
ನವ ದಂಪತಿ ಪ್ರಕರಣ : ವಧುವಿನ ಬೆನ್ನಲ್ಲೇ ವರನೂ ಸಾವು!
ಕೆಜಿಎಫ್ (ಕೋಲಾರ), ಆ. 8: ಮದುವೆ ದಿನದಂದೆ (marriage day) ಮಚ್ಚಿನಲ್ಲಿ ಹೊಡೆದಾಡಿಕೊಂಡ ನವ ದಂಪತಿ ಪ್ರಕರಣದಲ್ಲಿ, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವರನೂ (groom) ಕೂಡ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.
ಘಟನೆ ನಡೆದ ಬುಧವಾರದಂದು ವಧು (bride) ಲಿಖಿತಶ್ರೀ (20) ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ವರ ನವೀನ್ (28) ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ (bengaluru) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಗುರುವಾರ ಮೃತಪಟ್ಟಿದ್ದಾರೆ.
ಇದರಿಂದ ಪ್ರೀತಿಸಿ ಮದುವೆಯಾಗಿದ್ದ (love marriage) ನವ ದಂಪತಿಯ ಪ್ರಕರಣ ದುರಂತದಲ್ಲಿ ಕೊನೆಯಾಗಿದೆ. ವಧು-ವರರ ಎರಡೂ ಕುಟುಂಬಗಳಲ್ಲಿ ಶೋಕ ಮಡುಗಟ್ಟುವಂತೆ ಮಾಡಿದೆ.
ಏನೀದು ಘಟನೆ? : ಲಿಖಿತಶ್ರೀ ಹಾಗೂ ನವೀನ್ ಕುಮಾರ್ (30) ಪರಸ್ಪರ ಪ್ರೀತಿಸುತ್ತಿದ್ದರು. ಆ. 7 ರ ಬುಧವಾರ ಬೆಳಿಗ್ಗೆ ಕೆಜಿಎಫ್ (kgf) ತಾಲೂಕಿನ ಚಂಬರಸನಹಳ್ಳಿ ಗ್ರಾಮದಲ್ಲಿರುವ ವರ ನವೀನ್ ಕುಮಾರ್ ಅವರ ಅಕ್ಕನ ಮನೆಯಲ್ಲಿ ಇವರಿಬ್ಬರ ವಿವಾಹ (marriage) ನೆರವೇರಿತ್ತು. ಮದುವೆಯ ಸಕಲ ರೀತಿ-ರಿವಾಜುಗಳು ನೆರವೇರಿದ್ದವು. ನವ ದಂಪತಿಗಳು ಖುಷಿಖುಷಿಯಿಂದಲೇ ಇದ್ದರು.
ವಿವಾಹದ ನಂತರ ಅದೇ ಗ್ರಾಮದಲ್ಲಿರುವ ವರನ ದೊಡ್ಡಪ್ಪನ ಮನೆಯಲ್ಲಿ ಇಬ್ಬರು ತಂಗಿದ್ದರು. ಕೋಣೆ ಸೇರಿಕೊಂಡಿದ್ದ ಇಬ್ಬರು, ದಿಢೀರ್ ಆಗಿ ಸಂಜೆ ವೇಳೆ ಮಚ್ಚಿನಿಂದ ಪರಸ್ಪರ ಹೊಡೆದಾಡಿಕೊಂಡಿದ್ದರು. ನವ ದಂಪತಿಗಳ (newly married couple) ಚೀರಾಟ ಗಮನಿಸಿ ಮನೆಯಲ್ಲಿದ್ದವರು ತಕ್ಷಣವೇ ಇಬ್ಬರನ್ನು ಕೆಜಿಎಫ್ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ವಧು ಲಿಖಿತಶ್ರೀ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಳು. ಮತ್ತೊಂದೆಡೆ, ಗಂಭೀರ ಸ್ಥಿತಿಯಲ್ಲಿದ್ದ ವರ ನವೀನ್ ಕುಮಾರ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಡೀ ಪ್ರಕರಣ ನಿಗೂಢವಾಗಿ ಪರಿಣಮಿಸಿದೆ. ದಂಪತಿ ನಡುವೆ ಕಲಹಕ್ಕೆ ಕಾರಣವೇನು? ಇದರ ಹಿಂದೆ ಬೇರೆ ಏನಾದರೂ ಕೈವಾಡವಿದೆಯೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಪೊಲೀಸರ ತನಿಖೆಯಿಂದ ಉತ್ತರ ದೊರಕಬೇಕಾಗಿದೆ. ಈ ಸಂಬಂಧ ಕೆಜಿಎಫ್ ನ ಅಂಡರ್‌ಸನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.