
shimoga | ಶಿವಮೊಗ್ಗ : ಸಾಲುಸಾಲು ಭಿಕ್ಷುಕ, ನಿರ್ಗತಿಕ ವ್ಯಕ್ತಿಗಳ ಸಾವು ! – ಕಣ್ಮುಚ್ಚಿ ಕುಳಿತಿದೆಯೇ ಆಡಳಿತ ವ್ಯವಸ್ಥೆ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಅ. 24: ಶಿವಮೊಗ್ಗ ನಗರದ ಸಾರ್ವಜನಿಕ ಸ್ಥಳಗಳಲ್ಲಿ, ಇತ್ತೀಚೆಗೆ ಭಿಕ್ಷುಕರು ಹಾಗೂ ನಿರ್ಗತಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಿದ್ದಾರೆ. ಜೊತೆಗೆ ರೋಗರುಜುನ ಸೇರಿದಂತೆ ನಾನಾ ಕಾರಣಗಳಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ!
ಆದರೆ ದುರಂತದ ಸಂಗತಿ ಎಂದರೇ, ಭಿಕ್ಷುಕರು ಹಾಗೂ ನಿರ್ಗತಿಕ ವ್ಯಕ್ತಿಗಳಿಗೆ ನೆರವಾಗಲೆಂದೇ ಇರುವ ಇಲಾಖೆಗಳು ಹಾಗೂ ಸರ್ಕಾರದಿಂದ ನೆರವು ಪಡೆಯುವ ಸಂಘಸಂಸ್ಥೆಗಳಿಗೆ ಇವರು ಕಾಣದಿರುವುದು..!
ಇದರಿಂದ ಅನಾರೋಗ್ಯ, ಸೂಕ್ತ ಆರೈಕೆ, ಊಟೋಪಚಾರದ ಕೊರತೆ ಸೇರಿದಂತೆ ನಾನಾ ಕಾರಣಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವಿಗೀಡಾಗುತ್ತಿದ್ದಾರೆ. ಇದು ನಾಗರೀಕ ಸಮಾಜ ತಲೆತಗ್ಗಿಸುವಂತದ್ದಾಗಿದೆ!
ಸಿಗದ ನೆರವು : ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಕು – ನಿರ್ಗತಿಕ ವ್ಯಕ್ತಿಗಳು ಅಸ್ವಸ್ಥಗೊಂಡು ಸಂಕಷ್ಟಕ್ಕೀಡಾದ ವೇಳೆ, ಅವರ ನೆರವಿಗೆ ಧಾವಿಸುವ ನಾಗರೀಕರ ಸಂಖ್ಯೆ ಕೂಡ ಕಡಿಮೆಯಾಗುತ್ತಿದೆ. ಕೊನೆಯದಾಗಿ ಪೊಲೀಸ್ ಇಲಾಖೆಗೆ ಮಾಹಿತಿ ರವಾನೆಯಾಗಿ, ಪೊಲೀಸರು ಆಸ್ಪತ್ರೆಗೆ ದಾಖಲಿಸಲು ನೆರವಾಗಬೇಕಾದ ಸ್ಥಿತಿ ಕಂಡುಬರುತ್ತಿದೆ.
ಏನ್ಮಾಡುತ್ತಿದ್ದಾರೆ? : ಭಿಕ್ಷುಕರು, ಪರಿತ್ಯಕ್ತ, ನಿರ್ಗತಿಕರಿಗೆ ನೆರವಾಗಲು ಮಾನವೀಯ ಹಾಗೂ ಸಾಮಾಜಿಕ ಕಳಕಳಿಯ ಉದ್ದೇಶದಿಂದ ಸರ್ಕಾರಗಳು ಕೋಟ್ಯಾಂತರ ರೂಪಾಯಿ ಅನುದಾನ ನೀಡುತ್ತಿವೆ. ನಗರ-ಪಟ್ಟಣಗಳ ಸ್ಥಳಿಯಾಡಳಿತಗಳು ಕೂಡ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿವೆ. ಇವರಿಗಾಗಿಯೇ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಆದರೆ ಅದೆಷ್ಟೊ ಭಿಕ್ಷುಕರು – ನಿರ್ಗತಿಕರ ಪಾಲಿಗೆ, ಇವ್ಯಾವ ಮಾನವೀಯ ಕಾರ್ಯಗಳ ಕಿಂಚಿತ್ತೂ ನೆರವಿನ ಹಸ್ತ ದೊರಕುತ್ತಿಲ್ಲ. ಕುಟುಂಬ – ಸಮಾಜದ ನಿರ್ಲಕ್ಷ್ಯಕ್ಕೆ ತುತ್ತಾಗಿ, ನಾನಾ ದುಶ್ಚಟಗಳ ದಾಸರಾಗುತ್ತಿದ್ದಾರೆ.
