bhadra dam | ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ವೇಳಾಪಟ್ಟಿ ಪ್ರಕಟ!
ಶಿವಮೊಗ್ಗ (shivamogga), ಜ. 4: ಬೇಸಿಗೆ ಹಂಗಾಮಿನ ಬೆಳೆ ಬೆಳೆಯಲು ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ, ಭದ್ರಾ ಜಲಾಶಯದಿಂದ ಬಲ ಹಾಗೂ ಎಡದಂಡೆ ನಾಲೆಗಳಿಗೆ ನೀರು ಹರಿಸಲು, ಜ. 4 ರಂದು ಸಂಜೆ ನಡೆದ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಆನ್’ಲೈನ್ ಆಧಾರಿತ ಜೂಮ್ ಮೀಟ್ ಮೂಲಕ ಸಭೆ ನಡೆಯಿತು. ಎಡದಂಡೆ ನಾಲೆಗೆ ಜ. 4 (ಶನಿವಾರ) ರ ಮಧ್ಯರಾತ್ರಿಯಿಂದ ಹಾಗೂ ಬಲದಂಡೆ ನಾಲೆಗೆ ಜ. 8 ರಿಂದ ನೀರು ಹರಿಸುವ ನಿರ್ಧಾರ ಮಾಡಲಾಗಿದೆ.
ಬಲದಂಡೆ ವ್ಯಾಪ್ತಿಯಲ್ಲಿ ಸೇತುವೆ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಈ ಕಾರಣದಿಂದ ಜ. 8 ರಿಂದ ಬಲದಂಡೆ ನಾಲೆಗೆ ನೀರು ಹರಿಸುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲಾಉಸ್ತುವಾರಿ ಸಚಿವರೂ ಆದ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಮಧು ಬಂಗಾರಪ್ಪ ಅವರು ಅಮೆರಿಕಾ ಪ್ರವಾಸದಲ್ಲಿದ್ದಾರೆ. ಅವರು ಅಲ್ಲಿಂದಲೇ ಜೂಮ್ ಮೀಟ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.
ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷರಾದ ಡಾ. ಅಂಶಮಂತ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಒಟ್ಟಾರೆ 120 ದಿನಗಳ ಕಾಲ ನಿರಂತರವಾಗಿ ನಾಲೆಗಳಿಗೆ ನೀರು ಹರಿಸುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ತದನಂತರ ಪರಿಸ್ಥಿತಿಯ ಅವಲೋಕನ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಪ್ರಸ್ತುತ ಜಲಾಶಯದಲ್ಲಿ 182. 3 ಅಡಿ ನೀರು ಸಂಗ್ರಹವಿದೆ. ಎಡದಂಡೆ ನಾಲೆಗೆ 380 ಹಾಗೂ ಬಲದಂಡೆ ನಾಲೆಗೆ 2650 ಕ್ಯೂಸೆಕ್ ನೀರು ಹರಿಸಲಾಗುವುದು. ಒಟ್ಟಾರೆ ನಾಲೆಗಳಿಗೆ 32 ಟಿಎಂಸಿ ನೀರು ಹರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ಹೊನ್ನಾಳ್ಳಿ ಶಾಸಕರಾದ ಶಾಂತನಗೌಡ, ಹರಿಹರ ಶಾಸಕ ಬಿ ಪಿ ಹರೀಶ್, ಶಿವಮೊಗ್ಗ ಶಾಸಕರಾದ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು, ಮಾಯಕೊಂಡ ಶಾಸಕ ಬಸವಂತಪ್ಪ, ರೈತ ಮುಖಂಡರಾದ ಹೆಚ್ ಆರ್ ಬಸವರಾಜಪ್ಪ, ಕೆ ಟಿ ಗಂಗಾಧರ್ ಸೇರಿದಂತೆ ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ಜನ್ರಪತಿನಿಧಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧಿಕಾರಿಗಳು ಭಾಗಿಯಾಗಿದ್ದರು.
ಪ್ರತಿಭಟನೆ ನಡೆದಿತ್ತು : ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿಗೆ ನೀರು ಹರಿಸಲು ವಿಳಂಬವಾಗುತ್ತಿರುವುದಕ್ಕೆ, ನಾಲೆ ವ್ಯಾಪ್ತಿಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಶಿವಮೊಗ್ಗದ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು.
ಮತ್ತೊಂದೆಡೆ, ದಾವಣಗೆರೆ ಜಿಲ್ಲೆಯ ರೈತರು ಕೂಡ ನಾಲೆಗಳಿಗೆ ನೀರು ಹರಿಸಲು ಆಗ್ರಹಿಸಿದ್ದರು. ಇತ್ತೀಚೆಗೆ ರೈತ ಸಂಘಟನೆ ಮೂಲಕ ಅಲ್ಲಿನ ಜಿಲ್ಲಾಡಳಿತಕ್ಕೆ ಮನವಿ ಪತ್ರ ಕೂಡ ಅರ್ಪಿಸಿದ್ದರು. ಅಂತಿಮವಾಗಿ ನಾಲೆಗಳಿಗೆ ನೀರು ಹರಿಸುವ ನಿರ್ಧಾರವನ್ನು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿದೆ.
shimoga : An important decision has been taken in Bhadra Yojana Irrigation Advisory Committee meeting held on 4th January in the evening to divert water from Bhadra Reservoir to right and left bank canals to facilitate the growing of summer crops.
The meeting was held through online based zoom meet. Left Bank Channel It has been decided to release water from the midnight of 4th (Saturday) and from January 8 to the right bank canal.
