shimoga palike news | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಡಿಸಿ, ಆಯುಕ್ತರ ಮಹತ್ವದ ಹೇಳಿಕೆ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಅಕ್ಟೋಬರ್ 29: ಕಳೆದೆರೆಡು ವರ್ಷಗಳಿಂದ ನಡೆಯುತ್ತಿರುವ, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಇನ್ನೂ ಅಂತಿಮ ಹಂತಕ್ಕೆ ತಲುಪಿಲ್ಲ. ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ಯಾವಾಗ ಅಂತಿಮ ಹಂತದ ಪ್ರಸ್ತಾವನೆ ಸಲ್ಲಿಕೆಯಾಗಲಿದೆ ಎಂಬುವುದು ಸ್ಪಷ್ಟವಾಗುತ್ತಿಲ್ಲ.
ಈ ನಡುವೆ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಕುರಿತಂತೆ ಅಕ್ಟೋಬರ್ 29 ರಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಪಾಲಿಕೆ ಆಯುಕ್ತ ಮಾಯಣ್ಣಗೌಡರವರು, ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ವ್ಯಾಪ್ತಿ ಪರಿಷ್ಕರಣೆ ಕುರಿತಂತೆ ಮಹತ್ವದ ಹೇಳಿಕೆ ನೀಡಿದ್ದಾರೆ. ವಿವರ ಈ ಕೆಳಕಂಡಂತಿದೆ.
ಡಿಸಿ ಹೇಳಿದ್ದೇನು? : ‘ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಕುರಿತಂತೆ ಪಾಲಿಕೆ ಆಡಳಿತ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಸುತ್ತಿದೆ. ಈ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಾಹಿತಿ ನೀಡಿದ್ದಾರೆ.
‘ನಿಯಮಾನುಸಾರ ಮಾಹಿತಿ ಕಲೆ ಹಾಕುವ ಕಾರ್ಯ ನಡೆಸಲಾಗುತ್ತಿದೆ. ಭವಿಷ್ಯದಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಎಚ್ಚರವಹಿಸಲಾಗುತ್ತಿದೆ. ವ್ಯಾಪ್ತಿ ಪರಿಷ್ಕರಣೆ ವಿಳಂಬವಾಗುತ್ತಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.
ಆಯುಕ್ತರು ಹೇಳಿದ್ದೇನು? : ಪಾಲಿಕೆ ಆಯುಕ್ತ ಮಾಯಣ್ಣಗೌಡರವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ‘ದಾವಣಗೆರೆ ಹಾಗೂ ತುಮಕೂರು ಪಾಲಿಕೆಗಳ ವ್ಯಾಪ್ತಿಯ ಪರಿಷ್ಕರಣೆಗೆ ಹೋಲಿಸಿದರೆ ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯು ಸಾಕಷ್ಟು ಭೌಗೋಳಿಕ ಭಿನ್ನತೆ ಹೊಂದಿದೆ’ ಎಂದು ತಿಳಿಸಿದ್ದಾರೆ.
‘ಯಾವುದೇ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕಾದರೆ ಮಾನದಂಡಗಳ ಪಾಲನೆ ಮಾಡಬೇಕು. ಜನಸಂಖ್ಯೆ, ಕೃಷಿ ಭೂಮಿ, ಜನಸಾಂದ್ರಂತೆ ಸೇರಿದಂತೆ ಹಲವು ಅಂಶಗಳ ಪರಿಗಣಿಸಬೇಕಾಗಿದೆ. ಶಿವಮೊಗ್ಗದ ಹಲವೆಡೆ ಕೃಷಿ ಭೂಮಿ, ತೋಟದ ಪ್ರಮಾಣ ಹೆಚ್ಚಿದೆ.
ಈ ಎಲ್ಲ ವಿಚಾರಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ನಿಯಮಾನುಸಾರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ವಿಚಾರದಲ್ಲಿ ಯಾವುದೇ ವಿಳಂಬವಾಗಿಲ್ಲ’ ಎಂದು ಆಯುಕ್ತರ ಸ್ಪಷ್ಟಪಡಿಸಿದ್ದಾರೆ.
30 ವರ್ಷಗಳಿಂದ ಶಿವಮೊಗ್ಗ ನಗರ ವ್ಯಾಪ್ತಿ ಪರಿಷ್ಕರಣೆಯೇ ಆಗಿಲ್ಲ…!
