
shimoga | ಶಿವಮೊಗ್ಗ : ಸರ್ಕಾರದಿಂದ ಕೆರೆ ಕಾಲುವೆ ಮಂಜೂರು – ಗಮನಹರಿಸುವರೆ ಶಾಸಕರು?
ಶಿವಮೊಗ್ಗ (shivamogga), ಸೆ. 26: ಶಿವಮೊಗ್ಗ ತಾಲೂಕಿನ ಹೊರವಲಯ ಬಸವನಗಂಗೂರು ಗ್ರಾಮದ ಹಿರೇಕೆರೆಯ ಕೋಡಿ ನೀರು ಹರಿದು ಹೋಗುವ ರಾಜ ಕಾಲುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿ, ಅನುದಾನ ಮಂಜೂರು ಮಾಡಿದೆ.
ಕಾಲುವೆ ಅವ್ಯವಸ್ಥೆಯಿಂದ ಬಸವನಗಂಗೂರು ಹಾಗೂ ಗೆಜ್ಜೇನಹಳ್ಳಿ ಗ್ರಾಮಗಳ ಕೆರೆಗಳು ಕೋಡಿ ಬಿದ್ದ ವೇಳೆ, ಕೆರೆ ನೀರು ತಗ್ಗು ಪ್ರದೇಶದಲ್ಲಿರುವ ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿತ್ತು. ಇದರಿಂದ ಸಾರ್ವಜನಿಕರು ತೀವ್ರ ಕಿರಿಕಿರಿ ಎದುರಿಸುವಂತಾಗಿತ್ತು.
ಕೆರೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿಕೊಂಡು ಬಂದಿದ್ದರು. ಕಳೆದ ವರ್ಷ ಮಹಾನಗರ ಪಾಲಿಕೆ ಆಡಳಿತವು ತನ್ನ ವ್ಯಾಪ್ತಿಯ ಪ್ರದೇಶದಲ್ಲಿ ಸಣ್ಣ ರಾಜಕಾಲುವೆ ನಿರ್ಮಾಣ ಮಾಡಿತ್ತು.
ಇದೀಗ ಸಣ್ಣ ನೀರಾವರಿ ಇಲಾಖೆಯು, ರಾಜಕಾಲುವೆ ನಿರ್ಮಾಣ ಕಾಮಗಾರಿ ಆರಂಭಿಸಿದೆ. ಇದರಿಂದ ಭವಿಷ್ಯದಲ್ಲಿ ಜಲಾವೃತ ಸ್ಥಿತಿ ಕಡಿಮೆಯಾಗುವ ವಿಶ್ವಾಸ ಸ್ಥಳೀಯ ನಾಗರೀಕರದ್ದಾಗಿದೆ.
ಗುಣಮಟ್ಟ ಕಾಯ್ದುಕೊಳ್ಳಬೇಕು : ಈ ಹಿಂದೆ ಪಾಲಿಕೆ ಆಡಳಿತ (corporation) ನಿರ್ಮಿಸಿದ ರಾಜ ಕಾಲುವೆಯ ಡಸ್ಕ್ ಸ್ಲ್ಯಾಬ್ ಕಿತ್ತು ಹೋಗುತ್ತಿದೆ. ಇದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.
ಈ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಸಿದ್ದಪಡಿಸಿರುವ ಅಂದಾಜು ಪಟ್ಟಿಗೆ ಅನುಗುಣವಾಗಿ, ರಾಜಕಾಲುವೆ ನಿರ್ಮಾಣವಾಗಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಲೋಪಕ್ಕೆ ಆಸ್ಪದವಾಗದಂತೆ ಎಚ್ಚರವಹಿಸಬೇಕು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯಾನಾಯ್ಕ್ (shimoga rural assembly mla puryanaik) ಅವರು ಕಾಲುವೆ ಕಾಮಗಾರಿ ಪರಿಶೀಲಿಸಿ ಸಂಬಂಧಿಸಿದವರಿಗೆ ಅಗತ್ಯ ಸಲಹೆ – ಸೂಚನೆ ನೀಡಬೇಕು ಎಂದು ಸ್ಥಳೀಯ ನಾಗರೀಕರು ಮನವಿ ಮಾಡಿದ್ದಾರೆ.