
25 ವರ್ಷಗಳಿಂದ ಪರಿಷ್ಕರಣೆಯಾಗಿಲ್ಲ ಶಿವಮೊಗ್ಗ ನಗರ ವ್ಯಾಪ್ತಿ! : ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ!!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜ. 19: ರಾಷ್ಟ್ರ – ರಾಜ್ಯದಲ್ಲಿ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಎರಡನೇ ಹಂತದ ನಗರಗಳಲ್ಲೊಂದಾಗಿರುವ (Tier II Citie), ಶಿವಮೊಗ್ಗ ನಗರ ವ್ಯಾಪ್ತಿ (shimoga city limit) ಬರೋಬ್ಬರಿ 25 ವರ್ಷಗಳಿಂದ ಪರಿಷ್ಕರಣೆಯೇ ಆಗಿಲ್ಲ..!
ಈ ವಿಷಯದ ಕುರಿತಂತೆ ಸ್ಥಳೀಯ ಜನಪ್ರತಿನಿಧಿಗಳ (representatives) ಇಚ್ಚಾಶಕ್ತಿಯ ಕೊರತೆ, ದಿವ್ಯ ನಿರ್ಲಕ್ಷ್ಯ, ಯೋಜನಾಬದ್ಧ ನಗರದ ಬೆಳವಣಿಗೆಯ ಬಗ್ಗೆ ಆಸಕ್ತಿಯಿಲ್ಲದಿರುವುದೇ ಮುಖ್ಯ ಕಾರಣವಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತವೆ.
ಜನಸಂಖ್ಯೆ (population) ಹಾಗೂ ಪ್ರದೇಶಗಳ ಅಭಿವೃದ್ದಿಗೆ ಅನುಗುಣವಾಗಿ, ಕಾಲಕಾಲಕ್ಕೆ ನಿಯಮಿತವಾಗಿ ನಗರ – ಪಟ್ಟಣಗಳ (city – town) ವ್ಯಾಪ್ತಿ ಪರಿಷ್ಕರಣೆ ಮಾಡಲಾಗುತ್ತದೆ. ಆದರೆ ಶಿವಮೊಗ್ಗ ನಗರದ ವಿಷಯದಲ್ಲಿ ಮಾತ್ರ ಇವ್ಯಾವುದು ಇಲ್ಲವಾಗಿದೆ.
ಜಿಲ್ಲೆಯವರೇ ಸಿಎಂ (cm), ಡಿಸಿಎಂ (dcm) ಸೇರಿದಂತೆ ರಾಜ್ಯ ಸರ್ಕಾರದ ಪ್ರಭಾವಿ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದ ಹೊರತಾಗಿಯೂ ಪ್ರಮುಖ ಆಡಳಿತಾತ್ಮಕ ವಿಷಯವಾದ ನಗರ ವ್ಯಾಪ್ತಿ ಪರಿಷ್ಕರಣೆಯ ಗೋಜಿಗೆ ಹೋಗದಿರುವುದು ಸಖೇದಾಶ್ಚರ್ಯ ಸಂಗತಿಯಾಗಿದೆ. ಕಾರಣವೇನೆಂಬುವುದು ಮಾತ್ರ ಸ್ಪಷ್ಟವಾಗುತ್ತಿಲ್ಲವಾಗಿದೆ.
ಅವ್ಯವಸ್ಥೆ : ಶಿವಮೊಗ್ಗ ನಗರದಂಚಿನಲ್ಲಿರುವ ಅಬ್ಬಲಗೆರೆ, ಕೋಟೆಗಂಗೂರು, ನಿಧಿಗೆ, ಮುದ್ದಿನಕೊಪ್ಪ ಸೇರಿದಂತೆ ಕೆಲ ಗ್ರಾಮ ಪಂಚಾಯ್ತಿ (grama panchayat) ಅಧೀನಗಳಲ್ಲಿ ಕಳೆದ 15 ವರ್ಷಗಳ ಅವಧಿಯಲ್ಲಿ ಭಾರೀ ದೊಡ್ಡ ಸಂಖ್ಯೆಯ ಬಡಾವಣೆಗಳು ಅಭಿವೃದ್ದಿಯಾಗಿವೆ. ಸಾವಿರಾರು ಜನರು ವಾಸಿಸುತ್ತಿದ್ದಾರೆ. ಆದರೆ ಬಡಾವಣೆಗಳ ನಿರ್ವಹಣೆಗೆ ಅಗತ್ಯವಾದ ಸೌಲಭ್ಯ ಗ್ರಾಪಂ ಆಡಳಿತಗಳಲ್ಲಿ ಇಲ್ಲವಾಗಿದೆ.