*** 1994-95 ನೇ ಸಾಲಿನಲ್ಲಿ ಅಂದಿನ ನಗರಸಭೆ ಆಡಳಿತದ ವೇಳೆ, ನಗರ ವ್ಯಾಪ್ತಿಯ ಪರಿಷ್ಕರಣೆ ಮಾಡಲಾಗಿತ್ತು. ಆಲ್ಕೋಳ, ಗೋಪಿಶೆಟ್ಟಿಕೊಪ್ಪ, ಕಲ್ಲಳ್ಳಿ, ಗಾಡಿಕೊಪ್ಪ, ಮಲ್ಲಿಗೇನಹಳ್ಳಿ, ನವುಲೆ, ಮಲಗೊಪ್ಪ ಸೇರಿದಂತೆ ಮೊದಲಾದ ಪ್ರದೇಶಗಳನ್ನು ಸೇರ್ಪಡೆ ಮಾಡಲಾಗಿತ್ತು. ತದನಂತರ ಶಿವಮೊಗ್ಗ ನಗರಾಡಳಿತ ವ್ಯಾಪ್ತಿಯ ಪರಿಷ್ಕರಣೆ ಪ್ರಕ್ರಿಯೇ ನಡೆದಿಲ್ಲ. ನಗರಸಭೆ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ವೇಳೆಯೂ ಹಾಲಿ 35 ವಾರ್ಡ್ ಗಳ ವ್ಯಾಪ್ತಿಯನ್ನೇ ಉಳಿಸಿಕೊಳ್ಳಲಾಗಿತ್ತು. ಕಳೆದ 2 ವರ್ಷಗಳ ಹಿಂದೆ ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ ಮಹಾನಗರ ಪಾಲಿಕೆ ಆಡಳಿತ ವರದಿ ಸಂಗ್ರಹಿಸುವ ಕಾರ್ಯ ನಡೆಸುತ್ತಿದೆ. ಆದರೆ ಸದರಿ ಪ್ರಕ್ರಿಯೆ ಆರಂಭಗೊಂಡು 2 ವರ್ಷವಾಗುತ್ತ ಬಂದರೂ ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ. ಪ್ರಸ್ತುತ ವರದಿ ಸಂಗ್ರಹಿಸುವ ಕಾರ್ಯ ವಿಳಂಬಗತಿಯಲ್ಲಿ ಸಾಗುತ್ತಿರುವ ಆರೋಪಗಳು ಕೇಳಿಬರುತ್ತಿವೆ.
ವ್ಯಾಪ್ತಿ ಪರಿಷ್ಕರಣೆಗೆ ಹೆಚ್ಚುತ್ತಿರುವ ಒತ್ತಡ!
*** ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಾಲಮಿತಿಯೊಳಗೆ ಕ್ರಮಕೈಗೊಳ್ಳಬೇಕೆಂಬ ಆಗ್ರಹ, ಗ್ರಾಮ ಪಂಚಾಯ್ತಿ ಅಧೀನದಲ್ಲಿರುವ ನಗರದ ಹೊರವಲಯದ ವಿವಿಧ ಬಡಾವಣೆಗಳ ನಾಗರೀಕರದ್ದಾಗಿದೆ. ಶಿವಮೊಗ್ಗ ನಗರದ ಸರ್ವ ದಿಕ್ಕುಗಳಲ್ಲಿಯೂ ಹಲವು ವಸತಿ ಬಡಾವಣೆಗಳು ಅಭಿವೃದ್ದಿಗೊಂಡಿವೆ. ಆದರೆ ಸದರಿ ಬಡಾವಣೆಗಳಿಗೆ ಗ್ರಾಮ ಪಂಚಾಯ್ತಿ ಆಡಳಿತಗಳಿಂದ ಸಮರ್ಪಕ ಮೂಲಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಸದರಿ ಬಡಾವಣೆಗಳನ್ನು ನಿಯಮಾನುಸಾರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಿ, ನಿರ್ವಹಣೆ ಮಾಡಬೇಕೆಂಬ ಆಗ್ರಹ ನಾಗರೀಕರದ್ದಾಗಿದೆ.
Shivamogga, October 29: The Shivamogga Municipal Corporation boundary revision, which has been going on for the past two years, has not yet reached the final stage. It is not clear when the final proposal will be submitted to the state government by the district administration.
Meanwhile, on October 29, Deputy Commissioner Gurudatta Hegde and Corporation Commissioner Mayanna Gowda spoke to reporters who met them regarding the revision of the corporation’s jurisdiction. They made important statements regarding the revision of the jurisdiction.
