
ಸರ್ಕಾರಿ ಕೆಲಸ ಕೊಡಿಸುವುದಾಗಿ ಲೈಂಗಿಕ ದೌರ್ಜನ್ಯ, ಪೋಟೋಗಳ ಮೂಲಕ ಬ್ಲಾಕ್’ಮೇಲ್ ಮಾಡಿದ್ದವನಿಗೆ ಜೈಲು ಶಿಕ್ಷೆ!
ಶಿವಮೊಗ್ಗ (shivamogga), ನ. 11: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಪೋಟೋಗಳನ್ನಿಟ್ಟುಕೊಂಡು ಬ್ಲ್ಯಾಕ್’ಮೇಲ್ ಮಾಡುತ್ತಿದ್ದ ವ್ಯಕ್ತಿಯೋರ್ವನಿಗೆ, ಶಿವಮೊಗ್ಗದ 2 ನೇ ಜೆಎಂಎಫ್’ಸಿ ನ್ಯಾಯಾಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
62 ವರ್ಷದ ವ್ಯಕ್ತಿಯೇ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದು, 27 ವರ್ಷದ ಮಹಿಳೆ ದೂರುದಾರರಾಗಿದ್ದಾರೆ. 1 ವರ್ಷ 6 ತಿಂಗಳ ಸಾದಾ ಜೈಲು ಶಿಕ್ಷೆ, 40 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ 36 ಸಾವಿರ ರೂ.ಗಳನ್ನು ನೊಂದ ಮಹಿಳೆಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ನ್ಯಾಯಾಧೀಶರಾದ ಶಾರದಾ ಕೊಪ್ಪದರವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಕಿರಣ್ ಕುಮಾರ್ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ : 2016 ನೇ ಸಾಲಿನಲ್ಲಿ ಸದರಿ ಪ್ರಕರಣ ನಡೆದಿತ್ತು. ‘ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದರು. ಪೋಟೋಗಳನ್ನಿಟ್ಟುಕೊಂಡು, ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಲಾಗುತ್ತಿದೆ…’ ಎಂದು ನೊಂದ ಮಹಿಳೆಯು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದರ ಆಧಾರದ ಮೇಲೆ ಸದರಿ ವ್ಯಕ್ತಿಯ ವಿರುದ್ದ ಎಫ್ಐಆರ್ ದಾಖಲಾಗಿತ್ತು. ಅಂದಿನ ಸರ್ಕಲ್ ಇನ್ಸ್’ಪೆಕ್ಟರ್ ಚಂದ್ರಪ್ಪ ಕೆ ಅವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.
ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆಯು ನ. 11 ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ನ್ಯಾಯಾಲಯದ ತೀರ್ಪಿನ ಕುರಿತಂತೆ ಮಾಹಿತಿ ನೀಡಿದೆ.
The 2nd JMFC court in Shimoga has sentenced a person who sexually assaulted a woman and blackmailed her with photographs, believing that she would get a government job.