
bengaluru | ಬೆಂಗಳೂರು | ನಕ್ಸಲೀಯರ ಶರಣಾಗತಿ ಕುರಿತಂತೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು (bangalore), ಡಿ. 30: ನಕ್ಸಲೀಯ ಚಟುವಟಿಕೆಗಳಲ್ಲಿ ತೊಡಗಿರುವವರು ಶರಣಾಗಿ ಮುಖ್ಯವಾಹಿನಿಗೆ ಬರಬೇಕೆಂದು ಸರ್ಕಾರವು ಬಯಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತಂತೆ ಡಿ. 30 ರಂದು ಸಿಎಂ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ನಕ್ಸಲೀಯರು ಪ್ರಜಾತಾಂತ್ರಿಕತೆಯ ಮುಖ್ಯವಾಹಿನಿಗೆ ಬರಬೇಕೆಂದು ಪ್ರತಿಪಾದಿಸುವ ಹಾಗೂ ಜೀವಹಾನಿಯು ಯಾವ ಕಡೆಯು ನಡೆಯಬಾರದು ಎಂದು ಬಯಸುವ, ವಿವಿಧ ಪ್ರಗತಿಪರ ಮತ್ತು ಜನಪರ ವೇದಿಕೆಗಳ ಹಲವಾರು ಮುಖಂಡರು ತಮ್ಮನ್ನು ಭೇಟಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಶಾಂತಿ ನೆಲೆಸುವಂತೆ ಮಾಡಲು ಸರ್ಕಾರವು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.
ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮಾತುಕತೆ ನಡೆಸಲು ಮುಂದಾಗಿದ್ದರೆ, ಈ ಪ್ರಕ್ರಿಯೆಯನ್ನು ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ಸ್ವಾಗತಿಸುತ್ತದೆ. ಸಹಾನುಭೂತಿಯಿಂದ ನಡೆದುಕೊಳ್ಳುತ್ತದೆ ಎಂದು ಭರವಸೆ ನೀಡಿದ್ದಾರೆ.
ನಕ್ಸಲೀಯ ಚಟುವಟಿಕೆಗಳು ಕರ್ನಾಟಕದಲ್ಲಿ ಎಂದೂ ನೆರೆಯ ರಾಜ್ಯಗಳಂತೆ ವಿಪರೀತ ಪ್ರಮಾಣದಲ್ಲಿ ನಡೆದಿಲ್ಲ. ಆದರೆ ಮಲೆನಾಡಿನಲ್ಲಿ ಎರಡು ದಶಕಗಳಿಂದ, ಆಗಾಗ್ಗೆ ನಕ್ಸಲೀಯ ಚಟುವಟಿಕೆಗಳು ಕಾಣುತ್ತಲಿವೆ. ಆ ಕಾರಣದಿಂದ ಹಿಂಸೆ ಹಾಗೂ ಸಾವು-ನೋವುಗಳು ಸಂಭವಿಸಿವೆ.
ಹಲವಾರು ಅಮಾಯಕರ, ಪೊಲೀಸರ ಮತ್ತು ನಕ್ಸಲೀಯ ಚಟುವಟಿಕೆಗಳಲ್ಲಿ ಇದ್ದವರ ಜೀವಹಾನಿಯೂ ಆಗಿದೆ. ಪ್ರಜಾತಾಂತ್ರಿಕ ಸಮಾಜದಲ್ಲಿ ಬಂದೂಕಿನ ಮೂಲಕ ಬದಲಾವಣೆ ತರಲು ಹೊರಟಿರುವ ಆದರ್ಶವಾದಿಗಳು ತಮ್ಮ ಜೀವವನ್ನೂ ತೆತ್ತುಕೊಳ್ಳುತ್ತಾರೆ. ಇತರರ ಜೀವಹಾನಿಗೂ ಕಾರಣವಾಗುತ್ತಾರೆ. ಇದು ನೋವಿನ ವಿಚಾರವಾದರೂ, ಸಂವಿಧಾನಬದ್ಧವಾಗಿ ಆಡಳಿತ ನಡೆಸುವ ಸರ್ಕಾರ ಸುಮ್ಮನಿರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕದ ಎಲ್ಲ ನಕ್ಸಲೀಯರು ಸಂಪೂರ್ಣವಾಗಿ ಶರಣಾಗತರಾಗಿ ಮುಖ್ಯವಾಹಿನಿಗೆ ಬರಲು ನಮ್ಮ ಸರ್ಕಾರವು ಬಯಸುತ್ತದೆ. ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮುಂದಾದಲ್ಲಿ ಶರಣಾಗತಿ ಕುರಿತು ಈಗಾಗಲೇ ಸರ್ಕಾರವು ನೀತಿಯನ್ನು ರೂಪಿಸಿದೆ. ಈ ನೀತಿಯನ್ನು ಸರಳೀಕರಣಗೊಳಿಸಿ, ಸಮಪರ್ಕವಾಗಿ ಜಾರಿ ಮಾಡಲಾಗುವುದೆಂದು ಭರವಸೆ ನೀಡಿದ್ದಾರೆ.
ನಕ್ಸಲೀಯರ ಶರಣಾಗತಿ ನೀತಿಯನ್ವಯ ಹಂತ ಹಂತವಾಗಿ ಆರ್ಥಿಕ ನೆರವು ನೀಡಲಾಗುವುದು. ಹಾಗೂ ಆಯುಧಗಳನ್ನು ಸರ್ಕಾರಕ್ಕೆ ಅದ್ಯಾರ್ಪಣೆ ಮಾಡುವ ನಕ್ಸಲೀಯರಿಗೆ ಪ್ರೋತ್ಸಾಹ ಧನ, ಕೌಶಲ್ಯ ತರಬೇತಿ ನೀಡಲಾಗುವುದು. ಅವರುಗಳ ಪುನರ್ವಸತಿಗೂ ಸಹ ಎಲ್ಲ ಕ್ರಮಗಳನ್ನು ಸಹಾನುಭೂತಿಯಿಂದ ಹಾಗೂ ಆದ್ಯತೆ ಮೇರೆಗೆ ಪರಿಗಣಿಸಲು ಕ್ರಮವಹಿಸಲಾಗುವುದು ಎಂದು ಹೇಳಿದ್ದಾರೆ.
ಅವರ ಮೇಲಿನ ಮೊಕದ್ದಮೆ / ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದು. ಹಾಗೂ ಅವರಿಗೆ ಕಾನೂನಿನ ನೆರವು ಸಹ ನೀಡಲಾಗುವುದು. ಈಗಾಗಲೇ ಶರಣಾಗತರಾದ ನಕ್ಸಲೀಯರ ಅಗತ್ಯಗಳನ್ನು ಸಹ ಗುರುತಿಸಿ ಅವರಿಗೂ ಸಹ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ಕಾನೂನನ್ನು ಕೈಗೆತ್ತಿಕೊಳ್ಳುವ ಮತ್ತು ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗುವ ಯಾರೇ ಆದರೂ, ಅವರ ವಿರುದ್ಧ ಕಠಿಣವಾದ ಕಾನೂನು ಕ್ರಮವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.
Chief Minister Siddaramaiah said that the government wants those involved in Naxalite activities to surrender and come into the mainstream. In this regard, the CM has issued a press release on December 30. But the government will not hesitate to take strict action to maintain law and order and ensure peace in Karnataka, he said.
If the Naxalites are willing to negotiate to come into the mainstream, the government will welcome this process within the framework of law. He promised to act with compassion.