
bengaluru | ಬೆಂಗಳೂರು : ಆಸ್ತಿ ವಿವರ ಸಲ್ಲಿಸದ ಸಚಿವರು, ಶಾಸಕರ ಪಟ್ಟಿ ಪ್ರಕಟಿಸಿದ ಲೋಕಾಯುಕ್ತ ಸಂಸ್ಥೆ!
ಬೆಂಗಳೂರು (bangalore), ನ. 12: ನಿಗದಿತ ಕಾಲಮಿತಿಯೊಳಗೆ ಆಸ್ತಿ ವಿವರ ಸಲ್ಲಿಸದ ಸಚಿವರು, ವಿಧಾನಸಭೆ ಶಾಸಕರು ಹಾಗೂ ವಿಧಾನ ಪರಿಷತ್ ಶಾಸಕರು (ಎಂಎಲ್’ಸಿ) ಗಳ ಪಟ್ಟಿಯನ್ನು ಲೋಕಾಯುಕ್ತ ಸಂಸ್ಥೆ ಪ್ರಕಟಿಸಿದೆ. ಈ ಕುರಿತಂತೆ ಪತ್ರಿಕೆಯಲ್ಲಿ ಜಾಹೀರಾತು ಬಿಡುಗಡೆ ಮಾಡಿ, ಸಾರ್ವಜನಿಕರ ಗಮನಕ್ಕೆ ತರುವ ಕಾರ್ಯ ನಡೆಸಿದೆ!
ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 (ಅಧಿನಿಯಮ) ಕಲಂ 22 (1), ಕಲಂ 7 ರ ಉಪ ಕಲಂ (1) ರಲ್ಲಿ ಉಲ್ಲೇಖಿಸಿರುವಂತೆ ಸರ್ಕಾರಿ ನೌಕರನಲ್ಲದ ಪ್ರತಿಯೋರ್ವ ಸಾರ್ವಜನಿಕ ನೌಕರನು, ಪ್ರತಿ ವರ್ಷ ಜೂನ್ 30 ರೊಳಗೆ ತನ್ನ ಹಾಗೂ ಕುಟುಂಬ ಸದಸ್ಯರ ಆಸ್ತಿ ವಿವರಗಳನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸುವುದು ಕಡ್ಡಾಯವಾಗಿದೆ.
ಕಾಲಮಿತಿಯೊಳಗೆ ಆಸ್ತಿ ವಿವರ ಸಲ್ಲಿಸದ ವಿಧಾನಸಭೆ ಹಾಗೂ ವಿಧಾನ ಪರಿಷತ್ ಶಾಸಕರುಗಳಿಗೆ, ಈಗಾಗಲೇ ಲೋಕಾಯುಕ್ತ ಸಂಸ್ಥೆ ನಿಯಮಾನುಸಾರ ವಿವರ ಸಲ್ಲಿಸುವಂತೆ ಸೂಚಿಸಿತ್ತು. ಆದಾಗ್ಯೂ ಇಲ್ಲಿಯವರೆಗೂ ಆಸ್ತಿ ವಿವರ ಸಲ್ಲಿಸದ ಶಾಸಕರುಗಳ ಪಟ್ಟಿಯನ್ನು ಲೋಕಾಯುಕ್ತ ಸಂಸ್ಥೆ ಪ್ರಕಟಿಸಿದೆ.
ಪ್ರಸ್ತುತ ಲೋಕಾಯುಕ್ತ ಸಂಸ್ಥೆ ಪ್ರಕಟಿಸಿರುವ ಪಟ್ಟಿಯಲ್ಲಿ 6 ಸಚಿವರು, 62 ವಿಧಾನಸಭೆ ಶಾಸಕರು ಹಾಗೂ 33 ವಿಧಾನ ಪರಿಷತ್ ಶಾಸಕರುಗಳ ಹೆಸರುಗಳಿವೆ. ಉಳಿದಂತೆ 2023-24 ನೇ ಸಾಲಿಗೆ ಸಂಬಂಧಿಸಿದಂತೆ, ನಿಗದಿತ ಕಾಲಾವಧಿ ಪೂರ್ಣಗೊಂಡ ನಂತರ, ತಲಾ ಓರ್ವ ವಿಧಾನಸಭೆ ಹಾಗೂ ವಿಧಾನ ಪರಿಷತ್ ಶಾಸಕರು ಆಸ್ತಿ ವಿವರ ಸಲ್ಲಿಸಿದ್ದಾರೆ ಎಂದು ಲೋಕಾಯುಕ್ತ ಸಂಸ್ಥೆ ತಿಳಿಸಿದೆ.
Lokayukta has published the list of Ministers, Legislative Assembly MLAs and Legislative Council MLAs (MLCs) who have not submitted asset details within the stipulated time frame. In this regard, an advertisement has been released in the newspaper and brought to the attention of the public!