
shimoga dasara | ಶಿವಮೊಗ್ಗ : ಮಳೆಯ ನಡುವೆಯೇ ಸಂಪನ್ನಗೊಂಡ ದಸರಾ ಸಂಭ್ರಮ!
ಶಿವಮೊಗ್ಗ (shivamogga), ಅ. 12: ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಹಮ್ಮಿಕೊಂಡಿದ್ದ 9 ದಿನಗಳ ನವರಾತ್ರಿ ಸಂಭ್ರಮಕ್ಕೆ, ಶನಿವಾರ ಸಂಜೆ ಫ್ರೀಡಂ ಪಾರ್ಕ್ ನಲ್ಲಿ ಸಾಂಪ್ರದಾಯಿಕ ಅಂಬು ಛೇದನದ ಮೂಲಕ ಅಂತಿಮ ತೆರೆ ಬಿದ್ದಿತು. ಆದರೆ ಧಾರಾಕಾರ ಮಳೆಯು, ಹಬ್ಬದ ಸಂಭ್ರಮಕ್ಕೆ ಕೊಂಚ ಅಡೆತಡೆ ಉಂಟು ಮಾಡಿತು.
ತಹಶೀಲ್ದಾರ್ ಬಿ ಎನ್ ಗಿರೀಶ್ ಅವರು ಅಂಬು ಛೇದನ (ಬಾಳೆ ಗಿಡ) ಮಾಡುವ ಮೂಲಕ, ಬನ್ನಿ ಮುಡಿಯುವ ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಂಬು ಛೇದನವಾಗುತ್ತಿದ್ದಂತೆ, ನಾಗರೀಕರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ವಿನಿಮ ಮಾಡಿಕೊಂಡರು.
ಅಡೆತಡೆ : ಸಂಜೆ ವೇಳೆ ಬಿದ್ದ ಧಾರಾಕಾರ ಮಳೆಯಿಂದ, ಕಾರ್ಯಕ್ರಮದಲ್ಲಿ ಸಾಕಷ್ಟು ಅಡೆತಡೆ ಉಂಟಾಗುವಂತಾಯಿತು. ಮಳೆಯಲ್ಲಿ ಬೃಹತ್ ರಾವಣ ಪ್ರತಿಕೃತಿ ನೆನೆದಿದ್ದ ಕಾರಣದಿಂದ, ಬೆಂಕಿ ಹಚ್ಚಿ ಸುಡಲು ಸಾಧ್ಯವಾಗಲಿಲ್ಲ.
ನಂತರ ಕೆಳಕ್ಕೆ ಬೀಳಿಸಿ ಸುಡುವ ಪ್ರಯತ್ನ ನಡೆಸಲಾಯಿತು. ನಂತರ ಸಿಡಿಮದ್ದುಗಳ ಪ್ರದರ್ಶನ ನಡೆಯಿತು. ಫ್ರೀಡಂ ಪಾರ್ಕ್ ನಲ್ಲಿ ಎಂದಿನಂತೆ ಸಾವಿರಾರು ಜನ ಸೇರಿದ್ದರು. ಆದರೆ ಧಾರಾಕಾರ ಮಳೆಯು ನಾಗರೀಕರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡಿತು.
ಮೆರವಣಿಗೆ : ಇದಕ್ಕೂ ಮೊದಲು ಚಾಮುಂಡೇಶ್ವರಿ ದೇವರ ಮೂರ್ತಿಯನ್ನು ಮೆರವಣಿಗೆಯಲ್ಲಿ ಫ್ರೀಡಂ ಪಾರ್ಕ್ ಗೆ ತರಲಾಯಿತು. ಸಕ್ರೆಬೈಲು ಆನೆ ಬಿಡಾರದ ಮೂರು ಆನೆಗಳು, ಪ್ರಮುಖ ಆಕರ್ಷಣೆಯಾಗಿದ್ದವು. ಸಾಗರ್ ಆನೆ ಮೇಲೆ ಬೆಳ್ಳಿಯ ಅಂಬಾರಿಯಿಟ್ಟು, ಅದರಲ್ಲಿ ಚಾಮುಂಡೇಶ್ವರಿ ದೇವರ ಮೂರ್ತಿಯ ವಿಗ್ರಹವಿರಿಸಲಾಗಿತ್ತು.
ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೆರವಣಿಗೆಯಲ್ಲಿ ಕಲಾ ತಂಡಗಳ ಸಂಖ್ಯೆ ಕಡಿಮೆಯಿತ್ತು. ಶಿವಮೊಗ್ಗ ನಗರ ಹಾಗೂ ಹೊರವಲಯದ ಪ್ರದೇಶಗಳ ದೇವಾಲಯಗಳ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳ ಮೂಲಕ ಮೆರವಣಿಗೆ ಸಾಗಿತು.