
ಸಾಲುಸಾಲು ಭಿಕ್ಷುಕರು, ಅನಾಮಧೇಯ ವ್ಯಕ್ತಿಗಳ ಸಾವು ಪ್ರಕರಣ : ಶಿವಮೊಗ್ಗಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದ ಬೆಂಗಳೂರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ!
ವಿಶೇಷ ವರದಿ : ಬಿ. ರೇಣುಕೇಶ್
ಶಿವಮೊಗ್ಗ (shimoga), ಅ. 29: ಇತ್ತೀಚೆಗೆ ಶಿವಮೊಗ್ಗ ನಗರದ ಸಾರ್ವಜನಿಕ ಸ್ಥಗಳಲ್ಲಿ ಭಿಕ್ಷುಕರು – ಅನಾಮಧೇಯ ವ್ಯಕ್ತಿಗಳ ಸಾವಿನ ಪ್ರಕರಣ ಹೆಚ್ಚಾಗುತ್ತಿರುವ ಕುರಿತಂತೆ ವರದಿ ಪ್ರಕಟಗೊಂಡ ಬೆನ್ನಲ್ಲೇ, ಸಮಾಜ ಕಲ್ಯಾಣ ಇಲಾಖೆ ಎಚ್ಚೆತ್ತುಕೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿರುವ ಭಿಕ್ಷುಕರು – ಅನಾಮಧೇಯ ವ್ಯಕ್ತಿಗಳನ್ನು ನಿರಾಶ್ರಿತರ ಕೇಂದ್ರಕ್ಕೆ ದಾಖಲಿಸಿಕೊಂಡು, ಅಗತ್ಯ ನೆರವು ಕಲ್ಪಿಸಲು ಮುಂದಾಗಿದೆ!
ಹೌದು. ಶಿವಮೊಗ್ಗ ನಗರದ ಬಸ್ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ, ಭಿಕ್ಷುಕರು ಹಾಗೂ ಅನಾಮಧೇಯ ವ್ಯಕ್ತಿಗಳ ಹೆಚ್ಚಾಗುತ್ತಿದ್ದಾರೆ. ನಾನಾ ರೋಗರುಜುನ, ಊಟೋಪಚಾರ, ಆರೈಕೆಯ ಕೊರತೆಯಿಂದ ಸಾವನ್ನಪ್ಪುವವರ ಸಂಖ್ಯೆ ಕೂಡ ಹೆಚ್ಚುತ್ತಿರುವ ಕುರಿತಂತೆ ‘ಉದಯ ಸಾಕ್ಷಿ’ ನ್ಯೂಸ್ ವೆಬ್’ಸೈಟ್ ಸವಿಸ್ತರವಾದ ಮಾನವೀಯ ವರದಿ ಪ್ರಕಟಿಸಿತ್ತು.
ಸದರಿ ವರದಿಯನ್ನು ಟ್ವಟಿರ್ ಸಾಮಾಜಿಕ ತಾಣದಲ್ಲಿ ಗಮನಿಸಿದ ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆ, ತ್ವರಿತವಾಗಿ ಸ್ಪಂದಿಸುವ ಕಾರ್ಯ ನಡೆಸಿದೆ. ‘ಕೇಂದ್ರ ಪರಿಹಾರ ಸಮಿತಿ ಕಾರ್ಯದರ್ಶಿಗಳು, ಶಿವಮೊಗ್ಗಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ’ ಎಂದು ಸಮಾಜ ಕಲ್ಯಾಣ ಇಲಾಖೆಯು ತನ್ನ ಅಧಿಕೃತ ಟ್ವಟಿರ್ ಖಾತೆಯಲ್ಲಿ ತಿಳಿಸಿದೆ.
ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ – 1975 ರ ನಿಯಮದಂತೆ ಅಗತ್ಯ ಕ್ರಮಕೈಗೊಳ್ಳಲು ನಿರಾಶ್ರಿತರ ಕೇಂದ್ರದ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ವಿವಿಧ ಇಲಾಖೆಗಳ ಸಹಯೋಗದಲ್ಲಿ ಶಿವಮೊಗ್ಗ ನಗರವನ್ನು ಭಿಕ್ಷುಕರ ಮುಕ್ತ ನಗರವನ್ನಾಗಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆಯು ತನ್ನ ಟ್ವಿಟರ್ ಸಂದೇಶದಲ್ಲಿ ತಿಳಿಸಿದೆ.
