
shimoga | ಥಂಡಾ ಥಂಡಾ… ತೀವ್ರ ಚಳಿಗೆ ಮಲೆನಾಡು ಗಡಗಡ..!
ಶಿವಮೊಗ್ಗ (shivamogga), ಜ. 11: ಅಬ್ಬರದ ಮುಂಗಾರು ಮಳೆಗೆ ಸಾಕ್ಷಿಯಾದ ಮಲೆನಾಡಿನಲ್ಲೀಗ, ಚಳಿಯ ಆರ್ಭಟವೂ ಕೂಡ ಜೋರಾಗಿದೆ… ಹೌದು. ಕಳೆದ ಹಲವು ದಿನಗಳಿಂದ ಚಳಿಯ ತೀವ್ರತೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬಂದಿದ್ದು, ಅಕ್ಷರಶಃ ನಾಗರೀಕರು ಗಡಗಡ ನಡಗುವಂತಾಗಿದೆ!
ಸಂಜೆಯಾಗುತ್ತಿದ್ದಂತೆ ತಾಪಮಾನದ ಪ್ರಮಾಣದಲ್ಲಿ ದಿಢೀರ್ ಕುಸಿತ ಕಂಡುಬರುತ್ತಿದೆ. ರಾತ್ರಿ ಹಾಗೂ ಮುಂಜಾನೆ ವೇಳೆ ಮನೆಯಿಂದ ಹೊರಬರಲು ಆಗದ ಮಟ್ಟಕ್ಕೆ ಚಳಿ ಬಿದ್ದಿರುತ್ತದೆ. ಮೈಕೊರೆಯುವ ಚಳಿಗೆ ನಾಗರೀಕರು ತತ್ತರಿಸುವಂತಾಗಿದೆ.
ಹೆಚ್ಚಳ : ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ, ಚಳಿಗಾಲದ ಪ್ರಾರಂಭದಲ್ಲಿಯೇ ಜಿಲ್ಲೆಯಲ್ಲಿ ಚಳಿಯ ತೀವ್ರತೆ ಹೆಚ್ಚಿರುವುದು ಕಂಡುಬಂದಿತ್ತು. ಈ ನಡುವೆ ಹವಾಮಾನ ವೈಪರೀತ್ಯದಿಂದ ಬಂಗಾಳಕೊಲ್ಲಿಯಲ್ಲಿ ಉಂಟಾದ ಚಂಡಮಾರುತ ಕಾರಣದಿಂದ, ಚಳಿಯ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿತ್ತು.
ಆದರೆ ತದನಂತರ ಚಳಿಯ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿತ್ತು. ಪ್ರಸ್ತುತ ತೀವ್ರತೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತಿದೆ. ತೀವ್ರ ಚಳಿಯ ಕಾರಣದಿಂದಲೇ, ಶಿವಮೊಗ್ಗ ನಗರದಲ್ಲಿ ರಾತ್ರಿ ಹಾಗೂ ಮುಂಜಾನೆ ವೇಳೆ ಜನ – ವಾಹನ ಸಂಚಾರ ಕಡಿಮೆಯಾಗಿರುವುದು ಕಂಡುಬರುತ್ತಿದೆ.
ಬಿಸಿಲ ಬೇಗೆ : ಈ ನಡುವೆ ಹಗಲು ವೇಳೆ, ತಾಪಮಾನದ ಪ್ರಮಾಣದಲ್ಲಿಯೂ ಹೆಚ್ಚಳ ಕಂಡುಬರಲಾರಂಭಿಸಿದೆ. ಬೇಸಿಗೆಯ ರಣ ಬಿಸಿಲು ಬೀಳಲಾರಂಭಿಸಿದೆ. ಭಾರೀ ಪ್ರಮಾಣದ ಚಳಿ – ಬಿಸಿಲ ಹೊಡೆತದಿಂದ, ನಾಗರೀಕರು ಹೈರಾಣಾಗುವಂತಾಗಿದೆ
ಪರಿಣಾಮ : ತೀವ್ರ ಚಳಿಯಿಂದ ನಾಗರೀಕರು ನಾನಾ ರೀತಿಯ ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುವಂತಾಗಿದೆ. ಅಸ್ತಮಾ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು, ಶೀತ, ಕೆಮ್ಮು, ಜ್ವರ ಸೇರಿದಂತೆ ಮತ್ತೀತರ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಒಟ್ಟಾರೆ ಮುಂಗಾರು ಮಳೆ ವೇಳೆ ಭಾರೀ ವರ್ಷಧಾರೆಯಿಂದ ಕಂಗೆಟ್ಟಿದ್ದ ಮಲೆನಾಡಿಗರೀಗ, ಚಳಿಯ ತೀವ್ರತೆಗೆ ನಲುಗುವಂತಾಗಿದೆ. ಇನ್ನೂ ಮುಂಬರುವ ಬೇಸಿಗೆ ಬಿಸಿಲ ಬೇಗೆ ಯಾವ ರೀತಿಯಲ್ಲಿರಲಿದೆ? ಎಂಬ ಚಿಂತೆ ನಾಗರೀಕರದ್ದಾಗಿದೆ.
Shimoga, January 11: In Shimoga district which has witnessed torrential monsoon rains, cold weather is also strong at present… Yes. There has been a considerable increase in the severity of the cold over the last few days, and the citizens are literally shivering!
As the evening approaches, there is a sudden drop in temperature. At night and in the morning, it is so cold that it is impossible to leave the house. The bitter cold leaves the citizens shivering.