What did the Chairman of Shimoga District Guarantee Scheme Authority say about the release of gruhalakshmi scheme balance amount and IT-GST issue? ಗೃಹಲಕ್ಷ್ಮೀ ಯೋಜನೆ ಬಾಕಿ ಮೊತ್ತ ಬಿಡುಗಡೆ ಮತ್ತು ಐಟಿ-ಜಿಎಸ್’ಟಿ ಸಮಸ್ಯೆ ಬಗ್ಗೆ ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಹೇಳಿದ್ದೇನು?

shimoga | ಗೃಹಲಕ್ಷ್ಮೀ ಯೋಜನೆ ಬಾಕಿ ಮೊತ್ತ ಬಿಡುಗಡೆ, ಐಟಿ-ಜಿಎಸ್’ಟಿ ಸಮಸ್ಯೆ ಬಗ್ಗೆ ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಹೇಳಿದ್ದೇನು?

ಶಿವಮೊಗ್ಗ (shivamogga), ಮೇ 18: ವಾಣಿಜ್ಯ ತೆರಿಗೆ ಇಲಾಖೆ ಐಟಿ-ಜಿಎಸ್‌ಟಿ ಪೇಯಿ ಎಂದು ತೋರುತ್ತಿರುವ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳನ್ನು ಅರ್ಹತೆ ಪಟ್ಟಿಗೆ ಸೇರಿಸಿ ಯೋಜನೆಯ ಹಣ ಪಾವತಿ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆಯಲ್ಲಿ ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ತಿಳಿಸಿದರು.

ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಮೇ 17 ರಂದುನಗರದ ಆಲ್ಕೊಳದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಡಿ, ನೋಂದಣಿಯಾಗಿರುವ ಕೆಲ ಫಲಾನುಭವಿಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಐಟಿ-ಜಿಎಸ್‌ಟಿ ಪೇಯಿ ಎಂದು ತೋರಿಸುತ್ತಿದೆ. ಇದರಿಂದ ಯೋಜನೆಯ ಧನ ಸಹಾಯದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಇವರನ್ನು ಫಲಾನುನುಭವಿಗಳ ಅರ್ಹತೆ ಪಟ್ಟಿಗೆ ಸೇರಿಸಿ ಗೃಹಲಕ್ಷ್ಮೀ ಹಣ ಪಾವತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕೋರುವ ಪ್ರಸ್ತಾವನೆ ಸಲ್ಲಿಸಲು ಗ್ಯಾರಂಟಿ ಪ್ರಾಧಿಕಾರ ಒಮ್ಮತದ ನಿರ್ಣಯ ಅಂಗೀಕರಿಸಿದೆ.

ಯೋಜನೆಯ ಮಾರ್ಗಸೂಚಿಗಳ ಅನ್ವಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯರು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಇದರಲ್ಲಿ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಹಾಗೂ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಹರಿರುವುದಿಲ್ಲ. ಆದ್ದರಿಂದ ಗೃಹಲಕ್ಷ್ಮಿ ಯೋಜನೆಯಡಿ ಐಟಿ-ಜಿಎಸ್‌ಟಿ ಎಂದು ತೋರುತ್ತಿರುವ ಫಲಾನುಭವಿಗಳಿಗೆ ಧನಸಹಾಯ ಪಾವತಿಸುವ ಕುರಿತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಹಂತದಲ್ಲಿ ಸಭೆಗಳನ್ನು ನಡೆಸಲಾಗಿದೆ ಎಂದರು.

