shimoga police news | ನೆನೆಗುದಿಗೆ ಬಿದ್ದ ಶಿವಮೊಗ್ಗ – ಭದ್ರಾವತಿ ಪೊಲೀಸ್ ಕಮೀಷನರೇಟ್ ಕಚೇರಿ ಸ್ಥಾಪನೆ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಅಕ್ಟೋಬರ್ 25: ಹುಬ್ಬಳ್ಳಿ – ಧಾರವಾಡ ಅವಳಿ ನಗರಗಳ ಮಾದರಿಯಲ್ಲಿ, ಶಿವಮೊಗ್ಗ – ಭದ್ರಾವತಿ ನಗರ ಒಳಗೊಂಡಂತೆ ಪೊಲೀಸ್ ಕಮೀಷನರೇಟ್ ಕಚೇರಿ ಸ್ಥಾಪನೆ ಪ್ರಸ್ತಾಪ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಆಡಳಿತಗಾರರ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ!
ಜಿಲ್ಲೆಯವರೇ ಸಿಎಂ, ಡಿಸಿಎಂ, ಗೃಹ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದರೂ ಹಲವು ವರ್ಷಗಳ ಬೇಡಿಕೆಯಾದ ಪೊಲೀಸ್ ಕಮೀಷನರೇಟ್ ಕಚೇರಿ ಸ್ಥಾಪನೆ ಪ್ರಸ್ತಾಪ ಕಾರ್ಯರೂಪಕ್ಕೆ ಬರದಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ ಎಂದು ನಾಗರೀಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ನಿರ್ಲಕ್ಷ್ಯ: ಏರುತ್ತಿರುವ ಜನಸಂಖ್ಯೆ, ಅಪರಾಧ ಚಟುವಟಿಕೆಗಳಿಗೆ ಅನುಗುಣವಾಗಿ ಕಾಲಕಾಲಕ್ಕೆ ಭದ್ರತಾ ವ್ಯವಸ್ಥೆಯಲ್ಲಿಯೂ ಪರಿಷ್ಕರಣೆಯಾಗಬೇಕು. ಆದರೆ ಶಿವಮೊಗ್ಗದ ವಿಷಯದಲ್ಲಿ ಇವ್ಯಾವ ಕೆಲಸಗಳು ಆಗುತ್ತಿಲ್ಲ. ರಾಜ್ಯ-ದೇಶದಲ್ಲಿ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ 2 ನೇ ಹಂತದ ನಗರವಾದ ಶಿವಮೊಗ್ಗದ ಪೊಲೀಸ್ ಇಲಾಖೆ ಬಲ ಮಾತ್ರ ಓಬೀರಾಯನ ಕಾಲದ್ದಾಗಿದೆ ಎಂಬ ದೂರುಗಳಿವೆ.
ನಗರದ ಜನಸಂಖ್ಯೆ, ನಗರ ವ್ಯಾಪ್ತಿ- ವಿಸ್ತಾರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಹಾಗೆಯೇ ರಾಜ್ಯದಲ್ಲಿ ಅತ್ಯದಿಕ ಎಫ್.ಐ.ಆರ್ ದಾಖಲಾಗುವ ನಗರಗಳಲ್ಲೊಂದಾಗಿದೆ. ಕ್ರಿಮಿನಲ್ಸ್ ಗಳ ಸಂಖ್ಯೆಯೂ ದೊಡ್ಡದಿದೆ. ಹಾಗೆಯೇ ಕೋಮು ಸೂಕ್ಷ್ಮ ಪ್ರದೇಶವಾಗಿದೆ.
ಆದರೆ ಇದಕ್ಕನುಗುಣವಾಗಿ ನಗರದಲ್ಲಿ ಪೊಲೀಸ್ ಬಲವಿಲ್ಲವಾಗಿದೆ. ಪೊಲೀಸ್ ಠಾಣೆಗಳ ಸಂಖ್ಯೆ ಕೂಡ ಕಡಿಮೆಯಿದೆ. ಸಿಬ್ಬಂದಿಗಳ ಕೊರತೆ ತೀವ್ರ ಸ್ವರೂಪದಲ್ಲಿದೆ. ಇದು ನಗರದ ಕಾನೂನು-ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವಂತಾಗಿದೆ. ಪೊಲೀಸ್ ಇಲಾಖೆ ಮೇಲೂ ಕಾರ್ಯಭಾರ ಒತ್ತಡ ಹೆಚ್ಚಾಗುವಂತೆ ಮಾಡಿದೆ.
ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ, ಜಿಲ್ಲೆಯವರೇ ಆದ ಆರಗ ಜ್ಞಾನೇಂದ್ರರವರ ಅವಧಿಯಲ್ಲಿ ಪೊಲೀಸ್ ಕಮೀಷನರೇಟ್ ಸ್ಥಾಪನೆ ವಿಷಯ ಚರ್ಚೆಯಲ್ಲಿತ್ತು. ನಿಯಮಾನುಸಾರ ಶಿವಮೊಗ್ಗ ನಗರ ಸೀಮಿತವಾಗಿಟ್ಟುಕೊಂಡು ಕಚೇರಿ ಸ್ಥಾಪನೆಗೆ ಕೆಲ ಆಡಳಿತಾತ್ಮಕ ಕೊರತೆಗಳು ಉಂಟಾಗುತ್ತವೆ. ಈ ಹಿನ್ನೆಲೆಯಲ್ಲಿ ಭದ್ರಾವತಿ ನಗರ ಸೇರಿಸಿಕೊಂಡು ಕಮೀಷನರೇಟರ್ ಕಚೇರಿ ಸ್ಥಾಪನೆ ಮಾಡುವ ಪ್ರಸ್ತಾಪ ಸಿದ್ದಪಡಿಸಲಾಗಿತ್ತು.
ಆದರೆ ಆರಗ ಜ್ಞಾನೇಂದ್ರರವರು ಈ ವಿಷಯದತ್ತ ಗಂಭೀರ ಚಿತ್ತ ಹರಿಸಲಿಲ್ಲ. ಇದರಿಂದ ಅವರ ಅವಧಿಯಲ್ಲಿಯೂ ಕಮೀಷನರೇಟ್ ಕಚೇರಿ ಸ್ಥಾಪನೆಯಾಗಲಿಲ್ಲ. ಪ್ರಸ್ತುತ ಹಾಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಗೃಹ ಇಲಾಖೆಯಲ್ಲಿ ಸದರಿ ವಿಷಯದ ಚರ್ಚೆಯೇ ಇಲ್ಲದಂತಾಗಿದೆ.
ಗಮನಿಸಲಿ : ಸದ್ಯ ಶಿವಮೊಗ್ಗ – ಭದ್ರಾವತಿ ನಗರಗಳ ವ್ಯಾಪ್ತಿಯಲ್ಲಿ ರಕ್ಷಣಾ ವಿಭಾಗಕ್ಕೆ ಸಂಬಂಧಿಸಿದ ಸಿ.ಆರ್.ಪಿ.ಎಫ್. (ಕೇಂದ್ರಿಯ ಅರೆಸೇನಾ ಪಡೆ) ಘಟಕ, ಕೆ.ಎಸ್.ಆರ್.ಪಿ. ಹಾಗೂ ಕೈಗಾರಿಕಾ ಭದ್ರತಾ ಪಡೆ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಎರಡೂ ನಗರ ಒಳಗೊಂಡಂತೆ ಕಮೀಷನರೇಟ್ ಕಚೇರಿ ಸ್ಥಾಪನೆಯಾದರೆ, ಕಾನೂನು-ಸುವ್ಯವಸ್ಥೆ ವಿಭಾಗದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದಂತಾಗುತ್ತದೆ.
ಸಿಬ್ಬಂದಿ ಕೊರತೆ : ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಶಿವಮೊಗ್ಗ ನಗರದ ಪೊಲೀಸ್ ಠಾಣೆಗಳನ್ನು ಬೆಂಗಳೂರು ಮಾದರಿಯಲ್ಲಿ (ಇನ್ಸ್’ಪೆಕ್ಟರ್ ಮೇಲುಸ್ತುವಾರಿ) ಮೇಲ್ದರ್ಜೆಗೇರಿಸಲಾಗಿದ್ದರೂ, ಸಿಬ್ಬಂದಿಗಳ ಕೊರತೆ ಸಮಸ್ಯೆ ಪರಿಹಾರವಾಗಿಲ್ಲ. ಹಾಗೆಯೇ ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ ಬೇಡಿಕೆಯೂ ಈಡೇರಿಲ್ಲ.
ಈ ಕುರಿತಂತೆ ಹಾಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಗಂಭೀರ ಚಿತ್ತ ಹರಿಸಬೇಕಾಗಿದೆ. ಶಿವಮೊಗ್ಗ – ಭದ್ರಾವತಿ ಒಳಗೊಂಡಂತೆ ಪೊಲೀಸ್ ಕಮೀಷನರೇಟ್ ಕಚೇರಿ ಸ್ಥಾಪನೆಯತ್ತ ಆದ್ಯ ಗಮನಹರಿಸಬೇಕಾಗಿದೆ ಎಂಬುವುದು ಸ್ಥಳೀಯ ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.
Shivamogga, October 25: The proposal to establish a Police Commissionerate office including Shivamogga-Bhadravati city, on the model of the Hubballi-Dharwad twin cities, has completely fallen into disrepair.
