
shiralkoppa | ಶಿರಾಳಕೊಪ್ಪ : ಮೆಕ್ಕೆಜೋಳ ಕಳವು ಮಾಡಿದ್ದ ಆರೋಪಿಗಳ ಬಂಧನ!
ಶಿಕಾರಿಪುರ (shikaripura), ಮೇ 24: ಒಣಗಿಸಲು ಹಾಕಿದ್ದ ಹಸಿ ಮೆಕ್ಕೆಜೋಳ ಕಳವು ಮಾಡಿದ್ದ ಆರೋಪದ ಮೇರೆಗೆ ಇಬ್ಬರು ಯುವಕರನ್ನು ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಸೀತೆಕೊಂಡ ಗ್ರಾಮದ ನಿವಾಸಿ ನವೀನ (21) ಹಾಗೂ ಆಪಿನಕೊಪ್ಪದ ನಿವಾಸಿ ರಾಜೇಂದ್ರ (20) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಬಂಧಿತರಿಂದ 55 ಸಾವಿರ ರೂ. ಮೌಲ್ಯದ ಮೆಕ್ಕೆಜೋಳ ಹಾಗೂ ಕೃತ್ಯಕ್ಕೆ ಬಳಸಿದ್ದ 9 ಲಕ್ಷ ರೂ. ಮೌಲ್ಯದ ಅಶೋಕ ಲೇಲ್ಯಾಂಡ್ ಸರಕು ಸಾಗಾಣೆ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಇಲಾಖೆ ಮೇ 24 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಶಿಕಾರಿಪುರ ಡಿವೈಎಸ್ಪಿ ಕೇಶವ ಕೆ ಇ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಸಂತೋಷ್ ಪಾಟೀಲ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಪ್ರಶಾಂತ್ ಕುಮಾರ್ ಟಿ ಬಿ, ಸಿಬ್ಬಂದಿಗಳಾದ ಸಿ.ಹೆಚ್.ಸಿ ಸಂತೋಷ್ ಕುಮಾರ್ ಆರ್, ಸಿ.ಪಿ.ಸಿ ರಾಕೇಶ್ ಜಿ, ಸಲ್ಮಾನ್ ಖಾನ್ ಹಾಜಿ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ಧಾರೆ.
ಕಳವು : 22-05-2025 ರಂದು ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕಣಸೋಗಿ ಗ್ರಾಮದ ಗೋಪಾಲಪ್ಪ, ಕೊಳಗಿ ಗ್ರಾಮದ ಸಂದೀಪ ಮತ್ತು ಕೊಳಗಿ ತಾಂಡ ಗ್ರಾಮದ ಶಿವಕುಮಾರ ಎಂಬುವರು ಒಣಗಿಸಲು ಹಾಕಿದ್ದ ಸುಮಾರು 25 ಕ್ವಿಂಟಾಲ್ ತೂಕದ ಹಸಿ ಮೆಕ್ಕೆಜೋಳ ಕಳವು ಮಾಡಲಾಗಿತ್ತು. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Shikaripura, May 24: Two youths have been arrested by Shikaripur taluk Shiralakoppa police on the charge of stealing raw maize which was kept for drying.