ಸ್ಥಳಾಂತರ : ವರದಿ ಪ್ರಕಟಗೊಂಡ ಬೆನ್ನಲ್ಲೇ, ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುವ ಭಿಕ್ಷುಕರು, ನಿರ್ಗತಿಕ ವ್ಯಕ್ತಿಗಳನ್ನು ನಗರದ ಹೊರವಲಯ ತ್ಯಾವರೆಕೊಪ್ಪದಲ್ಲಿರುವ ನಿರಾಶ್ರಿತ ಕೇಂದ್ರಕ್ಕೆ ಕರೆದೊಯ್ದು ನಿಯಮಾನುಸಾರ ಅಗತ್ಯ ನೆರವಿನಹಸ್ತ ಕಲ್ಪಿಸುತ್ತಿರುವ ಮಾಹಿತಿಗಳು ಬಂದಿವೆ.
‘ನಿರಾಶ್ರಿತರ ಕೇಂದ್ರದಲ್ಲಿ ಸಕಲ ಸೌಲಭ್ಯ’ : ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲೇಶಪ್ಪ
*** ‘ಶಿವಮೊಗ್ಗದ ಹೊರವಲಯ ತ್ಯಾವರೆಕೊಪ್ಪದಲ್ಲಿರುವ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ವಸತಿ, ಊಟೋಪಚಾರ, ವೈದ್ಯಕೀಯ ಸೌಲಭ್ಯ ಸೇರಿದಂತೆ ನೆಮ್ಮದಿಯಾಗಿ ಜೀವನ ನಿರ್ವಹಣೆ ಮಾಡಲು ಅಗತ್ಯವಾದ ಸೌಲಭ್ಯವಿದೆ. ಕೆಲಸಕಾರ್ಯ ಮಾಡಲು ಇಚ್ಚಿಸುವವರಿಗೆ ಕೃಷಿ, ತೋಟಗಾರಿಕೆ ಕೆಲಸ ಮಾಡಲು ಅವಕಾಶವಿದೆ. ಇದಕ್ಕೆ ಸೂಕ್ತ ವೇತನ ಕೂಡ ನೀಡಲಾಗುತ್ತದೆ’ ಎಂದು ಶಿವಮೊಗ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಮಲ್ಲೇಶಪ್ಪ ಅವರು ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಭಿಕ್ಷುಕರ ಪುನರ್ವಸತಿ : ಏನ್ಮಾಡುತ್ತಿದೆ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ?
*** ಶಿವಮೊಗ್ಗ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಸಾಲುಸಾಲು ಭಿಕ್ಷುಕರು, ನಿರ್ಗತಿಕ ವ್ಯಕ್ತಿಗಳು ಸಾವನ್ನಪ್ಪುತ್ತಿದ್ದಾರೆ. ಆದರೆ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ನಿಜಕ್ಕೂ ಅಮಾನವೀಯ ಸಂಗತಿಯಾಗಿದೆ..! ಭಿಕ್ಷಕುರ ಪುನರ್ವಸತಿಗೆಂದೆ ಪ್ರತ್ಯೇಕ ಸೆಸ್ ನ್ನು, ಮಹಾನಗರ ಪಾಲಿಕೆ ಆಡಳಿತವು ನಾಗರೀಕರಿಂದ ಸಂಗ್ರಹಿಸುವ ತೆರಿಗೆ ವೇಳೆ ವಸೂಲಿ ಮಾಡುತ್ತದೆ.
ಆದರೆ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿರುವ ಭಿಕ್ಷುಕರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಿ ಸೂಕ್ತ ಸೌಲಭ್ಯ ಕಲ್ಪಿಸುವ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಹಾಗೆಯೇ ಇಂತಹ ವ್ಯಕ್ತಿಗಳು ಅಸುನೀಗಿದ ವೇಳೆ ಅವರ ಮೃತದೇಹಗಳನ್ನು ಆಸ್ಪತ್ರೆ ಹಾಗೂ ಸ್ಮಶಾನಗಳಿಗೆ ಸ್ಥಳಾಂತರಿಸಲು ತನ್ನಲ್ಲಿರುವ ಆಂಬುಲೆನ್ಸ್ ಗಳನ್ನು ಕಳುಹಿಸುವುದಿಲ್ಲ ಎಂಬ ದೂರುಗಳು ಪೊಲೀಸ್ ಇಲಾಖೆ ವಲಯದಿಂದ ಬರುತ್ತದೆ.