
ಪಾಳು ಬಿದ್ದಿದ್ದ ಕನ್ಸರ್’ವೆನ್ಸಿಯಲ್ಲಿ ವಾಹನಗಳ ನಿಲುಗಡೆಗೆ ಅವಕಾಶ : ಶಿವಮೊಗ್ಗ ಟ್ರಾಫಿಕ್ ಪೊಲೀಸರ ಜನಮೆಚ್ಚುಗೆ ಕಾರ್ಯ
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜೂ. 18: ಶಿವಮೊಗ್ಗ ನಗರದ ವಿವಿಧೆಡೆ ಕೋಟ್ಯಾಂತರ ರೂ. ವೆಚ್ಚದಲ್ಲಿ ಕನ್ಸರ್’ವೆನ್ಸಿಗಳನ್ನು (Conservancy) ಮಹಾನಗರ ಪಾಲಿಕೆ (city corporation) ಹಾಗೂ ಸ್ಮಾರ್ಟ್ ಸಿಟಿ (smart city) ಆಡಳಿತ ಅಭಿವೃದ್ದಿಗೊಳಿಸಿದೆ. ವಾಹನಗಳ ನಿಲುಗಡೆ, ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸುವುದು ಸೇರಿದಂತೆ ನಾಗರೀಕ ಉದ್ದೇಶಗಳಿಗೆ ಬಳಕೆ ಮಾಡಲು ಯೋಜಿಸಲಾಗಿತ್ತು.
ಆದರೆ ಆಡಳಿತದ ಇಚ್ಚಾಶಕ್ತಿಯ ಕೊರತೆ, ನಿರ್ಲಕ್ಷ್ಯದಿಂದ ಹಲವೆಡೆ ಅಭಿವೃದ್ದಿಗೊಂಡ ಕನ್ಸರ್’ವೆನ್ಸಿಗಳು ಪಾಳು ಬೀಳುತ್ತಿವೆ. ಇದೇ ರೀತಿಯಲ್ಲಿ ನಗರದ ಹೃದಯ ಭಾಗದಲ್ಲಿ ಪಾಳು ಬಿದ್ದಿದ್ದ ಕನ್ಸರ್’ವೆನ್ಸಿಯೊಂದಕ್ಕೆ, ಶಿವಮೊಗ್ಗ ಟ್ರಾಫಿಕ್ ಪೊಲೀಸರು (shimoga traffic police) ಕಾಯಕಲ್ಪ ನೀಡುವ ಕಾರ್ಯ ನಡೆಸಿದ್ದಾರೆ. ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿದ್ದಾರೆ.
ಶಿವಮೊಗ್ಗದ ಸವಾರ್ ಲೈನ್ ರಸ್ತೆಯಲ್ಲಿ (savarline road) ಜನ – ವಾಹನ ಸಂಚಾರ ದಟ್ಟಣೆ ಹೆಚ್ಚಿದೆ. ಮೊದಲೇ ಕಿರಿದಾಗಿರುವ ರಸ್ತೆಯಲ್ಲಿ ವಾಹನಗಳ ನಿಲುಗಡೆ (vehicle parking) ಸೂಕ್ತ ಸ್ಥಳವಿಲ್ಲದೆ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ನಿಲುಗಡೆ ಮಾಡಲಾಗುತ್ತಿತ್ತು. ಇದರಿಂದ ಸುಗಮ ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿತ್ತು.
ರಸ್ತೆಯ ಮಲ್ನಾಡ್ ಕೆಫೆ ಹತ್ತಿರವಿದ್ದ ಕನ್ಸರ್’ವೆನ್ಸಿಯನ್ನು ಈ ಹಿಂದೆ ಅಭಿವೃದ್ದಿಗೊಳಿಸಲಾಗಿತ್ತು. ಸದ್ಯ ಕನ್ಸರ್’ವೆನ್ಸಿಯು ಪಾಳು ಬೀಳುತ್ತಿತ್ತು. ಘನತ್ಯಾಜ್ಯ ಎಸೆಯುವ ತಾಣವಾಗಿ ಪರಿವರ್ತಿತವಾಗಿತ್ತು. ಅಭಿವೃದ್ದಿ ಕಾಮಗಾರಿಗಳು ಹಾಳಾಗುತ್ತಿತ್ತು.
