
shimoga | ಶಿವಮೊಗ್ಗ : ನೀರಿನಲ್ಲಿ ಕೊಚ್ಚಿ ಹೋಗಿದ್ದ ಬೈಕ್ ಸವಾರನ ಮೃತದೇಹ ಪತ್ತೆ!
ಶಿವಮೊಗ್ಗ (shivamogga), ಅ. 11: ಇತ್ತೀಚೆಗೆ ಶಿವಮೊಗ್ಗ ತಾಲೂಕಿನ ಯಡವಾಲ – ಹಿಟ್ಟೂರು ನಡುವಿನ ರಸ್ತೆಯಲ್ಲಿ, ಬೈಕ್ ಸಮೇತ ಕೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಸವಾರನ ಮೃತದೇಹ ಅ. 11 ರ ಶುಕ್ರವಾರ ಪತ್ತೆಯಾಗಿದೆ.
ನ್ಯಾಮತಿ ತಾಲೂಕು ಚಿನ್ನಿಕಟ್ಟೆ ನಿವಾಸಿ ಇಕ್ಬಾಲ್ (40) ಎಂಬುವರೇ, ರಸ್ತೆ ಮೇಲೆ ಉಕ್ಕಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋದವರು. ಎರಡು ದಿನಗಳ ನಂತರ ಅವರ ಮೃತದೇಹ ಪತ್ತೆಯಾಗಿದೆ.
ನೀರಿನಲ್ಲಿ ಶವ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯ ಗ್ರಾಮಸ್ಥರು ಕುಂಸಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ, ಮೃತದೇಹವನ್ನು ವಾರಸುದಾರರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ.
ಘಟನೆ ಹಿನ್ನೆಲೆ : ಅ. 8 ರ ರಾತ್ರಿ ಬಿದ್ದ ಭಾರೀ ಮಳೆಯಿಂದ, ಯಡವಾಲ – ಹಿಟ್ಟೂರು ನಡುವಿನ ರಸ್ತೆಯ ಮೇಲೆಯೇ ಭಾರೀ ಪ್ರಮಾಣದ ಕೆರೆ ನೀರು ಹರಿಯುತ್ತಿತ್ತು. ಅ. 9 ರ ಮಧ್ಯಾಹ್ನ ಇಕ್ಬಾಲ್ ಅವರು ಜಲಾವೃತವಾಗಿದ್ದ ರಸ್ತೆಯಲ್ಲಿಯೇ ಬೈಕ್ ಚಲಾಯಿಸಿಕೊಂಡು ಹೊರಟಿದ್ದರು.
ಆದರೆ ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ್ದ ಅಗ್ನಿಶಾಮಕ ದಳ ತಂಡವು, ಸತತ ಎರಡು ದಿನಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿತ್ತು.
ಆದರೆ ಇಕ್ಬಾಲ್ ಅವರ ಸುಳಿವು ಪತ್ತೆಯಾಗಿರಲಿಲ್ಲ. ಅ. 10 ರಂದು ಬೈಕ್ ಪತ್ತೆಯಾಗಿತ್ತು. ಅ. 11 ರಂದು ಘಟನಾ ಸ್ಥಳದಿಂದ ಸರಿಸುಮಾರು 1 ಕಿ.ಮೀ. ದೂರದಲ್ಲಿ ಇಕ್ಬಾಲ್ ಅವರ ಮೃತದೇಹ ಪತ್ತೆಯಾಗಿದೆ.
Recently, on the road between Yadawala and Hittur in Shimoga taluk, the dead body of a rider who was washed away in the lake along with his bike was found on Friday. Iqbal (40), a resident of Chinnikatte, Nyamati taluk, was washed away by the overflowing water on the road. His dead body was found two days later.