
ಪ್ರವಾಹದ ಭೀತಿ ಮೂಡಿಸಿದ ತುಂಗಾ ನದಿ : ಗಾಜನೂರು ತುಂಗಾ ಜಲಾಶಯಕ್ಕೆ ಹೆಚ್ಚುತ್ತಿರುವ ಒಳಹರಿವು!
ಶಿವಮೊಗ್ಗ (shivamogga), ಜು. 18: ನಾಡಿನ ಜೀವ ನದಿಗಳಲ್ಲೊಂದಾದ ತುಂಗಾ ನದಿ (tunga river) ಪ್ರಸ್ತುತ ಮೈದುಂಬಿ ಹರಿಯುತ್ತಿದೆ. ಜೊತೆಗೆ ಪ್ರವಾಹದ ಭೀತಿ ( Fear of flood) ಸೃಷ್ಟಿಸಿದೆ. ಕೆಲವೆಡೆ ನದಿಪಾತ್ರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.
ಈ ನಡುವೆ ತೀರ್ಥಹಳ್ಳಿ (thirthalli), ಆಗುಂಬೆ (agumbe), ಶೃಂಗೇರಿ (sringeri) ಸುತ್ತಮುತ್ತ ಭಾರೀ ಮಳೆ (heavy rainfall) ಮುಂದುವರಿದಿದೆ. ಇದರಿಂದ ಶಿವಮೊಗ್ಗ ತಾಲೂಕಿನ ತುಂಗಾ ಜಲಾಶಯದ (tunga dam) ಒಳಹರಿವಿನಲ್ಲಿ ನಿರಂತರ ಹೆಚ್ಚಳ ಕಂಡುಬರಲಾರಂಭಿಸಿದೆ.
ಗುರುವಾರ ಬೆಳಿಗ್ಗೆಯ ಮಾಹಿತಿಯಂತೆ ತುಂಗಾ ಜಲಾಶಯಕ್ಕೆ 71,484 ಕ್ಯೂಸೆಕ್ ಒಳಹರಿವಿದೆ (inflow). ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ಹೊರ ಹರಿಸಲಾಗುತ್ತಿದೆ (outflow).
ಡ್ಯಾಂನಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಶಿವಮೊಗ್ಗ ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು (shimoga city tunga river flowing) ಕಳೆದ ಮೂರು ದಿನಗಳಿಂದ ಅಪಾಯದ ಮಟ್ಟದಲ್ಲಿ (danger level) ಹರಿಯುತ್ತಿದೆ. ಡ್ಯಾಂನಿಂದ ಬಿಡುವ ನೀರಿನಲ್ಲಿ ಹೆಚ್ಚಳವಾದರೆ, ನಗರದ ನದಿಯಂಚಿನ ತಗ್ಗು ಪ್ರದೇಶಗಳಿಗೆ (low lying areas) ನೀರು ನುಗ್ಗುವ ಸಾಧ್ಯತೆಯಿದೆ.
ಈಗಾಗಲೇ ಮಹಾನಗರ ಪಾಲಿಕೆ (corporation) ಆಡಳಿತವು ನದಿ ನೀರು ನುಗ್ಗಬಹುದಾದ ತಗ್ಗು ಪ್ರದೇಶಗಳ ನಿವಾಸಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಜೊತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು (Precautionary measure) ಕೈಗೊಂಡಿದೆ.