ಒಳಚರಂಡಿ (ಯುಜಿಡಿ) ನಿರ್ವಹಣೆ, ಘನತ್ಯಾಜ್ಯ ವಿಲೇವಾರಿ, ಚರಂಡಿ, ರಸ್ತೆಗಳ ನಿರ್ಮಾಣ, ಕುಡಿಯುವ ನೀರು ಪೂರೈಕೆ ಸೇರಿದಂತೆ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲು ಆಗುತ್ತಿಲ್ಲ. ಸ್ಥಳೀಯ ನಾಗರೀಕರಂತೂ ತೀವ್ರ ತೊಂದರೆ ಎದುರಿಸುವಂತಾಗಿದೆ. ಗ್ರಾಪಂ ಆಡಳಿತಗಳಿಗೂ ಇಂತಹ ಬಡಾವಣೆಗಳು ಹೊರೆಯಾಗಿ ಪರಿಣಮಿಸುತ್ತಿವೆ. ಆಡಳಿತದ ನಿರ್ಲಕ್ಷ್ಯಕ್ಕೆ ಜನಸಾಮಾನ್ಯರು ತೊಂದರೆ ಪಡುವಂತಾಗಿದೆ.
ನಗರದಂಚಿನ ಬಡಾವಣೆಗಳನ್ನು ಮಹಾನಗರ ಪಾಲಿಕೆಗೆ ಸೇರ್ಪಡೆಗೊಳಿಸಿ, ನಾಗರೀಕರಿಗೆ ಸಮರ್ಪಕ ಮೂಲಸೌಕರ್ಯ ಕಲ್ಪಿಸುವುದು ಆಡಳಿತ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಕ್ರಮವಾಗದಿರುವುದಕ್ಕೆ ಪ್ರಜ್ಞಾವಂತ ನಾಗರೀಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಪರಿಷ್ಕರಣೆಯಾಗಿ ಕಾಲು ಶತಮಾನವಾಗಿದೆ!
*** 1997-98 ರ ವೇಳೆ ಅಂದಿನ ನಗರಸಭೆ (city municipal council) ಆಡಳಿತಾವಧಿಯಲ್ಲಿ, ಶಿವಮೊಗ್ಗ ನಗರ ವ್ಯಾಪ್ತಿ ಪರಿಷ್ಕರಿಸಲಾಗಿತ್ತು. ಗ್ರಾಮ ಪಂಚಾಯ್ತಿ ಅಧೀನದಲ್ಲಿದ್ದ ನಗರದಂಚಿನ ಗ್ರಾಮಗಳಾದ ಗಾಡಿಕೊಪ್ಪ, ಕಾಶೀಪುರ, ಸೋಮಿನಕೊಪ್ಪ, ನವುಲೆ ಸೇರಿದಂತೆ ಮೊದಲಾದ ಗ್ರಾಮಗಳನ್ನು ನಗರಸಭೆಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ತದನಂತರ 2012-13 ರಲ್ಲಿ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಆದಾಗ್ಯೂ ಇಲ್ಲಿಯವರೆಗೂ ನಗರ ವ್ಯಾಪ್ತಿ ಪರಿಷ್ಕರಣೆಯಾಗಿಲ್ಲ.
