
sigandur bridge | ಸಿಗಂದೂರು ಸೇತುವೆ ಪಾಲಿಟಿಕ್ಸ್ : ಶಿಸ್ತುಕ್ರಮದ ಭೀತಿ – ಸಚಿವರಿಗೆ ತಂದ ಗಿಫ್ಟ್’ನೊಂದಿಗೆ ನಾಪತ್ತೆಯಾದ ಅಧಿಕಾರಿಗಳು?!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜು. 15: ಶರಾವತಿ ಹಿನ್ನೀರು ಭಾಗದ ನಿವಾಸಿಗಳ ದಶಕಗಳ ಕನಸಾದ, ಸಿಗಂದೂರು ಸೇತುವೆ ಲೋಕಾರ್ಪಣೆಯಾಗಿದೆ. ಆದರೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಏರ್ಪಟ್ಟ ಹಗ್ಗಜಗ್ಗಾಟದಲ್ಲಿ, ಅಧಿಕಾರಿಗಳು ಪೇಚಿಗೆ ಸಿಲುಕಿದ ಘಟನೆ ಬೆಳಕಿಗೆ ಬಂದಿದೆ!
ಸಿಗಂದೂರು ಸೇತುವೆ ಕಾರ್ಯಕ್ರಮದ ಆಯೋಜನೆಯಲ್ಲಿ ಶಿಷ್ಟಾಚಾರ ಪಾಲನೆ ಮಾಡಿಲ್ಲವೆಂದು ಆರೋಪಿಸಿ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಿಎಂ ಸಿದ್ದರಾಮಯ್ಯ ಸೇರಿದಂತೆ ಆ ಪಕ್ಷದ ಸಚಿವರುಗಳು ಹಾಗೂ ಶಾಸಕರು ಸಮಾರಂಭಕ್ಕೆ ಗೈರು ಹಾಜರಾಗಿದ್ದರು.
ಕಾರ್ಯಕ್ರಮ ಮುಂದೂಡುವಂತೆ ಸ್ವತಃ ಸಿಎಂ ಸಿದ್ದರಾಮಯ್ಯ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಆದರೆ ಸಿಎಂ ಕೋರಿಕೆಗೆ ಕಿಮ್ಮತ್ತು ನೀಡಿದ ಕೇಂದ್ರ ಸಚಿವರು, ಪೂರ್ವ ನಿಗದಿತ ವೇಳಾಪಟ್ಟಿಯಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸೇತುವೆ ಉದ್ಘಾಟಿಸಿದ್ದರು.
ಈ ಎಲ್ಲ ರಾಜಕೀಯ ಹೈಡ್ರಾಮಾಗಳು, ಸರ್ಕಾರಿ ಕಾರ್ಯಕ್ರಮದ ಆಯೋಜನೆಯಲ್ಲಿ ತೊಡಗಿದ್ದ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿತ್ತು. ಈ ಕಾರಣದಿಂದ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಇಲಾಖೆಗೆ ಸಂಬಂಧಿಸಿದ ಬಹುತೇಕ ಅಧಿಕಾರಿಗಳು ಸರ್ಕಾರಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು ಎಂದು ತಿಳಿದುಬಂದಿದೆ!
ಬೆದರಿಕೆ? : ಕಾರ್ಯಕ್ರಮದಲ್ಲಿ ಭಾಗಿಯಾದರೆ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ಸಂದೇಶವನ್ನು ಸಂಬಂಧಿಸಿದ ಅಧಿಕಾರಿಗಳ ವರ್ಗಕ್ಕೆ, ಕೆಲ ಸಚಿವರುಗಳ ಮೂಲಕ ರವಾನಿಸಲಾಗಿತ್ತು ಎಂಬ ಮಾಹಿತಿ ಆಡಳಿತ ಮೂಲಗಳಿಂದ ಕೇಳಿಬರಲಾರಂಭಿಸಿದೆ.
ಈ ಕಾರಣದಿಂದ ಸಮಾರಂಭದಲ್ಲಿ ಕೆಲವರು ಹೊರತುಪಡಿಸಿದರೆ, ಬಹುತೇಕ ಅಧಿಕಾರಿ ವರ್ಗ ಕಾಣ ಸಿಗಲಿಲ್ಲ. ಹಾಗೆಯೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಗಣ್ಯರಿಗೆ ವಿತರಣೆ ಮಾಡಲು ಸಿದ್ದಪಡಿಸಿದ್ದ ನೆನೆಪಿನ ಕಾಣಿಕೆಗಳು ಕೂಡ ದೊರಕಿಲ್ಲ. ಇದು ಸಮಾರಂಭದಲ್ಲಿದ್ದ ಗಣ್ಯರನ್ನು ಪೇಚಿಗೆ ಸಿಲುಕಿಸುವಂತೆ ಮಾಡಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ತಲೆದಂಡ : ಕಾರ್ಯಕ್ರಮದ ಆಹ್ವಾನ ಪತ್ರಿಕೆಯೂ ಸಮರ್ಪಕವಾಗಿಲ್ಲ. ಆಹ್ವಾನ ಮಾಡುವಲ್ಲಿಯೂ ವಿಳಂಬವಾಗಿದೆ. ಶಿಷ್ಟಾಚಾರ ಪಾಲನೆ ಮಾಡಿಲ್ಲವೆಂದು ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಪಿಸುತ್ತಿದೆ. ಮತ್ತೊಂದೆಡೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಬಿಜೆಪಿ ನಾಯಕರು ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲವೆಂದು ಹೇಳುತ್ತಿದ್ದಾರೆ.
ಮುಖ್ಯಮಂತ್ರಿಗಳನ್ನು ಖುದ್ದಾಗಿ ಆಹ್ವಾನಿಸುವ ವಿಷಯದಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಲೋಪ ಎಸಗಿರುವ ದೂರುಗಳು ಕೇಳಿಬರುತ್ತಿವೆ. ಈ ವಿಷಯದಲ್ಲಿ ಯಾರ ತಲೆದಂಡವಾಗಲಿದೆ ಎಂಬ ವಿಷಯ ಪ್ರಸ್ತುತ ಆಡಳಿತ ರಂಗದಲ್ಲಿ ಬಿಸಿ ಬಿಸಿ ಚರ್ಚೆಗೆಡೆ ಮಾಡಿಕೊಟ್ಟಿದೆ.
Shivamogga, Jul. 15: The Sigandur Bridge, a decades-long dream of the residents of the Sharavati backwaters, has been inaugurated. But in the tug-of-war between the BJP and the Congress regarding the programme, an incident has come to light in which the officials got into a dilemma!