ ಜಲಮಂಡಳಿ (ವಾಟರ್ ಬೋರ್ಡ್) ಹಾಗೂ ವಿದ್ಯುತ್ ಪೂರೈಕೆ ಇಲಾಖೆ (ಮೆಸ್ಕಾಂ) ಯು ಸ್ಮಾರ್ಟ್ ಸಿಟಿ ಆಡಳಿತದ ಅನುಮತಿಯಿಲ್ಲದೆ, ಈಗಾಗಲೇ ಸುಂದರವಾಗಿ ನಿರ್ಮಿಸಿರುವ ಕಾಮಗಾರಿಗಳನ್ನು ಎಲ್ಲೆಂದರಲ್ಲಿ ಅಗೆದು ಗುಂಡಿ ಮಾಡುತ್ತಿವೆ. ಸದರಿ ಸ್ಥಳಗಳನ್ನು ಯಥಾಸ್ಥಿತಿಗೆ ತಾರದೆ, ಹಾಗೆಯೇ ಬಿಟ್ಟು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದಾರೆ ಎಂದು ದೂರಿದೆ.
ಇದರಿಂದ ಸಾರ್ವಜನಿಕರು ಶಿವಮೊಗ್ಗ ಸ್ಮಾರ್ಟ್ ಸಿಟಿಯವರು ಕಳಪೆ ಕಾಮಗಾರಿ ನಿರ್ವಹಿಸುತ್ತಿದ್ದಾರೆ ಎಂದು ತಪ್ಪಾಗಿ ಅರ್ಥೈಸಿ ದೂರುತ್ತಿದ್ದಾರೆ. ಜಲಮಂಡಳಿ ಹಾಗೂ ಮೆಸ್ಕಾಂ ಇಲಾಖೆಯ ಇಂತಹ ನಿರ್ಲಕ್ಷದಿಂದ ಸಾರ್ವಜನಿಕರ ಆಸ್ತಿ ಪಾಸ್ತಿ ಅಥವಾ ಜೀವಹಾನಿಯಾದಲ್ಲಿ ಅದಕ್ಕೆ ಅವರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಶಿವಮೊಗ್ಗ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಒಟ್ಟಾರೆ ಸ್ಮಾರ್ಟ್ ಸಿಟಿ ಆಡಳಿತವು ನೂರಾರು ಕೋಟಿ ರೂ. ವೆಚ್ಚದಲ್ಲಿ ಮಾಡಿದ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಮೊದಲಿನಿಂದಲೂ ನಾಗರೀಕರಲ್ಲಿ ಸಾಕಷ್ಟು ಅಸಮಾಧಾನ, ಆಕ್ರೋಶವಿತ್ತು. ಕಾಮಗಾರಿ ಅನುಷ್ಠಾನದ ವೇಳೆ ಸಾಕಷ್ಟು ಸಂಕಷ್ಟವನ್ನು ನಾಗರೀಕರು ಎದುರಿಸುವಂತಾಗಿತ್ತು. ಇದೀಗ ವಿವಿಧ ಇಲಾಖೆಗಳು ನಡೆಸುತ್ತಿರುವ ದುರಸ್ತಿ ಕಾಮಗಾರಿಗಳಿಂದ ಮತ್ತೊಂದು ರೀತಿಯ ಸಮಸ್ಯೆಯನ್ನು ನಾಗರೀಕರು ಎದುರಿಸುವಂತಾಗಿದೆ!
From the beginning, there was a lot of dissatisfaction and outrage among the citizens regarding the development works done by the Smart City administration at the cost of hundreds of crores of rupees in Shimoga city. During the implementation of the work, the citizens faced a lot of hardship. Now the citizens are facing another kind of problem due to the repair works being carried out by various departments!
