Model Work of Young Officers: Free CET - NEET Training Program for Government College Students of Shimoga District! ಯುವ ಅಧಿಕಾರಿಗಳ ಮಾದರಿ ಕಾರ್ಯ : ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ - ನೀಟ್ ತರಬೇತಿ ಕಾರ್ಯಕ್ರಮ!

ಯುವ ಅಧಿಕಾರಿಗಳ ಸಾಹಸ : ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ – ನೀಟ್‌ ತರಬೇತಿ ಕಾರ್ಯಕ್ರಮ!

ಶಿವಮೊಗ್ಗ (shivamogga), ನ. 12: ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಎಂಬುದು ಅತ್ಯಂತ ನಿರ್ಣಾಯಕ ಘಟ್ಟವಾಗಿದೆ. ಇನ್ನೊಂದು ರೀತಿಯಲ್ಲಿ ಪಿಯುಸಿ ಅಧ್ಯಯನವು ಹಗ್ಗದ ಮೇಲಿನ ನಡಿಗೆಯಂತೆ. ಹದಿಹರೆಯದ ಮಕ್ಕಳಲ್ಲಿ ನೂರೆಂಟು ಕನಸುಗಳು ತುಂಬಿರುತ್ತವೆ. ಡಾಕ್ಟರ್ ಆಗಬೇಕು, ಐಐಟಿಯಲ್ಲಿ ಓದಿ ಇಂಜಿನಿಯರ್ ಆಗಬೇಕು ಎಂಬುವುದು ಸೇರಿದಂತೆ ನೂರೆಂಟು ಕನಸುಗಳನ್ನು ಮನದಲ್ಲಿ ತುಂಬಿಕೊಂಡು ವಿದ್ಯಾರ್ಥಿಗಳು ಪಿಯುಸಿ ವಿಜ್ಞಾನ ಸಂಯೋಜನೆಗೆ ಸೇರುತ್ತಾರೆ.

ಆದರೆ ತರಬೇತಿ ರಹಿತ ಅಧ್ಯಯನವು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಗ್ರಾಮಾಂತರ ಪ್ರದೇಶದ ಬಡ ಕುಟುಂಬದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳಿಗಂತೂ, ಪಿಯುಸಿ ನಂತರದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಗಗನಕುಸುಮವಾಗಿ ಪರಿಣಮಿಸಿದೆ. ಕೇಳಿದಷ್ಟು ಶುಲ್ಕ ಕೊಟ್ಟು ತರಬೇತಿ ಕೊಡಲು ಪೋಷಕರಿಗೂ ಕಷ್ಟವಾಗುತ್ತಿದೆ. ಕುಗ್ರಾಮಗಳಿಂದ ಬರುವ ರೈತ ಕಾರ್ಮಿಕರ ಮಕ್ಕಳಿಗಂತೂ ಕೆ-ಸಿಇಟಿ ನೀಟ್ ತರಬೇತಿಯಂತೂ ಕೈಗೆಟುಕದ ಸನ್ನಿವೇಶ ಸೃಷ್ಟಿಯಾಗುತ್ತಿದೆ.

ಜಿಲ್ಲೆಯ ಇಂತಹ ವಿದ್ಯಾರ್ಥಿಗಳ ಕನಸನ್ನು ನನಸಾಗಿಸಲು ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಪಂಚಾಯತ್ ಮತ್ತು ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಸಹಯೋಗದಲ್ಲಿ “LEAP-THE SMART WAY TO SUCCESS” ಎಂಬ ವಿನೂತನ ಸಿಇಟಿ-ನೀಟ್ ಪೂರ್ವ ಸಿದ್ಧತಾ ಕಾರ್ಯಕ್ರಮವನ್ನು ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ನಡೆಸಲು ಉದ್ದೇಶಿಸಲಾಗಿದೆ.

ಇದು ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೇಮಂತ್‌ ಎನ್‌ ರವರ ಕನಸಿನ ಕೂಸು. ಹೇಮಂತ್‌ ರವರು ಜಿಲ್ಲೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪಿಯೂಸಿ ಅಧ್ಯಯನ ಮಾಡುತ್ತಿರುವ, ಸಿಇಟಿ ತರಬೇತಿಯಿಂದ ವಂಚಿತರಾದ ನೂರಾರು ವಿದ್ಯಾರ್ಥಿಗಳ ಸಂಕಟವನ್ನು ಸ್ವತಃ ಮನಗಂಡು ಈ ಸಾಹಸಕ್ಕೆ ಕೈ ಹಾಕಿದ್ದಾರೆ.

ಹೇಮಂತ್‌ರವರು ಶಿವಮೊಗ್ಗದ ಡಿವಿಎಸ್‌ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಅಧ್ಯಯನ ಮಾಡಿದವರು. ಜಿಲ್ಲೆಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಬೆಂಬಲವಾಗಿ ನಿಲ್ಲಬೇಕೆಂಬ ಅವರ ನಿರಂತರ ಪ್ರಯತ್ನವೇ ಈ ಉಚಿತ ತರಬೇತಿ ಕಾರ್ಯಕ್ರಮದ ಅನುಷ್ಟಾನದ ಮೂಲಕ ಸಾಕ್ಷಾತ್ಕರವಾಗುತ್ತಿದೆ. ಇವರ ಜೊತೆಗೆ ಜಿಲ್ಲೆಯಲ್ಲಿ ಪ್ರಸ್ತುತ ಪ್ರೊಬೇಷನರಿ ಐಎಎಸ್‌ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕುಮಾರಿ ದೃಷ್ಟಿ ಜೈಸ್ವಾಲ್‌ ರವರ ಮಾರ್ಗದರ್ಶನವೂ ಈ ಕಾರ್ಯಕ್ರಮ ಸಾಕಾರಗೊಳ್ಳುವುದರಲ್ಲಿ ಮುಖ್ಯ ಪಾತ್ರ ವಹಿಸಿದೆ.

ಇದರಿಂದಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಕೆ-ಸಿಇಟಿ ನೀಟ್ ತರಬೇತಿಯನ್ನು ಉಚಿತವಾಗಿ ಪಡೆದು ಅತ್ಯುತ್ತಮ ಅಂಕ ಗಳಿಸಿ ಭವಿಷ್ಯದ ಪಿಯೂಸಿ ನಂತರದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ ತಮ್ಮ ಕನಸನ್ನು ನಿಜವಾಗಿಸಬಹುದಾಗಿದೆ. ಈ ಕಾರ್ಯಕ್ರಮದ ಲಾಭವನ್ನು ಶಿವಮೊಗ್ಗ ಜಿಲ್ಲೆಯ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ನಾಲ್ಕು ಸಾವಿರಕ್ಕೂ ಅಧಿಕ ಪಿಯುಸಿಯ ವಿದ್ಯಾರ್ಥಿಗಳು ಪಡೆಯಲಿದ್ದಾರೆ.

ಈ ಕಾರ್ಯಕ್ರಮವು ನವೆಂಬರ್ ಎರಡನೇ ವಾರದಿಂದ ಆರಂಭವಾಗಲಿದ್ದು, ಪ್ರತಿ ತಿಂಗಳು ಇದರಲ್ಲಿ ಅಧ್ಯಾಯವಾರು ಅಭ್ಯಾಸ ಪರೀಕ್ಷೆಗಳು ಸಿಇಟಿ ನೀಟ್ ಮಾದರಿಯಲ್ಲಿ ನಡೆಯಲಿವೆ. ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಪೂರ್ಣ ಪಠ್ಯಕ್ರಮಕ್ಕೆ ಅಣಕು ಪರೀಕ್ಷೆಗಳು ನಡೆಯಲಿವೆ. ಇದಕ್ಕೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲೆಯ ಅನುಭವಿ, ಸಮರ್ಥ ಉಪನ್ಯಾಸಕರು ತಯಾರಿಸಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಕಾಲೇಜುಗಳಲ್ಲಿಯೇ ಸಿದ್ಧತಾ ಪರೀಕ್ಷೆಗಳನ್ನು, ಅಣುಕು ಪರೀಕ್ಷೆಗಳನ್ನು ಬರೆಯಬಹುದಾಗಿದೆ.

ಹಾಗು ಪರೀಕ್ಷೆಗಳ ನಂತರ ಅನುಮಾನ ಪರಿಹಾರ ತರಗತಿಗಳು ಆನ್‌ಲೈನ್‌ನಲ್ಲಿ ನಡೆಯಲಿದ್ದು, ಇದರ ಮೂಲಕ ವಿದ್ಯಾರ್ಥಿಗಳು ತಜ್ಞ ಉಪನ್ಯಾಸಕರ ಜೊತೆ ಸಂವಾದ ನಡೆಸಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಅತ್ಯುತ್ತಮ ಸಾಧನೆ ಮಾಡಿದವರಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಲಾಗುತ್ತದೆ.

ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವ್ಯಾಸಂಗದ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದು ತಮ್ಮ ಕನಸಿನ ಉನ್ನತ ಶಿಕ್ಷಣಕ್ಕೆ ಸೇರಬಯಸುವ ಪ್ರಯತ್ನವನ್ನು ಯಶಸ್ಸು ಮಾಡಿಕೊಳ್ಳಬೇಕೆಂದು ಕರೆ ನೀಡಲಾಗಿದೆ.

In order to realize the dream of such students of the district, an innovative CET-NEET pre-preparation program called “LEAP-THE SMART WAY TO SUCCESS” in collaboration with Zilla Panchayat of Shimoga district and Department of School Education (Pre-Graduation) is intended to be conducted free of charge for all the students of Science Department of Government Pre-Graduate College of the district.

shimoga | lokayukta raid | ಶಿವಮೊಗ್ಗ : ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ! Shivamogga: Lokayukta police raid officer's house! Previous post bengaluru | ಬೆಂಗಳೂರು : ಆಸ್ತಿ ವಿವರ ಸಲ್ಲಿಸದ ಸಚಿವರು, ಶಾಸಕರ ಪಟ್ಟಿ ಪ್ರಕಟಿಸಿದ ಲೋಕಾಯುಕ್ತ ಸಂಸ್ಥೆ!
Shimoga Municipal Corporation Area Revision: Why the Negligence of the People's Representatives?! Reporter : B. Renukesh shimoga palike | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಜನಪ್ರತಿನಿಧಿಗಳ ನಿರ್ಲಕ್ಷ್ಯವೇಕೆ?! Next post shmoga | ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕಣ್ಮರೆಯಾದ ಜನಸ್ನೇಹಿ ಆಡಳಿತ..!