
shimoga | thirthahalli | ತೀರ್ಥಹಳ್ಳಿ : ಗುಂಡು ಹಾರಿಸಿ ಕೊಲೆಗೆ ಯತ್ನ – 5 ವರ್ಷ ಕಠಿಣ ಜೈಲು ಶಿಕ್ಷೆ!
ಶಿವಮೊಗ್ಗ (shivamogga), ಸೆ. 13: ಜಮೀನಿಗೆ ಹೋಗುವ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ, ವ್ಯಕ್ತಿಯೋರ್ವರ ಮೇಲೆ ಕೋವಿಯಿಂದ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ್ದ (attempt murder) ವ್ಯಕ್ತಿಗೆ, 5 ವರ್ಷ ಕಠಿಣ ಜೈಲು ಶಿಕ್ಷೆ (rigorous imprisonment) ವಿಧಿಸಿ, ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 13-09-2024 ರಂದು ತೀರ್ಪು ನೀಡಿದೆ.
ತೀರ್ಥಹಳ್ಳಿ (thirthahalli) ತಾಲೂಕು ಜಟ್ಟಿನಮಕ್ಕಿ ಗ್ರಾಮದ ನಿವಾಸಿ ಅಶೋಕ (62) ಶಿಕ್ಷೆಗೆ ಗುರಿಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಶಿಕ್ಷೆಯ ಜೊತೆಗೆ 50 ಸಾವಿರ ರೂ. ದಂಡ (fine) ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 5 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ (court judgement).
ದಂಡದ ಮೊತ್ತದಲ್ಲಿ ಗಾಯಾಳುಗೆ ಪರಿಹಾರ ರೂಪದಲ್ಲಿ 25 ಸಾವಿರ ರೂ. ಪಾವತಿಸುವಂತೆ, ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಅವರು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸುರೇಶ್ ಕುಮಾರ್ ಎ. ಎಂ. ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ : ಶಿಕ್ಷೆಗೊಳಗಾದ (convicted) ಅಶೋಕ್ ಹಾಗೂ ಜಟ್ಟಿನಮಕ್ಕಿ ಗ್ರಾಮದ ಕೃಷ್ಣಮೂರ್ತಿ (64) ಎಂಬುವರ ನಡುವೆ ಜಾಗದ ವಿಚಾರದ ಕುರಿತಂತೆ ವೈಮನಸ್ಸಿತ್ತು.ಅಶೋಕ್ ಅವರ ಮನೆಯ ಪಕ್ಕದ ಜಾಗದ ಮೂಲಕ, ಕೃಷ್ಣಮೂರ್ತಿ ಅವರು ತಮ್ಮ ಜಮೀನಿಗೆ ಓಡಾಡುತ್ತಿದ್ದರು. ಈ ಬಗ್ಗೆ ಇಬ್ಬರ ನಡುವೆ, ಕಳೆದ ಹಲವು ವರ್ಷಗಳಿಂದ ಜಗಳವಿತ್ತು.
23-04-2018 ರಂದು ಬೆಳಿಗ್ಗೆ ಕೃಷ್ಣಮೂರ್ತಿಯವರು, ಎಂದಿನಂತೆ ಅಶೋಕ್ ಅವರ ಮನೆಯ ಪಕ್ಕದ ಜಾಗದ ಮೂಲಕ ಜಮೀನಿಗೆ ತೆರಳುತ್ತಿದ್ದರು. ಈ ವೇಳೆ ಕೊಲೆ ಮಾಡುವ ಉದ್ದೇಶದಿಂದ ಅಶೋಕ್ ತನ್ನ ಬಳಿಯಿದ್ದ ನಾಡ ಬಂದೂಕಿನ ಮೂಲಕ, ಕೃಷ್ಣಮೂರ್ತಿಯವರ ಮೇಲೆ ಗುಂಡು ಹಾರಿಸಿದ್ದ.
ಸದರಿ ಗುಂಡು ಕೃಷ್ಣಮೂರ್ತಿಯವರ ಕುತ್ತಿಗೆಗೆ ಬಿದ್ದು, ತೀವ್ರ ಸ್ವರೂಪದ ರಕ್ತ ಗಾಯವಾಗಿತ್ತು. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆ (thirthahalli police station) ಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾಗಿದ್ದ ತೀರ್ಥಹಳ್ಳಿ ಠಾಣೆ ಇನ್ಸ್’ಪೆಕ್ಟರ್ ಸುರೇಶ್ ಅವರು ನ್ಯಾಯಾಲಯಕ್ಕೆ ಆರೋಪಪಟ್ಟಿ (chargesheet) ದಾಖಲಿಸಿದ್ದರು.