ಸದ್ಯ ನಗರದಂಚಿನ ಗ್ರಾಪಂ ಅಧೀನದಲ್ಲಿ ದೊಡ್ಡ ದೊಡ್ಡ ಬಡಾವಣೆಗಳು ನಿರ್ಮಾಣವಾಗಿವೆ. ಹೊಸ ಹೊಸ ಆರ್ಥಿಕ, ವಾಣಿಜ್ಯ – ವಹಿವಾಟು ಸಂಬಂಧಿತ ಚಟುವಟಿಕೆಗಳು ಅಭಿವೃದ್ದಿಯಾಗಿವೆ. ಸಾವಿರಾರು ಜನರು ವಾಸಿಸುತ್ತಿದ್ದಾರೆ. ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗುವ ಅರ್ಹತೆ ಹೊಂದಿದ್ದರೂ ಗ್ರಾಪಂ ಅಧೀನದಲ್ಲಿಯೇ ಬಡಾವಣೆಗಳಿವೆ. ಆದರೆ ಸ್ಥಳೀಯ ಗ್ರಾಮ ಪಂಚಾಯ್ತಿ ಆಡಳಿತಗಳಿಂದ, ಸಮರ್ಪಕವಾಗಿ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಾಗರೀಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಹೆಚ್ಚಳವಾಗಬೇಕಾಗಿದೆ ಪಾಲಿಕೆ ವಾರ್ಡ್ ಗಳ ಸಂಖ್ಯೆ
*** ಶಿವಮೊಗ್ಗ ನಗರದಂಚಿನ ಬಡಾವಣೆಗಳನ್ನು ಸೇರ್ಪಡೆ ಮಾಡಿಕೊಂಡು, ಮಹಾನಗರ ಪಾಲಿಕೆ ವಾರ್ಡ್ (corporation wards) ಗಳ ವೈಜ್ಞಾನಿಕ ಪರಿಷ್ಕರಣೆ ಮಾಡಬೇಕೆಂಬ ಆಗ್ರಹ ಕಳೆದ ಹಲವು ವರ್ಷಗಳಿಂದಿದೆ. ಈ ಹಿಂದಿನ ನಗರಸಭೆ ಆಡಳಿತಾವಧಿಯಲ್ಲಿದ್ದ ವಾರ್ಡ್ ಗಳನ್ನೇ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ನಂತರವೂ ಮುಂದುವರಿಸಿಕೊಂಡು ಬರಲಾಗುತ್ತಿದೆ. ಇದರಿಂದ ನಾಗರೀಕರಿಗೆ ತೊಂದರೆಯಾಗುತ್ತಿದೆ. ಪ್ರಸ್ತುತ ಜನಸಂಖ್ಯೆ, ವ್ಯಾಪ್ತಿಗೆ ಅನುಗುಣವಾಗಿ ಕನಿಷ್ಠ 50 ರಿಂದ 60 ವಾರ್ಡ್ ಗಳ ರಚನೆ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರಲಾರಂಭಿಸಿದೆ.
ಚುನಾವಣೆ ನೆನೆಗುದಿಗೆ : ಜನರ ಸಮಸ್ಯೆ ಕೇಳೊರಿಲ್ಲ!
*** ಈ ಹಿಂದಿನ ಪಾಲಿಕೆ ಜನಪ್ರತಿನಿಧಿಗಳ ಅಧಿಕಾರಾವಧಿ ಪೂರ್ಣಗೊಂಡು ಏಳೆಂಟು ತಿಂಗಳಾಗುತ್ತ ಬಂದಿದೆ. ಆದರೆ ಇಲ್ಲಿಯವರೆಗೂ ಹೊಸದಾಗಿ ವಾರ್ಡ್ ಗಳ ಚುನಾವಣೆ (ward election) ನಡೆದಿಲ್ಲ. ಇದರಿಂದ ನಾಗರೀಕರ ಅಹವಾಲು ಆಲಿಸುವ ವ್ಯವಸ್ಥೆಯೇ ಇಲ್ಲದಂತಾಗಿದೆ. ಜನಸ್ನೇಹಿ ಆಡಳಿತವೇ ಕಣ್ಮರೆಯಾಗಿದೆ. ಪಾಲಿಕೆ ಆಡಳಿತದಲ್ಲಿ ಅಧಿಕಾರಿಗಳ ದರ್ಬಾರ್ ಹೆಚ್ಚಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಕಾಲಮಿತಿಯೊಳಗೆ ವಾರ್ಡ್ ಗಳ ಚುನಾವಣೆ ನಡೆಸಬೇಕು. ಕಾರ್ಪೋರೇಟರ್ ಗಳ ಆಯ್ಕೆ ಮಾಡಬೇಕೆಂಬ ಕೂಗು ನಾಗರೀಕ ವಲಯದಿಂದ ಕೇಳಿಬರುತ್ತಿದೆ.