ಗೃಹಲಕ್ಷ್ಮಿ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯಲ್ಲಿ ಮಾರ್ಚ್-2025 ರ ಮಾಹೆಯವರೆಗೆ 3,99,642 ಫಲಾನುಭವಿಗಳು ಯಶಸ್ವಿಯಾಗಿ ನೋಂದಣಿಯಾಗಿದ್ದು, ಈ ಪೈಕಿ 5618 ಫಲಾನುಭವಿಗಳು ಐಟಿ-ಜಿಎಸ್‌ಟಿ ಪಾವತಿದಾರರೆಂದು ಸ್ಟೇಟಸ್ ತೋರಿಸುತ್ತಿದೆ. ವಾಣಿಜ್ಯ ತೆರಿಗೆ ಇಲಾಖೆಯಿಂದ ಜಿ.ಎಸ್.ಟಿ. ಪೇಯಿ ಫಲಾನುಭವಿಗಳ ದತ್ತಾಂಶದ ಪರಿಶೀಲನೆಯ ಮಾಹಿತಿ ಪ್ರಕಾರ ಫಲಾನುಭವಿಗಳು ಸಣ್ಣ- ಪುಟ್ಟ ವ್ಯಾಪಾರ, ಬಂಗಾರ ಆಧಾರದ ಮೇಲೆ ಹಾಗೂ ಬ್ಯಾಂಕ್‌ಗಳಲ್ಲಿ ಅವರ ಕಷ್ಟಕ್ಕಾಗಿ ಸಣ್ಣ ಮೊತ್ತದ ಸಾಲ ಪಡೆದವರಾಗಿದ್ದಾರೆ. ಆದ್ದರಿಂದ ಇಂತಹ ಫಲಾನುಭವಿಗಳಿಗೆ ಯೋಜನೆಯಡಿ ಹಣ ಪಾವತಿಯಾಗಬೇಕಾದದ್ದು ನ್ಯಾಯ ಸಮ್ಮತವಾಗಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಯೋಜನೆಯು ಅತ್ಯಂತ ಮಹತ್ವಕಾಂಕ್ಷಿ ಯೋಜನೆಯಾಗಿದೆ. ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ರೂ. 2 ಸಾವಿರ ನೀಡುತ್ತಿದೆ. ಆದ್ದರಿಂದ ಐಟಿ- ಜಿಎಸ್‌ಟಿ ಪೇಯಿ ಎಂದು ತೋರಿಸುತ್ತಿರುವ ಫಲಾನುಭವಿಗಳಿಗೆ ಧನ ಸಹಾಯ ಪಾವತಿಯಾಗುವ ಕುರಿತು ಪರಿಶೀಲಿಸಿ ಸರ್ಕಾರದ ಹಂತದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಲಾಗುತ್ತಿದೆ ಎಂದಿದ್ದಾರೆ.

ಈಗಾಗಲೇ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಗೃಹಲಕ್ಷ್ಮೀ ಹಣವು ಸರ್ಕಾರದಿಂದ ಬಿಡುಗಡೆಯಾಗಿದ್ದು, ಒಂದು ವಾರದೊಳಗೆ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಇದೇ ವೇಳೆ ಚಂದ್ರಭೂಪಾಲ್ ಅವರು ಹೇಳಿದ್ದಾರೆ.

ಸಭೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಸದಸ್ಯರುಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಸಿಡಿಪಿಒ ಗಂಗೂಬಾಯಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

shimoga, may 18 : C.S. Chandrabhupala, Chairman of the District Guarantee Scheme Implementation Authority said that the gruhalakshmi scheme money for the month of February and March has already been released by the government and will be credited to the beneficiary’s account within a week. #shimoga, #shivamogga, #gruhalakshmi_scheme, #gruhalakshmi,

CM, DCM to Shivamogga : Citizens of the district demand implementation of their demandsಶಿವಮೊಗ್ಗಕ್ಕೆ ಸಿಎಂ, ಡಿಸಿಎಂ : ಬೇಡಿಕೆಗಳ ಕಾರ್ಯಗತಕ್ಕೆ ಜಿಲ್ಲೆಯ ನಾಗರೀಕರ ಆಗ್ರಹ Previous post shimoga | ಶಿವಮೊಗ್ಗಕ್ಕೆ ಸಿಎಂ, ಡಿಸಿಎಂ : ನೆನೆಗುದಿಗೆ ಬಿದ್ದ ಬೇಡಿಕೆಗಳತ್ತ ಹರಿಯುವುದೆ ಚಿತ್ತ?
shimoga | Shivamogga: Sale of ganja – Three arrested including a person from Madhya Pradesh state! shimoga | ಶಿವಮೊಗ್ಗ : ಗಾಂಜಾ ಮಾರಾಟ – ಮಧ್ಯಪ್ರದೇಶ ರಾಜ್ಯದ ವ್ಯಕ್ತಿ ಸೇರಿ ಮೂವರು ಅರೆಸ್ಟ್! Next post shimoga | ಶಿವಮೊಗ್ಗ : ಗಾಂಜಾ ಮಾರಾಟ – ಮಧ್ಯಪ್ರದೇಶ ರಾಜ್ಯದ ವ್ಯಕ್ತಿ ಸೇರಿ ಮೂವರು ಅರೆಸ್ಟ್!