
shimoga | ಕೊಲೆ : ಇಬ್ಬರು ಮಹಿಳೆಯರಿಗೆ ಜೀವಾವಧಿ – ಮೂವರು ಯುವಕರಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ!
ಶಿವಮೊಗ್ಗ (shivamogga), ಆ. 24: ಕೊಲೆ ಪ್ರಕರಣವೊಂದಕ್ಕೆ (murder case) ಸಂಬಂಧಿಸಿದಂತೆ, ಇಬ್ಬರು ಮಹಿಳೆಯರಿಗೆ ಜೀವಾವಧಿ ಹಾಗೂ ಮೂವರು ಯುವಕರಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ, ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (court) ಆದೇಶ ಹೊರಡಿಸಿದೆ.
ಶಿವಮೊಗ್ಗದ ಹನುಮಂತನಗರದ ನಿವಾಸಿಗಳಾದ ನಾಗವೇಣಿ (27), ಜಹೀರಾಬಿ (41) ಅವರಿಗೆ ಜೀವಾವಧಿ ಶಿಕ್ಷೆ (life imprisonment) ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 4 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಲಾಗಿದೆ.
ಉಳಿದಂತೆ ಹನುಮಂತನಗರದ ನಿವಾಸಿಗಳಾದ ಜಬೀವುಲ್ಲಾ (23), ಮೊಹಮ್ಮದ್ ಇಮ್ರಾನ್ (25) ಹಾಗೂ ಚಂದ್ರಕುಮಾರ್ (24) ಎಂಬುವರಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ (rigorous imprisonment) ಹಾಗೂ ತಲಾ 20 ಸಾವಿರ ರೂ. ದಂಡ (fine) ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ, ಹೆಚ್ಚುವರಿಯಾಗಿ 3 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ (court judgement).
23/8/2024 ರಂದು ನ್ಯಾಯಾಧೀಶರಾದ (judge) ಮಂಜುನಾಥ್ ನಾಯಕ್ ಅವರು ಈ ತೀರ್ಪು (judgment) ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸುರೇಶ್ ಕುಮಾರ್ ಎ ಎಂ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ : ಶಿಕ್ಷೆಗೊಳಗಾದ ನಾಗವೇಣಿ ಹಾಗೂ ಪತಿ ಸಂತೋಷ ಯಾನೆ ಜೈಲರ್ (34) ನಡುವೆ ನಿರಂತರವಾಗಿ ಕೌಟಂಬಿಕ ಕಲಹ ನಡೆಯುತ್ತಿತ್ತು. 12-02-2018 ರಂದು ಇಬ್ಬರ ನಡುವೆ ಜಗಳ ಏರ್ಪಟ್ಟಿತ್ತು. ಈ ವೇಳೆ ಇದು ವಿಕೋಪಕ್ಕೆ ತಿರುಗಿತ್ತು.
ಪತ್ನಿ ನಾಗವೇಣಿ ಹಾಗೂ ನೆರೆಮನೆಯ ಜಹೀರಾಬಿ ಅವರು ದೊಣ್ಣೆಯಿಂದ ಸಂತೋಷ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ನಂತರ ಚಂದ್ರಕುಮಾರ್, ರಾಕಿ, ಇಮ್ರಾನ್, ಜಬೀವುಲ್ಲಾ ಅವರು ಜಹೀರಾಬಿ ಮನೆಯಲ್ಲಿನ ಓಮ್ನಿ ಕಾರಿನಲ್ಲಿ ಸಂತೋಷನ ಮೃತ ದೇಹವನ್ನು ಸವಳಂಗ ರಸ್ತೆಯ ನಿರ್ಜನ ಪ್ರದೇಶದಲ್ಲಿ ಎಸೆದಿದ್ದರು.
ಈ ಸಂಬಂಧ ಮೃತ ಸಂತೋಷನ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ಜಯನಗರ ಪೊಲೀಸ್ ಠಾಣೆಯಲ್ಲಿ (shimoga jayanagar police station) ಪ್ರಕರಣ ದಾಖಲಾಗಿತ್ತು. ಅಂದಿನ ಇನ್ಸ್’ಪೆಕ್ಟರ್ ಜಿ. ದೇವರಾಜ್ ಅವರು ಪ್ರಕರಣದ ತನಿಖೆ ನಡೆಸಿದ್ದರು. ನ್ಯಾಯಾಲಯಕ್ಕೆ ಆರೋಪಪಟ್ಟಿ (chargesheet) ದಾಖಲಿಸಿದ್ದರು.