ಹಾದಿಬೀದಿಗಳಲ್ಲಿ ಬದುಕಿ, ಅಲ್ಲಿಯೇ ತಮ್ಮ ಇಹಲೋಕದ ಯಾತ್ರೆ ಮುಗಿಸುವಂತಾಗಿದೆ. ಇದು ನಾಗರೀಕ ಸಮಾಜದ ಅನಾಗರೀಕತೆಯಾಗಿದೆ ಎಂದು ಮಾನವೀಯ ಕಳಕಳಿಯುಳ್ಳವರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಎಚ್ಚೆತ್ತುಕೊಳ್ಳಲಿ : ಇನ್ನಾದರೂ ಸಂಬಂಧಿಸಿದ ಇಲಾಖೆಗಳು ಹಾಗೂ ನಿರ್ಗತಿಕರ ಶ್ರೇಯೋಭಿವೃದ್ದಿಗೆ ಶ್ರಮಿಸುವುದಾಗಿ ಹೇಳಿ, ಸರ್ಕಾರದಿಂದ ಅನುದಾನ ಪಡೆಯುವ ಸಂಘಸಂಸ್ಥೆಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಭಿಕ್ಷುಕರು, ನಿರ್ಗತಿಕರಿಗೆ ನೆರವಾಗುವ ಪ್ರಾಮಾಣಿಕ ಕಾರ್ಯ ನಡೆಸಬೇಕಾಗಿದೆ. ಸರ್ಕಾರದಿಂದ ದೊರಕಬೇಕಾದ ಸೌಲಭ್ಯಗಳನ್ನು ತಲುಪಿಸುವ ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಕಾರ್ಯ ನಡೆಸಬೇಕು ಎಂದು ಪ್ರಜ್ಞಾವಂತ ನಾಗರೀಕರು ಆಗ್ರಹಿಸುತ್ತಾರೆ.
ಅಂತ್ಯ ಸಂಸ್ಕಾರಕ್ಕೂ ಸಹಕರಿಸದ ಪಾಲಿಕೆ ಆಡಳಿತ!
*** ಶಿವಮೊಗ್ಗ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷುಕರು – ನಿರ್ಗತಿಕರು ಮೃತಪಟ್ಟ ವೇಳೆ, ಪೊಲೀಸ್ ಇಲಾಖೆಯು ಮೃತದೇಹಗಳನ್ನು ನಿಯಮಾನುಸಾರ ಅಂತ್ಯ ಸಂಸ್ಕಾರ ನಡೆಸಿಕೊಂಡು ಬರುತ್ತಿದೆ. ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸುವುದರಿಂದಿಡಿದು, ಸ್ಮಶಾನಕ್ಕೆ ಕೊಂಡೊಯ್ದು ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಆದರೆ ಮಹಾನಗರ ಪಾಲಿಕೆ ಆಡಳಿತದಿಂದ ಸಕಾಲದಲ್ಲಿ ನೆರವಿನಹಸ್ತ ಸಿಗುತ್ತಿಲ್ಲ. ಸಾಕಷ್ಟು ಬಾರಿ ಮೃತದೇಹಗಳ ಸಾಗಾಣೆಗೆ, ಪಾಲಿಕೆ ಆಡಳಿತದಲ್ಲಿರುವ ಶವ ಸಾಗಾಣೆ ಮಾಡುವ ವಾಹನಗಳ ವ್ಯವಸ್ಥೆಯೂ ದೊರಕುವುದಿಲ್ಲ. ಕಿಂಚಿತ್ತೂ ನೆರವಿನಹಸ್ತವು ಲಭ್ಯವಾಗುವುದಿಲ್ಲ ಎಂದು ಪೊಲೀಸ್ ಇಲಾಖೆಯ ಮೂಲಗಳು ಹೇಳುತ್ತವೆ.