ಇದನ್ನು ಗಮನಿಸಿದ ಪಶ್ಚಿಮ ಸಂಚಾರಿ ಠಾಣೆ ಪೊಲೀಸರು ಸದರಿ ಕನ್ಸರ್’ವೆನ್ಸಿಯಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲು ನಿರ್ಧರಿಸಿದ್ದರು. ಜೂ. 18 ರಂದು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಆಡಳಿತದ ಸಹಕಾರದೊಂದಿಗೆ ಕನ್ಸರ್’ವೆನ್ಸಿಯನ್ನು ಸ್ವಚ್ಚಗೊಳಿಸಿದರು. ಸದರಿ ಸ್ಥಳದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿದ್ದಾರೆ. ಪೊಲೀಸರ ಸಮಾಜಮುಖಿ ಕಾರ್ಯಕ್ಕೆ ಸ್ಥಳೀಯ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಸಬ್ ಇನ್ಸ್’ಪೆಕ್ಟರ್ ತಿರುಮಲೇಶ್, ಡಿಎಆರ್ ಎಆರ್’ಎಸ್ಐ ಪ್ರಕಾಶ್, ಟ್ರಾಫಿಕ್ ಠಾಣೆ ಸಿಬ್ಬಂದಿಗಳಾದ ಸಂದೀಪ್, ಪ್ರಶಾಂತ್, ಪಾಲಿಕೆ ಆರೋಗ್ಯಾಧಿಕಾರಿ ವಿಕಾಸ್ ಮೊದಲಾದವರು ಉಪಸ್ಥಿತರಿದ್ದರು.
ಎಚ್ಚೆತ್ತುಕೊಳ್ಳುವುದೆ ಪಾಲಿಕೆ ಆಡಳಿತ?
*** ಶಿವಮೊಗ್ಗ ನಗರದ ವಿವಿಧೆಡೆ ಕೋಟ್ಯಾಂತರ ರೂ. ವೆಚ್ಚದಲ್ಲಿ ಕನ್ಸರ್’ವೆನ್ಸಿಗಳನ್ನು ಅಭಿವೃದ್ದಿಗೊಳಿಸಲಾಗಿದೆ. ಮುಖ್ಯ ರಸ್ತೆಗಳಲ್ಲಿನ ಕನ್ಸರ್ ವೆನ್ಸಿಗಳಲ್ಲಿ ವಾಹನಗಳ ನಿಲುಗಡೆ ಅವಕಾಶ ಕಲ್ಪಿಸುವುದಾಗಿ ಆಡಳಿತ ಈ ಹಿಂದೆ ಹೇಳಿತ್ತು. ಆದರೆ ಹಲವು ಕನ್ಸರ್’ವೆನ್ಸಿಗಳು ಪಾಳು ಬೀಳುತ್ತಿವೆ. ಮೂಲೋದ್ದೇಶಕ್ಕೆ ಬಳಕೆಯಾಗುತ್ತಿಲ್ಲ. ಮತ್ತೊಂದೆಡೆ, ನಗರದ ಮುಖ್ಯ ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ಜಾಗವಿಲ್ಲದೆ ಜನ – ವಾಹನ ಸಂಚಾರ ದುಸ್ತರವಾಗಿ ಪರಿಣಮಿಸುತ್ತಿದೆ. ಇನ್ನಾದರೂ ಪಾಲಿಕೆ ಆಡಳಿತ ಅಭಿವೃದ್ದಿಗೊಂಡಿರುವ ಕನ್ಸರ್’ವೆನ್ಸಿಗಳಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲು ಕ್ರಮಕೈಗೊಳ್ಳಬೇಕಾಗಿದೆ ಎಂದು ಪ್ರಜ್ಞಾವಂತ ನಾಗರೀಕರು ಆಗ್ರಹಿಸುತ್ತಾರೆ.